ಒಂಭತ್ತು ದಿನಗಳಲ್ಲಿ ಜಮ್ಮು-ಕಾಶ್ಮೀರ ಸಂಚಾರಗೈದ ಯುವತಿ

| Published : Feb 23 2024, 01:45 AM IST

ಒಂಭತ್ತು ದಿನಗಳಲ್ಲಿ ಜಮ್ಮು-ಕಾಶ್ಮೀರ ಸಂಚಾರಗೈದ ಯುವತಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದ ಪ್ರತೀಕ್ಷಾ ಹರವಿಶೆಟ್ಟರ್‌ ಎಂಬ 18 ವರ್ಷದ ಯುವತಿ ಏಕಾಂಗಿಯಾಗಿ 9 ದಿನಗಳಲ್ಲಿ ಬೈಕ್‌ನಲ್ಲಿ ಜಮ್ಮು-ಕಾಶ್ಮೀರ ಪ್ರವಾಸ ಮಾಡಿ ಬಂದಿದ್ದಾಳೆ. ಯುವತಿಯ ಸಾಹಸಹಕ್ಕೆ ಧಾರವಾಡ ಜನ ಭೇಷ್ ಎಂದಿದ್ದಾರೆ.

ಧಾರವಾಡ: ನಗರದ ವಿದ್ಯಾರ್ಥಿನಿಯೊಬ್ಬಳು ಬೈಕ್ ಮೇಲೆ ಜಮ್ಮು-ಕಾಶ್ಮೀರಕ್ಕೆ ಏಕಾಂಗಿಯಾಗಿ ಯಶಸ್ವಿ ಸಂಚಾರ ಕೈಗೊಂಡಿದ್ದು, ಬುಧವಾರ ರಾತ್ರಿ‌ ತವರಿಗೆ ವಾಪಸಾಗಿದ್ದಾಳೆ.

ಇಲ್ಲಿಯ ಡಾ. ಆರ್.ಎನ್. ಶೆಟ್ಟಿ ಕ್ರೀಡಾಂಗಣ ಬಳಿಯ ಕೆ.ಎಚ್.ಬಿ. ಕಾಲನಿ ನಿವಾಸಿ, 18 ವರ್ಷದ ಪ್ರತೀಕ್ಷಾ ಹರವಿಶೆಟ್ಟರ್ ಸಾಧನೆಗೈದ ವಿದ್ಯಾರ್ಥಿನಿ. ಸಂಚಾರ ನಿಯಮ ಪಾಲನೆ ಮತ್ತು ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀಕ್ಷಾ ಸಂಚಾರ ಕೈಕೊಂಡಿದ್ದಳು.

ಕಳೆದ‌ ಫೆ. 13ರಂದು ನಗರದಿಂದ ‌ಕೆಟಿಎಂ ಡ್ಯೂಕ್ -390 ಬೈಕ್ ಮೇಲೆ‌ ಹೊರಟ ಅವಳನ್ನು ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ‌ಎಸ್.ಎಫ್. ಸಿದ್ದನಗೌಡರ, ಜಿಲ್ಲಾ ಶಿಕ್ಷಕರ‌ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ, ಸಾರಿಗೆ ಅಧಿಕಾರಿ ಭೀಮಣ್ಣವರ, ನೌಕರರ ಸಂಘದ ಗಿರೀಶ ಚೌಡಕಿ ಮತ್ತಿತರರು ಸತ್ಕರಿಸಿ ಬೀಳ್ಕೊಟ್ಟಿದ್ದರು.

ಆನಂತರ ಧಾರವಾಡದಿಂದ ಲೋನಾವಾಲಾ, ವಡೋದರ, ಜೋಧಪುರ, ಅಮೃತಸರ ಮಾರ್ಗವಾಗಿ ಶ್ರೀನಗರ ತಲುಪಿದಳು. ಅಲ್ಲಿ ಲಾಲಚೌಕ್‌ನಲ್ಲಿ ಕರುನಾಡಿನ ಬಾವುಟ ಹಾರಿಸಿದ ಸಂದರ್ಭದಲ್ಲಿ ಬ್ರಿಗೇಡಿಯರ್ ಮನೋಜ ಜೋಶಿ ಸನ್ಮಾನಿಸಿದರು.

ಮರುದಿನದ ಶ್ರೀನಗರದಿಂದ ಪ್ರಯಾಣ ಆರಂಭಿಸಿ ಜಲಂಧರ, ಅಜ್ಮೇರ, ಧುಲೆ ಮಾರ್ಗವಾಗಿ 9ನೇ ದಿನಕ್ಕೆ ಧಾರವಾಡ ತಲುಪಿದ್ದಾಳೆ. ಸತತ ಒಂಬತ್ತು ದಿನಗಳ‌ ಕಾಲ ಬೈಕ್ ಮೇಲೆ ತೆರಳಿ ಬುಧವಾರ ರಾತ್ರಿ‌ ನಗರಕ್ಕೆ ಆಗಮಿಸಿದ ಪ್ರತೀಕ್ಷಾಳನ್ನು ಹಿರಿಯ ವಕೀಲ ಶೇಖರ ಕವಳಿ, ಅಶೋಕ ಶೆಟ್ಟರ್, ಸಂಗಮೇಶ ಹನಸಿ‌, ಮಂಜುನಾಥ ಹಿರೇಮಠ, ರಾಜಶೇಖರ ಉಪ್ಪಿನ ಇತರರು‌ ಬರಮಾಡಿಕೊಂಡರು. ಯುವತಿಯ ಸಾಹಸಕ್ಕೆ ಧಾರವಾಡದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.