ನಗರದ ಪ್ರಮುಖ ಹಸಿರು ತಾಣವಾಗಿರುವ ಕಬ್ಬನ್‌ಪಾರ್ಕ್‌ನಲ್ಲಿ ಬೃಹತ್ ಹೂವಿನ ಲೋಕ ಅನಾವರಣಗೊಂಡಿದೆ. 13 ದಿನಗಳ ‘ಹೂವುಗಳ ಹಬ್ಬ- 2026’ ಫಲಪುಷ್ಪ ಪ್ರದರ್ಶನಕ್ಕೆ ಬುಧವಾರ ಚಾಲನೆ ದೊರಕಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರಮುಖ ಹಸಿರು ತಾಣವಾಗಿರುವ ಕಬ್ಬನ್‌ಪಾರ್ಕ್‌ನಲ್ಲಿ ಬೃಹತ್ ಹೂವಿನ ಲೋಕ ಅನಾವರಣಗೊಂಡಿದೆ. 13 ದಿನಗಳ ‘ಹೂವುಗಳ ಹಬ್ಬ- 2026’ ಫಲಪುಷ್ಪ ಪ್ರದರ್ಶನಕ್ಕೆ ಬುಧವಾರ ಚಾಲನೆ ದೊರಕಿದೆ.

ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಪ್ರಯುಕ್ತ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಈ ಪ್ರದರ್ಶನವು ನ.25ರಿಂದ ಡಿ.7ರವರೆಗೆ ನಡೆಯಲಿದೆ. ಸುಮಾರು 15 ಲಕ್ಷಕ್ಕೂ ಅಧಿಕ ಹೂವುಗಳು ಮತ್ತು 1.25 ಲಕ್ಷ ಅಲಂಕಾರಿಕ ಹೂವಿನ ಕುಂಡಗಳನ್ನು ಬಳಸಿ ಕಬ್ಬನ್‌ಪಾರ್ಕ್‌ನ ಫೌಂಟೇನ್ ವೃತ್ತದಿಂದ ಬ್ಯಾಂಡ್‌ಸ್ಟ್ಯಾಂಡ್ ಮಾರ್ಗವಾಗಿ ಬಾಲಭವನದವರೆಗೆ ಪುಷ್ಪ ಲೋಕವನ್ನು ಸೃಷ್ಟಿಸಲಾಗಿದೆ.

ಪ್ರದರ್ಶನದಲ್ಲಿ ತಾಯಿ ಭುವನೇಶ್ವರಿ, ಕರ್ನಾಟಕ ಭೂಪಟ, ಗಂಡ ಭೇರುಂಡ, ಇಂಡಿಯಾ ಗೇಟ್, ಮೆಟ್ರೋ ರೈಲು ಸೇರಿದಂತೆ ವಿವಿಧ ಮಾದರಿಯ ಕಲಾಕೃತಿಗಳು ಹೂವುಗಳಲ್ಲಿ ಅರಳಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಹಸಿರು ಹಾಗೂ ಕೆಂಪು ಬಣ್ಣದ ಮೆಣಸಿನಕಾಯಿಯಿಂದ ತಯಾರಿಸಿದ ದಸರಾ ಅಂಬಾರಿ, ಕನ್ನಡ ನಾಡಿನ ವೀರ ವನಿತೆಯರನ್ನು ಪರಿಚಯಿಸುವ ಅರ್ಧ ಚಂದ್ರಾಕೃತಿಯ ಸಸ್ಯೋದ್ಯಾನ ವಿಶೇಷವಾಗಿವೆ.

ವರ್ಟಿಕಲ್ ಗಾರ್ಡನ್, ತರಕಾರಿ ಮತ್ತು ಹೂವುಗಳ ಆನೆ, ಚಿಟ್ಟೆ ಹಾಗೂ ಮಕ್ಕಳನ್ನು ಆಕರ್ಷಿಸುವ ನರ್ತಿಸುವ ನವಿಲು, ಪಾಂಡಾ, ಸ್ಟಾರ್‌ಫಿಶ್ ಪ್ರತಿಕೃತಿಗಳು ಮಕ್ಕಳನ್ನು ಕೈಬೀಸಿ ಕರೆಯುತ್ತವೆ. ಮಾರಾಟ ಮಳಿಗೆಗಳ ವ್ಯವಸ್ಥೆಯೂ ಇದ್ದು, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು, ಕೈತೋಟಕ್ಕೆ ಬೇಕಾದ ವಸ್ತುಗಳು ಸೇರಿದಂತೆ ನಾನಾ ಮಾರಾಟ ಮಳಿಗೆಗಳನ್ನೂ ತೆರೆಯಲಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ. ಆರ್. ಗಿರೀಶ್, ರಾಜ್ಯದ ಇತಿಹಾಸ ಮತ್ತು ಪುಟಾಣಿಗಳ ಕಾರ್ಟೂನ್ ತಾರೆಗಳ ಭಿತ್ತಿಚಿತ್ರಗಳನ್ನು ಒಳಗೊಂಡಂತೆ ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಚೀನಾದಿಂದ ಆಮದು ಮಾಡಿಕೊಂಡಿರುವ ಪೈಥರ್ಸ್ ಸಸ್ಯವನ್ನು ಪ್ರದರ್ಶಿಸಿರುವುದು ವಿಶೇಷವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ವೆಂಕಟೇಶ್, ಹೆಚ್ಚುವರಿ ನಿರ್ದೇಶಕ ಡಾ. ಎಂ. ಜಗದೀಶ್, ಉಪ ನಿರ್ದೇಶಕಿ ಜಿ. ಕುಸುಮಾ ಮತ್ತಿತತರು ಉಪಸ್ಥಿತರಿದ್ದರು. ಇದೇ ವೇಳೆ ಕಬ್ಬನ್‌ಪಾರ್ಕ್ ಕುರಿತಾದ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು.

ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ: ಕಬ್ಬನ್‌ಪಾರ್ಕ್‌ ಫಲಪುಷ್ಪ ಪ್ರದರ್ಶನಕ್ಕೆ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಎಲ್ಲಾ ದಿನ ಉಚಿತ ಪ್ರವೇಶವಿದೆ.ಪ್ರವೇಶ ಶುಲ್ಕ

ವಯಸ್ಕರು (ಸಾಮಾನ್ಯ ದಿನಗಳು)-₹50

ವಯಸ್ಕರು (ರಜಾ ದಿನಗಳು)-₹80

ಮಕ್ಕಳು (ಎಲ್ಲಾ ದಿನಗಳು)-₹20

ಹೂವಿನ ಲೋಕ: ತಾಯಿ ಭುವನೇಶ್ವರಿ, ಕರ್ನಾಟಕ ಭೂಪಟ, ಗಂಡ ಭೇರುಂಡ, ಇಂಡಿಯಾ ಗೇಟ್, ಮೆಟ್ರೋ ರೈಲು ವರ್ಟಿಕಲ್ ಗಾರ್ಡನ್, ತರಕಾರಿ ಮತ್ತು ಹೂವುಗಳ ಆನೆ, ಚಿಟ್ಟೆ ಹಾಗೂ ಮಕ್ಕಳನ್ನು ಆಕರ್ಷಿಸುವ ನರ್ತಿಸುವ ನವಿಲು, ಪಾಂಡಾ, ಸ್ಟಾರ್‌ಫಿಶ್ ಮತ್ತಿತರ ಪ್ರತಿಕೃತಿಗಳು.