ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಯುವಕನೊಬ್ಬ ಕೊಡದಿಂದ ನೀರು ಹೊತ್ತು ತಂದು ಹಾಕಿ ಅಂದಾಜು 6 ಸಾವಿರ ಲೀಟರ್ ಸಾಮರ್ಥ್ಯದ ಓಕುಳಿ ಹೊಂಡವನ್ನು ತುಂಬಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ತಾಲೂಕಿನ ಹುಲ್ಲೂರು ಗ್ರಾಮದ ಬಿಎಸ್ಸಿ ವಿದ್ಯಾರ್ಥಿ ಚಂದನಗೌಡ ಶಿವಪ್ಪಗೌಡ ಕೊಡಗಾನೂರ ಓಕಳಿಯ ಹೊಂಡ ತುಂಬಿಸಿದ ಯುವಕ.ಗ್ರಾಮದ ಮಾರುತೇಶ್ವರ ಜಾತ್ರೆ ನಿಮಿತ್ತ ಭಾನುವಾರ ಓಕುಳಿ ಹಮ್ಮಿಕೊಳ್ಳಲಾಗಿತ್ತು. ಓಕುಳಿಯಾಟಕ್ಕೆ ಹೊಂಡದಲ್ಲಿ ನೀರು ತುಂಬಿಸಬೇಕು. ಬೃಹದಾಕಾರದ ಹೊಂಡ ತುಂಬಿಸಲು ಅನೇಕ ಜನರು ಹರಸಾಹಸ ಪಡಬೇಕು. ಆದರೆ ಯುವಕನೊಬ್ಬನೇ ಅಂದಾಜು 40 ಲೀಟರ್ ಸಾಮರ್ಥ್ಯದ ಕೊಡದಿಂದ ದೂರದ ಸೇದು ಬಾವಿಯಿಂದ ನೀರನ್ನು ಹೊತ್ತು ತಂದು ಕೇವಲ 3 ಗಂಟೆಯಲ್ಲಿ ಹೊಂಡ ತುಂಬಿಸಿದ್ದಾನೆ. ಗ್ರಾಮದ ಮಾರುತೇಶ್ವರ ಜಾತ್ರೆ ವೇಳೆ ಓಕಳಿ ನಡೆಯುತ್ತಿದ್ದು, ಓಕಳಿಗೆ ಪ್ರತಿವರ್ಷ ಒಬ್ಬೊಬ್ಬ ಯುವಕರು ಹೊಂಡಕ್ಕೆ ನೀರು ತುಂಬಿಸಬೇಕು.ಮೆರವಣಿಗೆ:
ಹೊಂಡ ತುಂಬುತ್ತಿದ್ದಂತೆ ಯುವಕರು ಕೇಕೇ ಹಾಕುತ್ತ ಪರಸ್ಪರ ಬಣ್ಣ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಶಿಷ್ಟ ಸಾಧನೆ ಮಾಡಿದ ಚಂದನಗೌಡ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.ಹಿಂದೆ ಕೆಲ ಈಗಿನ ಹಿರಿಯರು ಕೂಡ ಯುವಕರಾಗಿದ್ದಾಗ ಇದಕ್ಕಿಂತಲೂ ಹತ್ತು ಪಟ್ಟು ದೊಡ್ಡದಾದ ಹೊಂಡದಲ್ಲಿ ಇದೇ ಪಟ್ಟಿ ಕೊಡದಿಂದ ಒಬ್ಬರೇ ನೀರು ತುಂಬಿಸಿ ಸಾಧನೆ ಮಾಡುತ್ತಿದ್ದರು. ವಿದ್ಯುತ್ ಕಡಿತದ ಮಧ್ಯೆ ಹೊಂಡದಲ್ಲಿ ನೀರು ತುಂಬಿಸುವುದು ಜನರಿಗೆ ಕಷ್ಟವಾಗಬಹುದು ಎಂದು ಕಳೆದ ಕೆಲ ವರ್ಷಗಳಿಂದ ಯುವಕರು ಒಬ್ಬಬ್ಬರಾಗಿ ನೀರು ತುಂಬಿಸುತ್ತಿದ್ದಾರೆ. ಅದು ಈ ವರ್ಷವೂ ಮುಂದುವರೆದಿದೆ.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಪಿಕೆಪಿಎಸ್ ಅಧ್ಯಕ್ಷ ಸುರೇಶ ಹಳೇಮನಿ, ಎಚ್.ಎಚ್.ಬೊಮ್ಮಣಗಿ, ನ್ಯಾಯವಾದಿ ಸಂತೋಷ ಕಡಿ, ಹಣಮಂತರಾಯಗೌಡ ಕೊಡಗಾನೂರ, ಸಂಗಪ್ಪಗೌಡ ಕೊಡಗಾನೂರ, ನಿಂಗಪ್ಪ ಓಲೇಕಾರ, ವೈ.ಎನ್.ಸಾಲೋಟಗಿ, ಭೀಮನಗೌಡ ಬಿರಾದಾರ, ಭೀಮಣ್ಣ ತೊಂಡಿಕಟ್ಟಿ, ರಾಮನಗೌಡ ಭಗವತಿ, ಮಲ್ಲನಗೌಡ ಬಿರಾದಾರ, ಯಮನಪ್ಪ ಇಂಗನಾಳ, ವೈ.ಜಿ.ಕೊಡಗಾನೂರ, ಮುದಕಪ್ಪಗೌಡ ಕೊಡಗಾನೂರ, ರಾಮು ಬಿರಾದಾರ, ಗ್ರಾಪಂ ಸದಸ್ಯ ದಯಾನಂದ ಹಲಕಾವಟಗಿ, ರಾಘವೇಂದ್ರ ಕುಲಕರ್ಣಿ, ವಿನೋದ ಓಲೇಕಾರ ಇತರರಿದ್ದರು.ಸಂಭ್ರಮದ ಓಕುಳಿ:
ಭಾನುವಾರ ಬೆಳಗ್ಗೆ ಚಂದನಗೌಡ ತುಂಬಿದ ಹೊಂಡದಲ್ಲಿ ಬಾಬುದಾರರ ಸಮ್ಮುಖದಲ್ಲಿ ಮಾರುತೇಶ್ವರ ದೇವಸ್ಥಾನದ ಪೂಜಾರರು ಸಂಜೆ ಹೊಂಡದ ಪೂಜೆ ನೆರವೇರಿಸುತ್ತಿದ್ದಂತೆ ಕಾತುರದಿಂದ ಕಾಯುತ್ತಿದ್ದ ಭಕ್ತರು ಓಕುಳಿಯಾಡಿದರು.ವಿಶೇಷ ಅಲಂಕಾರ:
ಗ್ರಾಮದ ಆರಾಧ್ಯದೈವ ಮಾರುತೇಶ್ವರನಿಗೆ ದೇವಸ್ಥಾನದ ಪೂಜಾರಿ ಯಲಗೂರೇಶ ಹೂಗಾರ ಹಾಗೂ ಮಡಿವಾಳಪ್ಪ ಪತ್ತಾರ ಅವರು ಗೊಡಂಬಿ ಮತ್ತು ಬಾದಾಮಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.------------