ಅಮರಶಿಲ್ಪಿ ಜಕಣಾಚಾರಿಗಳು ಭಗವಂತ ಈ ನಾಡಿಗೆ ನೀಡಿದ ವರವಾಗಿದ್ದು, ಬೇಲೂರು, ಹಳೇಬೀಡಿನ ಶಿಲ್ಪಕಲೆಗಳು ಜಗತ್ಪ್ರಸಿದ್ದಿಯಾಗಲು ಇವರೇ ಕಾರಣಕರ್ತರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಮರಶಿಲ್ಪಿ ಜಕಣಾಚಾರಿಗಳು ಭಗವಂತ ಈ ನಾಡಿಗೆ ನೀಡಿದ ವರವಾಗಿದ್ದು, ಬೇಲೂರು, ಹಳೇಬೀಡಿನ ಶಿಲ್ಪಕಲೆಗಳು ಜಗತ್ಪ್ರಸಿದ್ದಿಯಾಗಲು ಇವರೇ ಕಾರಣಕರ್ತರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಮರಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಮಹಾಸಭಾದ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಲ್ಪಕಲೆಯೇ ಇಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಶಿಲ್ಪಕಲೆ ಭಗವಂತ ನಮಗೆ ನೀಡಿದ ವರ. ಜಕಣಾಚಾರಿಯಂತಹ ಮಹಾನ್ ಶಿಲ್ಪಿಯನ್ನು ನೀಡಿದ ಅವರ ತಾಯಿಗೆ ನಮ್ಮ ನಮನಗಳು. ನಮ್ಮದು ಶಿಲ್ಪಕಲೆ, ಸಾಹಿತ್ಯ, ಭವ್ಯ ಸಾಂಸ್ಕೃತಿಕ ನೆಲಗಟ್ಟಿನ ನಾಡು. ಅನೇಕ ಸಾಧು-ಸಂತರು, ದಾರ್ಶನಿಕರು ಭವ್ಯವಾದ ಭಾರತ ದೇಶ ಕಟ್ಟಲು ತಮ್ಮನ್ನು ತಾವೇ ಧಾರೆ ಎರೆದುಕೊಂಡಿದ್ದು, ಅವರನ್ನೆಲ್ಲ ನಾವು ಸದಾ ಸ್ಮರಿಸಬೇಕು ಎಂದರು.

ಬೇಲೂರು, ಹಳೇಬೀಡು, ಸೋಮನಾಥಪುರ, ಶೃಂಗೇರಿ, ಬಾದಾಮಿ, ಬನವಾಸಿ ಹೀಗೆ ರಾಜ್ಯದೆಲ್ಲೆಡೆ ವಿಶೇಷ ಶಿಲ್ಪಕಲೆಗಳ ಸುಂದರ ಇತಿಹಾಸವನ್ನು ನಾವು ಹೊಂದಿದ್ದೇವೆ ಎಂದರು.

