ಸಾರಾಂಶ
ವಿದಾಯ – 2024 ಭಾಗ 4
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಅನಾಥ ಊನ ಮಗವೊಂದು ಅಮೆರಿಕ ದಂಪತಿ ಮಡಿಲು ಸೇರಿದರೆ, ಡಿಜಿಟಲ್ ಅರೆಸ್ಟ್ ಎನ್ನುವ ಕಬಂಧ ಬಾಹು ಕೊಪ್ಪಳಕ್ಕೂ ಚಾಚಿ, ಯುವಕನೋರ್ವ ಬಳಲಿದ್ದ. ವೈದ್ಯ ಸೀಟು ಸಿಕ್ಕರೂ ಶುಲ್ಕ ಪಾವತಿಸಲು ಆಗದವನಿಗೆ ಹರಿದು ಬಂದ ನೆರವು. ಮೂರು ಹೆಣ್ಣು ಹೆತ್ತಳೆಂದು ಗಂಡನ ಮನೆಯವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ಹೀಗೆ, ಮನಕಲಕುವ, ಮನ ಕರಗುವ ಘಟನೆಗಳಿಗೆ 2024 ಸಾಕ್ಷಿಯಾಯಿತು.
ಜಿಲ್ಲೆಯ ಊನ ಅನಾಥ ಮಗುವನ್ನು ಅಮೆರಿಕದ ದಂಪತಿ ಬಂದು ದತ್ತು ಪಡೆದಿದ್ದು, ಇಡೀ ಕರುನಾಡು ಕಣ್ಣು ತೆರೆಸುವಂತೆ ಮಾಡಿತು.ಆನ್‌ಲೈನ್ ಅರ್ಜಿ ಹಾಕಿಕೊಂಡಿದ್ದ ಅಮೆರಿಕ ದಂಪತಿ, ಊನವಾಗಿದ್ದರೂ ಪರವಾಗಿಲ್ಲ. ಆ ಮಗುವನ್ನು ನಾವು ಸಾಕುತ್ತೇವೆ ಎಂದು ಮುಂದೆ ಬಂದಾಗ ಜಿಲ್ಲಾಡಳಿತದಿಂದ ಅವರಿಗೆ ಆ ಮಗುವನ್ನು ದತ್ತು ನೀಡಲಾಯಿತು. ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಯಿತಲ್ಲದೆ, ಅಮೆರಿಕ ದಂಪತಿ ನಿರ್ಧಾರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಯಿತು.
ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ಡಿಜಿಟಲ್ ಅರೆಸ್ಟ್ ಎನ್ನುವ ಆನ್‌ಲೈನ್ ದಂಧೆಗೆ ಕೊಪ್ಪಳ ಯುವಕ ಸಿಕ್ಕಿ ಹಾಕಿಕೊಂಡು ಬಳಲುತ್ತಿದ್ದನು. ಇಲ್ಲಸಲ್ಲದ ಕತೆ ಕಟ್ಟಿ, ಆತನನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದು ಅಲ್ಲದೆ ಆತನಿಂದ ಸಾಕಷ್ಟು ಹಣ ಪೀಕಿದರು. ಈ ಮಾಹಿತಿ ಗೊತ್ತಾಗುತ್ತಿದ್ದಂತೆ ಕ್ರೈಂ ಪೊಲೀಸರು ಆತನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ ಈ ಘಟನೆಯನ್ನೇ ಮುಂದಿಟ್ಟುಕೊಂಡು ಭಾರಿ ಪ್ರಚಾರ ನಡೆಸಿದ್ದರಿಂದ ಅಂದಿನಿಂದ ಡಿಜಿಟಲ್ ಅರೆಸ್ಟ್‌ಗೆ ಮತ್ತೊಬ್ಬರು ಸಿಗದಂತೆ ಜಾಗೃತಿ ಮೂಡಿತು.ಬೇಳೂರು ಗ್ರಾಮದ ವಿದ್ಯಾರ್ಥಿಗೆ ವೈದ್ಯ ಸೀಟ್ ಲಭ್ಯವಾಗಿದ್ದರೂ ಶುಲ್ಕ ಭರಿಸುವ ಶಕ್ತಿ ಇರಲಿಲ್ಲ. ಈ ಕುರಿತು ''''ಕನ್ನಡಪ್ರಭ'''' ವಿಶೇಷ ವರದಿ ಪ್ರಕಟಿಸುತ್ತಿದ್ದಂತೆ ಆತನಿಗೆ ಅಪಾರ ಪ್ರಮಾಣದ ನೆರವು ಹರಿದು ಬಂದಿತು. ಆತ ವೈದ್ಯ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಯಿತು.
