ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮದ್ಯಪಾನ, ದುಶ್ಚಟಗಳಿಂದ ಯುವ ಸಮೂಹ ಮುಕ್ತವಾದರೆ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಎಚ್.ಶ್ರೀನಿವಾಸ್ ಹೇಳಿದರು.ಹೋಬಳಿಯ ಲಕ್ಷ್ಮೀಪುರ ಗ್ರಾಮದ ಎಸ್‌ಆರ್‌ಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಪ್ರಗತಿಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಗಾಂಧೀಜಿಯವರ 165ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಗಾಂಧಿ ಸ್ಮರಣೆ, ಜನಜಾಗೃತಿ ಜಾಥಾ ಹಾಗೂ ಸಮಾವೇಶದಲ್ಲಿ ಮಾತನಾಡಿದರು.
ಶ್ರೀ ಕ್ಷೇತ್ರದ ಸಂಸ್ಥೆ ಜೊತೆ ಸಾಂಘಿಕ ಸಮುದಾಯ ಸಹಕಾರವಿದ್ದರೆ ರಾಷ್ಟ್ರಪಿತ ಗಾಂಧೀಜಿಯ ಪರಿಕಲ್ಪನೆಯಂತೆ ವ್ಯಸನಮುಕ್ತ ಭಾರತ ನಿರ್ಮಾಣವಾಗಲಿದೆ. ಕುಡಿತ ಮೃಗಿಗಳನ್ನಾಗಿಸಿ ನೂರಾರು ಕೆಟ್ಟ ಕೆಲಸ ಮಾಡಿಸಲಿದೆ. ಕುಡಿತ ಚಟವಾದರೆ ಬದುಕು ಛಿದ್ರವಾಗಿ ಸಂಸಾರ, ಆರೋಗ್ಯ, ಮರ್ಯಾದೆ, ಸಮಾಜ ಎಲ್ಲವೂ ಹಾಳಾಗಲಿದೆ ಎಂದು ಎಚ್ಚರಿಸಿದರು.ಶಾಸಕ ಎಚ್.ಟಿ. ಮಂಜು ಮಾತನಾಡಿ, ಸಮಾಜ, ಆರೋಗ್ಯಕ್ಕೆ ಮಾರಕವಾದ ಈ ಪೆಡಂಭೂತ ಬಿಡಿಸಲು ಸಂಸ್ಥೆ ಜೊತೆ ತಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ಮಾತನಾಡಿ, ಮದ್ಯಪಾನದಿಂದ ಮರಣದಷ್ಟೆ ಅಪಘಾತಗಳು ಹೆಚ್ಚುತ್ತಿವೆ ಎಂದು ಎಚ್ಚರಿಸಿದರು.ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ಸಂಸ್ಥೆ ಎಂದರೆ ತನಗೆ ಉಸಿರಾಗಿದೆ. ಮಂಜುನಾಥಸ್ವಾಮಿ ಭಕ್ತನಾಗಿ ಅಪಪ್ರಚಾರ ಸಹಿಸಲಾರೆ. ಇದಕ್ಕೆ ಹೋರಾಡಲು ಬದ್ಧನಿರುವುದಾಗಿ ನುಡಿದರು.
ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕೆಪಿಸಿಸಿ ಸದಸ್ಯ ಸುರೇಶ್, ಸಂಸ್ಥೆ ಜಿಲ್ಲಾ ನಿರ್ದೇಶಕ ಎ.ಯೋಗೇಶ್ ಮಾತನಾಡಿದರು.ಸಮಾವೇಶಕ್ಕೂ ಮುನ್ನ ಡೊಳ್ಳು, ಗಾಂಧೀಜಿ ವೇಷಭೂಷಣ, ಪೂರ್ಣಕುಂಭದ ಸಾಲು, ವಿವಿಧ ವೇಷಭೂಷಣ, ಕೊಡವ ಮಹಿಳೆಯರ ವೇಷದಂತಹ ಹಲವು ಜಾನಪದ ಕಲಾತಂಡ ಮೇಳ, ಕುಡಿತದಿಂದ ಆಗುವ ದುಷ್ಪರಿಣಾಮಗಳ ಭಿತ್ತಿಫಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಾಕ್ಷಿಯಾದವು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭೋಜನ ವ್ಯವಸ್ಥೆ, ಗಣ್ಯರಿಗೆ ಸನ್ಮಾನ ಮಾಡಲಾಯಿತು. ವ್ಯಸನಮುಕ್ತರಾಗಿ ನವಜೀವನಕ್ಕೆ ಕಾಲಿಟ್ಟವರನ್ನು ಸಂಸ್ಥೆ ಗೌರವಿಸಿತು. ಈ ವೇಳೆ ಕಿಕ್ಕೇರಿ ಗ್ರಾಪಂ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಶೀಳನೆರೆ ಅಂಬರೀಷ್, ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಆರ್. ರಾಜೇಶ್, ಸದಸ್ಯ ಮೊಟ್ಟೆ ಮಂಜು, ಸುನೀತಾ, ಸಂಸ್ಥೆ ಯೋಜನಾಧಿಕಾರಿ ಕಿಕ್ಕೇರಿ ಕೆ.ಪ್ರಸಾದ್, ತಿಲಕ್‌ರಾಜು, ಚನ್ನರಾಯಪಟ್ಟಣ ಎಂ.ಗಣೇಶ್, ಪುರಸಭಾ ಅಧ್ಯಕ್ಷೆ ಪಂಕಜಾ, ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಸೂರ್ಯ ನಾರಾಯಣ, ನಾರಾಯಣಸ್ವಾಮಿ, ಅಕ್ಕಿಹೆಬ್ಬಾಳು ರಘು ಹಲವರು ಇದ್ದರು.