ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅಮೆರಿಕ-ಇಸ್ರೇಲ್-ಇರಾನ್ ಯುದ್ಧದ ಕಾರ್ಮೋಡ ದುಬೈಗೂ ಆವರಿಸಿದ್ದು, ಪ್ಯಾರಿಸ್ ಹೋಗಲು ವಿಮಾನವಿಲ್ಲದೆ ಬಾಗಲಕೋಟೆಯ ಬೀಳಗಿ ಪಟ್ಟಣದ ಸಾಫ್ಟವೇರ್ ಉದ್ಯೋಗಿ ದುಬೈನ ಅಬುದಾಬಿಯಲ್ಲೇ ಸಿಲುಕಿಕೊಂಡಿದ್ದಾರೆ. ಪ್ಯಾರಿಸ್‌ನಲ್ಲಿರುವ ಆಯ್ಡಿಮಿಯಾ ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿರುವ ಬೀಳಗಿ ನಿವಾಸಿ ಗಿರೀಶ್ ಕೆರೂರು ಅವರು ಬೆಂಗಳೂರಿನಿಂದ ದುಬೈ ಮಾರ್ಗವಾಗಿ ಪ್ಯಾರಿಸ್‌ಗೆ ಹೊರಟಿದ್ದರು. ಇರಾನ್ ದಾಳಿಯಿಂದಾಗಿ ದುಬೈ ವಾಯು ಸಂಚಾರ ಬಂದ್ ಮಾಡಲಾಗಿದ್ದು, ಪ್ಯಾರಿಸ್‌ಗೆ ಹೋಗಲು ವಿಮಾನವಿಲ್ಲದೆ ಅಬುದಾಬಿಯ ಹೋಟೆಲ್‌ನಲ್ಲಿ ತಂಗಿದ್ದಾರೆ. 28ರಂದು ಬೆಂಗಳೂರಿನಿಂದ ಬೆಳಗ್ಗೆ 4 ಗಂಟೆಗೆ ನಿರ್ಗಮಿಸಿದ್ದರು. ಬೆಳಗ್ಗೆ 7.30ಗೆ ದುಬೈ ತಲುಪಿದ್ದರು.ಫೆ.28ರ ಮುಂಜಾನೆ ಬೆಂಗಳೂರಿನಿಂದ ಹೊರಟಿದ್ದೇನೆ. ದುಬೈಗೆ 7.30ಕ್ಕೆ ಬಂದು ತಲುಪಿದೆವು. 2.30ಕ್ಕೆ ದುಬೈನಿಂದ ಪ್ಯಾರಿಸ್‌ಗೆ ವಿಮಾನ ಹೊರಡಬೇಕಿತ್ತು. ಆದರೆ ಸೆಕ್ಯುರಿಟಿ ಕ್ಲಿಯರೆನ್ಸ್ ಸಿಕ್ಕಿಲ್ಲ ಅಂದರು. 5 ಗಂಟೆಗೆ ಎಲ್ಲ ವಿಮಾನಗಳು ಕ್ಯಾನ್ಸಲ್ ಆಗಿವೆ ಎಂದು ಹೇಳಿದರು. ಹೋಟೆಲ್ ಆರೇಂಜ್ ಮಾಡಿದ್ದಾರೆ. ಸದ್ಯಕ್ಕೆ ಇಲ್ಲಿ ಸೇಫ್ ಆಗಿದ್ದೇವೆ. ಎಂದು ಸೆಲ್ಫಿ ವಿಡಿಯೋ ಮೂಲಕ ಗಿರಿಶ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ವಾಪಸ್ ಬರೋದಕ್ಕೂ ಕ್ಲಿಯರೆನ್ಸ್ ಇಲ್ಲ. ಏನಾಗುತ್ತೊ ಯಾವಾಗ ಫ್ಲೈಟ್ ಆರಂಭವಾಗುತ್ತವೋ ಗೊತ್ತಿಲ್ಲ. ಪ್ಯಾರಿಸ್ ಪ್ರಯಾಣ ಕ್ಯಾನ್ಸಲ್ ಮಾಡಿ ಕಡೆಗೆ ಭಾರತಕ್ಕಾದರೂ ವಾಪಸ್ ಬರುವ ಆಲೋಚನೆ ಮಾಡಿದ್ದೀನಿ ಎಂದು ಗಿರೀಶ ತಿಳಿಸಿದ್ದಾರೆ. ಸದ್ಯ ಗಿರೀಶ ಕೆರೂರು ಅವರು ಅಬುದಾಬಿಯ ಯಾಸ್ ಪ್ಲಾಜಾ ಬೇ ಹೊಟೆಲ್‌ನಲ್ಲಿ ತಂಗಿದ್ದಾರೆ.