ಉಡುಪಿ: ಗದಗ ಜಿಲ್ಲೆಯಿಂದ ಉಡುಪಿಗೆ ಬಂದಿದ್ದ ಯುವಕನೊಬ್ಬ ಇಲ್ಲಿನ ಕಲ್ಸಂಕ ವೃತ್ತದಲ್ಲಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಹೈಡ್ರಾಮ ನಡೆಸಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಮಾಡಿದ ಘಟನೆ ಸೋಮವಾರ ನಡೆದಿದೆ.
ಈ ವಿಕೃತ ಕೃತ್ಯ ನಡೆಸಿದ ಯುವಕ ಜೊತೆಯಲ್ಲಿದ್ದ ಪತ್ನಿಯೊಂದಿಗೆ ರಸ್ತೆಯಲ್ಲಿಯೇ ಜಗಳವಾಡುತ್ತಿದ್ದ, ನಂತರ ರಸ್ತೆ ಮಧ್ಯೆ ಹೋಗಿ ಅವಾಚ್ಯ ಬೈಯ್ಯುತ್ತಾ ತಾನು ಬಾಟಲಿಯಲ್ಲಿ ತಂದಿದ್ದ ಪೆಟ್ರೋಲನ್ನು ತೋರಿಸಿ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಳ್ಳುವುದಾಗಿ ಬೊಬ್ಬೆ ಹೊಡೆದ. ತಕ್ಷಣ ಸಂಚಾರಿ ಪೊಲೀಸರು ಆತನಿಂದ ಬಾಟಲಿಯನ್ನು ಕಿತ್ತುಕೊಂಡು ಅಲ್ಲಿಂದ ಓಡಿಸಿದರು.ಸ್ವಲ್ಪ ಹೊತ್ತಿನ ನಂತರ ಮತ್ತೇ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದು ಮತ್ತೇ ಹೈಡ್ರಾಮ ಮಾಡಲಾರಂಭಿಸಿದ, ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಡೆಯಲೆತ್ನಿಸಿದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಮೇಲೆಯೂ ಪೆಟ್ರೋಲ್ ಹಾಕುವುದಾಗಿ ಬೆದರಿಸಿದ.
ನಂತರ ತನ್ನು ಪ್ಯಾಂಟ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ, ಬೆಂಕಿ ಸುಡಲಾರಂಭಿಸಿದಾಗ ರಸ್ತೆ ಪಕ್ಕಕ್ಕೆ ಓಡಿ ಬಂದು ಬೆಂಕಿ ನಂದಿಸುವಂತೆ ಕೂಗಿಕೊಂಡ. ನಂತರ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ಮನವೊಲಿಸಿ ಗದಗಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.