ಸಾರಾಂಶ
2009ರಲ್ಲಿ ಶಾಲೆ ಆರಂಭಿಸಿದಾಗ ಆಯ್ದ ಬರೇ 60 ಮಂದಿ ವಿದ್ಯಾರ್ಥಿಗಳಿದ್ದರು. ಅಂದು ಡಾ.ವಿ.ಎಸ್. ಆಚಾರ್ಯರ ಶಿಫಾರಸಿನಂತೆ ಏಕಕಾಲಕ್ಕೆ 8ರಿಂದ 10, ಬಳಿಕ 2013ರಲ್ಲೂ ಏಕಕಾಲಕ್ಕೆ 6 ಮತ್ತು 7 ತರಗತಿ ಆರಂಭಿಸಿದ ಅಪರೂಪದ ದಾಖಲೆ ಈ ಶಾಲೆಯದ್ದು.
ಗಣೇಶ್ ಕಾಮತ್
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕನ್ನಡದ ನೆಲದಲ್ಲೇ ಕನ್ನಡಕ್ಕೆ ನೆಲೆ ಇಲ್ಲ, ಕನ್ನಡ ಮಾಧ್ಯಮ ಶಾಲೆಗಳಿಗಂತೂ ಇದೀಗ ಉಳಿಗಾಲವೇ ಇಲ್ಲ ಎನ್ನುವ ಆತಂಕದ ಪರಿಸ್ಥಿತಿಯ ನಡುವೆಯೇ ಮಾದರಿಯಾಗಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ಕಟ್ಟಿ ಬೆಳೆಸಿ, ಸಂಪೂರ್ಣ ಉಚಿತ ಶಿಕ್ಷಣದ ಜತೆಗೆ ವಸತಿಗೂ ಅವಕಾಶ ನೀಡಿ, ನಿರಂತರ ಶೇ. 100 ಫಲಿತಾಂಶ ದಾಖಲಾಗುವಂತೆ ಶ್ರಮಿಸಿದ ಕನ್ನಡಿಗನ ಯಶೋಗಾಥೆಯಿದು.
ಇದು ಶೂನ್ಯ ಶುಲ್ಕದ ಕನ್ನಡ ಮಾಧ್ಯಮ ಶಾಲೆ!. ಕನ್ನಡ ಮಾಧ್ಯಮ ಶಾಲೆಯ ಉಳಿವಿಗೆ ಶ್ರಮಿಸುತ್ತಿರುವರರು ಶೈಕ್ಷಣಿಕ, ಸಾಂಸ್ಕೃತಿಕ ಕ್ರಾಂತಿಯಿಂದ ನಾಡಿಗೇ ಚಿರಪರಿಚಿತರಾದ ಮೂಡುಬಿದಿರೆಯ ಡಾ.ಎಂ. ಮೋಹನ ಆಳ್ವ.
6ರಿಂದ 10ನೇ ತರಗತಿವರೆಗೆ ಎರಡು ವಿಭಾಗಗಳಲ್ಲಿ ಒಟ್ಟು 600 ಮಂದಿ ಪ್ರತಿಭಾನ್ವಿತರು ನಾಡಿನ ವಿವಿಧ ಮೂಲೆಗಳಿಂದ ಇಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ಪ್ರತಿ ವರ್ಷ ಮಾರ್ಚ್ ಬಂತೆಂದರೆ ಈ ಶಾಲೆಯ ದಾಖಲಾತಿ ಪರೀಕ್ಷೆಗೆ ನಾಡಿನ ಎಲ್ಲೆಡೆಯ ಪೋಷಕರು, ವಿದ್ಯಾರ್ಥಿಗಳು ಇತ್ತ ಹರಿದು ಬರುತ್ತಾರೆ. ಕಳೆದ ವರ್ಷ 14 ಸಾವಿರ ಮಂದಿ ಆಕಾಂಕ್ಷಿಗಳಿದ್ದರು. ಈ ಬಾರಿ ಮಾರ್ಚ್ 3ರಂದು ನಡೆಯುವ ಪರೀಕ್ಷೆಗೆ ಪ್ರವೇಶಾಕಾಂಕ್ಷಿಗಳ ಸಂಖ್ಯೆ ಈಗಾಗಲೇ ಬರೋಬ್ಬರಿ 19 ಸಾವಿರದ ಗಡಿ ದಾಟಿದೆ.