ನಗರದ ಪ್ಲೈಓವರ್ ಅಥವಾ ಯಾವುದಾದರೂ ಮುಖ್ಯ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿಗಳ ಹೆಸರನ್ನು ನಾಮಕರಣ ಮಾಡಬೇಕೆಂದು ಸಮಾಜದವರು ಮನವಿ ಮಾಡಿದ್ದೀರ. ಅಮರಶಿಲ್ಪಿಗಳ ಹೆಸರನ್ನು ನಾಮಕರಣ ಮಾಡುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಇಲಾಖೆಯಿಂದ ಒಂದು ಪ್ರಸ್ತಾವನೆಯನ್ನು ಸಲ್ಲಿಸಿರಿ, ಖಂಡಿತವಾಗಿಯೂ ಅವರ ಹೆಸರನ್ನು ನಗರದ ಆಯಕಟ್ಟಿನ ಜಾಗಕ್ಕೆ ನಾಮಕರಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ ಎಸ್ ಚಂದ್ರಭೂಪಾಲ್ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿಗಳು ಈ ದೇಶದ ಶಿಲ್ಪಕಲೆಗೆ ಅಪಾರ ಕೊಡುಗೆಯನ್ನಿತ್ತಿದ್ದು ಎಂದಿಗೂ ಸ್ಮರಣೀಯ. ಇಂತಹ ಸಮಾಜದಲ್ಲಿ ಜನಿಸಿದ ನೀವೇ ಪುಣ್ಯವಂತರು. ನಿಮ್ಮ ಸಮಾಜ ಯಾವತ್ತೂ ಇತರೆ ಸಮಾಜಗಳನ್ನು ಅತ್ಯಂತ ಗೌರವ, ಪ್ರೀತಿ, ವಿಶ್ವಾಸದಿಂದ ಕಾಣುತ್ತಾ ಬಂದಿದ್ದು, ಜಕಣಾಚಾರಿಯವರ ಹೆಸರನ್ನು ನಗರದ ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಲು ತಮ್ಮ ಸಂಪೂರ್ಣ ಸಹಕಾರ ಇದೆ. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ರಾಣೆಬೆನ್ನೂರಿನ ಶ್ರೀ ವಿಶ್ವವಿಭು ರೇಕಿ ಧ್ಯಾನಪೀಠದ ಮೌನೇಶ್ವರ ಆಚಾರ್ಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮ ಪರಂಪರೆ ಪ್ರತಿಭಾವಂತರ, ತಂತ್ರಜ್ಞಾನರ, ಪಂಚವೇದದ, ಪಂಚ ಶಕ್ತಿ, ಪಂಚ ವಿಜ್ಞಾನಗಳ ಪರಂಪರೆ ಹೊಂದಿದೆ. ಶಿಲ್ಪಗಳ ರಚನೆಯಿಂದ ಸೌಂದರ್ಯದ ಬೀಡು ಮತ್ತು ಭಕ್ತಿಯ ನೆಲೆಯಾಗಿ ಈ ನಾಡನ್ನು ರೂಪಿಸಿದೆ ಎಂದರು.

ತಮ್ಮ ಮಹಾನ್ ಶಿಲ್ಪಗಳ ಮೂಲಕ ಭಕ್ತಿಯ ಬೀಜ ಬಿತ್ತಿದ ಮಹಾನ್‌ಶಿಲ್ಪಿ ಜಕಣಾಚಾರಿ. ವಿಶ್ವಕರ್ಮ ಪರಂಪರೆ ಪ್ರಾಚೀನವಾದ ಐದು ವೇದಗಳನ್ನು ಮಾನ್ಯ ಮಾಡುತ್ತದೆ. ಮತ್ತು ಅದಕ್ಕೆ ತಕ್ಕಂತೆ ಆಚರಣೆಗಳು ಇರುತ್ತವೆ. ದೇವಶಿಲ್ಪ ಮತ್ತು ಮಾನವ ಶಿಲ್ಪ ಎಂಬ ಪ್ರಕಾರಗಳಿದ್ದು ವೇದಗಳ ಆಚರಣೆ ಅನುಸಾರ ಈ ಶಿಲ್ಪಕಲೆಗಳನ್ನು ಕೆತ್ತಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ವಿಶ್ವಕರ್ಮ ಮಹಾಸಭಾದ ಗೌರವಾಧ್ಯಕ್ಷ ಸತ್ಯನಾರಾಯಣ, ಜಿಲ್ಲಾ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ, ವಿಶ್ವಕರ್ಮ ಸಮಾಜದ ಅನ್ನಪೂರ್ಣ ಕಾಳಾಚಾರ್, ರಮೇಶ್, ಶ್ರೀನಿವಾಸಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್ , ಸಮಾಜದ ಮುಖಂಡರು ಪಾಲ್ಗೊಂಡಿದ್ದರು.