ಯುವಕನ ಮೆದುಳು ನಿಷ್ಕ್ರಿಯ: ಕುಟುಂಬಸ್ಥರಿಂದ ಅಂಗಾಂಗ ದಾನಕ್ಕೆ ನಿರ್ಧಾರ

| Published : Mar 05 2024, 01:37 AM IST

ಯುವಕನ ಮೆದುಳು ನಿಷ್ಕ್ರಿಯ: ಕುಟುಂಬಸ್ಥರಿಂದ ಅಂಗಾಂಗ ದಾನಕ್ಕೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಜು ಕುಟುಂಬಸ್ಥರು ಅಂಗಾಂಗ ದಾನ ಮಾಡುವ ನಿರ್ಧಾರದಿಂದ ಹಲವು ಜೀವ ಉಳಿಸಬಹುದು. ಯುವಕ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು ಸೇರಿದಂತೆ ಕೆಲವು ಅಂಗಗಳು ಮತ್ತೊಬ್ಬರಿಗೆ ನೆರವಾಗಲಿದೆ. ಸರ್ಕಾರದೊಂದಿಗೆ ಕ್ಷೇತ್ರದ ಶಾಸಕನಾಗಿ ಸಿದ್ದರಾಜು ಅವರ ಕುಟುಂಬಕ್ಕೆ ನೆರವಾಗುವ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭರವಸೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಸಾಹಳ್ಳಿಯ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ.

ಗ್ರಾಮದ ಸಿದ್ದರಾಜು (37) ಕಳೆದ ಮೂರು ದಿನಗಳ ಹಿಂದೆ ತಾಲೂಕಿನ ಅಟುವನಹಳ್ಳಿ ಗೇಟ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿ ತಲೆಗೆ ತೀವ್ರ ಪೆಟ್ಟು ಬಿದಿದ್ದು ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ನೇತೃತ್ವದಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದರು. ನಂತರ ಸ್ನೇಹಿತರು ಹಾಗೂ ವೈದ್ಯರ ಸಲಹೆ ಮೇರೆಗೆ ಸಿದ್ದರಾಜು ಕುಟುಂಬದವರು ಸಾವಿನ ನೋವಿನಲ್ಲೂ ಮಾನವೀಯತೆಯಿಂದ ಅಂಗಾಗ ದಾನ ಮಾಡುವ ನಿರ್ಧಾರ ಕೈಗೊಂಡರು.

ನಂತರ ಅಪೋಲೋ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿ ಅಂಗಾಂಗ ದಾನದ ಬಗ್ಗೆ ಮಾಹಿತಿ ನೀಡಿದ್ದರು. ಸೋಮವಾರ ಆಸ್ಪತ್ರೆಗೆ ಬಂದ ಅಪೋಲೋ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಸಿದ್ದರಾಜು ಅವರನ್ನು ಮೈಸೂರಿಗೆ ಕರೆದುಕೊಂಡು ಹೋದರು.

ಅಂಗಾಂಗ ದಾನದ ವಿಷಯ ತಿಳಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೋಮವಾರ ಮಧ್ಯಾಹ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದು ಕುಟುಂಬಸ್ಥರಿಗೆ ಸ್ವಾಂತನ ಹೇಳಿದರು.

ಸಿದ್ದರಾಜು ಕುಟುಂಬಸ್ಥರು ಅಂಗಾಂಗ ದಾನ ಮಾಡುವ ನಿರ್ಧಾರದಿಂದ ಹಲವು ಜೀವ ಉಳಿಸಬಹುದು. ಯುವಕ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು ಸೇರಿದಂತೆ ಕೆಲವು ಅಂಗಗಳು ಮತ್ತೊಬ್ಬರಿಗೆ ನೆರವಾಗಲಿದೆ. ಸರ್ಕಾರದೊಂದಿಗೆ ಕ್ಷೇತ್ರದ ಶಾಸಕನಾಗಿ ಅವರ ಕುಟುಂಬಕ್ಕೆ ನೆರವಾಗುವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಮುಖಂಡರಾದ ಆರ್.ಎನ್.ವಿಶ್ವಾಸ್, ಸಿ.ಮಾಧು, ದೊಡ್ಡಯ್ಯ, ಮುಟ್ಟನಹಳ್ಳಿ ಅಂಬರೀಶ್, ರೋಹಿತ್(ದೀಪು), ಸಾಹಳ್ಳಿ ಶಶಿ, ಸಾಂಗ್ಯ ಕೆಂಪಯ್ಯ ಇದ್ದರು.