ತಲೆತಗ್ಗಿಸುವ ಘಟನೆ:ಸತತವಾಗಿ ಮೂರು ಹೆಣ್ಣು ಮಗು ಹೆತ್ತಳು ಎನ್ನುವ ಕಾರಣಕ್ಕಾಗಿಯೇ ಗಂಡನ ಮನೆಯವರು ವಿಪರೀತ ಕಿರುಕುಳ ನೀಡಿದ್ದರಿಂದ ಮನನೊಂದು ಆಕೆ ಆ ಮೂರು ಮಕ್ಕಳನ್ನು ಬಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇಡಿ ಮನಕುಲವೇ ತಲೆತಗ್ಗಿಸುವ ಘಟನೆ ನಡೆದಿದ್ದು ಮಾತ್ರ ನಾಚಿಕೆಗೇಡು.
ಈ ಕಾಲದಲ್ಲಿಯೂ ಮೂರು ಹೆಣ್ಣು ಹೆತ್ತಳು ಎನ್ನುವ ಕಾರಣಕ್ಕೆ ಕಿರುಕುಳ ನೀಡಿದ್ದು ಮತ್ತು ಅದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರಿ ಟೀಕಿಗೆ ಗುರಿಯಾಯಿತು.ಹೈಕೋರ್ಟ್ ಮತ್ತು ಗವಿಮಠ:
ಧಾರವಾಡ ಹೈಕೋರ್ಟ್‌ನಲ್ಲಿ ವಿಚ್ಛೇದನ ಕೋರಿದ ಪ್ರಕರಣದಲ್ಲಿ ನ್ಯಾಯಾಧೀಶರೇ ಕೊಪ್ಪಳ ಗವಿಸಿದ್ಧೇಶ್ವರ ಸ್ವಾಮೀಜಿಗಳ ಬಳಿ ದಂಪತಿಯನ್ನು ಕಳುಹಿಸಿದರು. ನಿಮ್ಮ ನಡುವಿನ ಸಮಸ್ಯೆಯನ್ನು ಸ್ವಾಮೀಜಿಗಳ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿ ಎಂದು ಕಳುಹಿಸಿದ್ದರು.ಏಳು ಸಾವಿರ ವಿದ್ಯಾರ್ಥಿಗಳು:ಸರ್ವೆಯೊಂದರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿರುವ 7 ಸಾವಿರ ವಿದ್ಯಾರ್ಥಿಗಳಿಗೆ ಕನ್ನಡ ಓದಲು, ಬರೆಯಲು ಬರುವುದಿಲ್ಲ ಎನ್ನುವ ಅಘಾತಕಾರಿ ಮಾಹಿತಿ ಇಡೀ ರಾಜ್ಯವೇ ಬೆರಗಾಗುವಂತೆ ಮಾಡಿತು. ಈ ಕುರಿತು ಕನ್ನಡಪ್ರಭ ವರದಿ ಮಾಡಿದ್ದು, ಬೆಳಗಾವಿ ಅಧಿವೇಶನದಲ್ಲಿಯೂ ಚರ್ಚೆಯಾಯಿತು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಲೂ ಅದನ್ನು ಪರಿಶೀಲಿಸಿ, ಕಾರಣ ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದೆ.
ರಾಜ್ಯದಲ್ಲಿ ಮತ್ತೊಂದು ಅಣುಸ್ಥಾವರ:ರಾಜ್ಯದಲ್ಲಿ ಮತ್ತೊಂದು ಅಣು ಸ್ಥಾವರ ಕೊಪ್ಪಳ ಜಿಲ್ಲೆಯಲ್ಲಿ ತಲೆ ಎತ್ತುವ ಕುರಿತ ವಿಷಯ ಭಾರಿ ಸದ್ದುಗದ್ದಲಕ್ಕೆ ಕಾರಣವಾಯಿತು. ಜಿಲ್ಲಾಡಳಿತ ಸರ್ವೇಗೆ ಮುಂದಾಗಿದ್ದರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮೊದಲು ಕೊಪ್ಪಳ ತಾಲೂಕಿನ ಅರಸಿನಕೇರಿ ಗ್ರಾಮದ ಬಳಿ ಸರ್ವೆ ಮಾಡಿದ್ದು ಭಾರಿ ವಿರೋಧಕ್ಕೆ ಕಾರಣವಾಯಿತು. ಆನಂತರ ಹಿರೇಬೆಣಕಲ್ ಬಳಿ ಸರ್ವೆ ಮಾಡಿದ್ದು ಸಹ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.