ಅರ್ಹತಾ ಪರೀಕ್ಷೆಯಲ್ಲಿ ಬಹು ಆಯ್ಕೆಯ ಒಂದೊಂದು ಅಂಕದ ಪ್ರಶ್ನೆಗಳ ಎರಡು ಗಂಟೆ ( 6 ಮತ್ತು 7ನೇ) ಎರಡೂವರೆ ಗಂಟೆಯ ತಲಾ 120 ಮತ್ತು 150 ಪ್ರಶ್ನೆಗಳ ಸ್ಪರ್ಧಾತ್ಮಕ ಮಾದರಿ ಪರೀಕ್ಷೆ ನಡೆಸಲಾಗುತ್ತದೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮತ್ತೆ ವಿವರವಾದ ಬರವಣಿಗೆಯ ಎರಡನೇ ಹಂತದ ಪರೀಕ್ಷೆ ನಡೆದು, ಇಲ್ಲಿ ಆರಿಸಿ ಬಂದವರಿಗೆ ಸ್ವತಃ ಡಾ. ಮೋಹನ ಆಳ್ವರ ಸಹಿತ ಪ್ರಮುಖರ ಜತೆಗೆ ಸಂದರ್ಶನ ನಡೆದು ದಾಖಲಾತಿ ನಡೆಯುತ್ತದೆ. ಇಷ್ಟೇ ಅಲ್ಲದೆ ಸೈನಿಕರ ಮಕ್ಕಳು, ಅನಾಥರು, ಹಿಂದುಳಿದ ವರ್ಗದವರಿಗೆ, ಕ್ರೀಡೆ, ಸಾಂಸ್ಕೃತಿಕ ವಿಭಾಗದವರಿಗೂ ಇಲ್ಲಿ ಅವಕಾಶವಿದೆ.
60 ವಿದ್ಯಾರ್ಥಿಗಳೊಂದಿಗೆ ಆರಂಭ: 2009ರಲ್ಲಿ ಶಾಲೆ ಆರಂಭಿಸಿದಾಗ ಆಯ್ದ ಬರೇ 60 ಮಂದಿ ವಿದ್ಯಾರ್ಥಿಗಳಿದ್ದರು. ಅಂದು ಡಾ.ವಿ.ಎಸ್. ಆಚಾರ್ಯರ ಶಿಫಾರಸಿನಂತೆ ಏಕಕಾಲಕ್ಕೆ 8ರಿಂದ 10, ಬಳಿಕ 2013ರಲ್ಲೂ ಏಕಕಾಲಕ್ಕೆ 6 ಮತ್ತು 7 ತರಗತಿ ಆರಂಭಿಸಿದ ಅಪರೂಪದ ದಾಖಲೆ ಈ ಶಾಲೆಯದ್ದು. ಮೊದಲ ವರ್ಷದಿಂದಲೂ ಈವರೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ದಾಖಲಿಸುತ್ತಿದೆ.
2010ರಿಂದ ದಾಖಲಾತಿಯ ಒತ್ತಡ ಹೆಚ್ಚಿದ್ದರಿಂದ ಪ್ರವೇಶ ಪರೀಕ್ಷೆ ಆರಂಭಿಸಲಾಗಿದೆ. ಈ ಬಾರಿ ಪ್ರವೇಶಾಸಕ್ತರಿಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ.
‘ಈ ಶಾಲೆ ನಮ್ಮ ಅಧ್ಯಕ್ಷ ಡಾ. ಆಳ್ವರಿಗೆ ಅತ್ಯಂತ ಪ್ರೀತಿಯದ್ದು. ದಿನವೂ ಬೆಳಗ್ಗೆ ಅವರ ದಿನಚರಿ ಈ ಶಾಲೆಗೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸದೇ ಆರಂಭವಾಗುವುದೇ ಇಲ್ಲ’ ಎನ್ನಬಹುದು ಅಂತಾರೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಶ್ರೀನಿಧಿ ಎಳಚಿತ್ತಾಯ.
ಇಲ್ಲಿ ಮಕ್ಕಳನ್ನು ಹಂತ ಹಂತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ತರಬೇತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ. ಪಿಯು ಹಂತದಲ್ಲಿ ಆಂಗ್ಲ ಮಾಧ್ಯಮದವರ ಜತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಮಕ್ಕಳು ತಾವೇನೂ ಕಡಿಮೆಯಲ್ಲ ಎಂದು ಸಾಧಿಸುತ್ತಿದ್ದಾರೆ. ಬುದ್ಧಿವಂತಿಕೆ ಎದುರು ಭಾಷೆ, ಮಾಧ್ಯಮ ಯಾವತ್ತೂ ಅಡ್ಡಿಯಾಗುವುದಿಲ್ಲ ಎನ್ನುತ್ತಾರೆ ಡಾ. ಮೋಹನ ಆಳ್ವ.
ಸರ್ಕಾರಗಳೂ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಾ ಸಾವಿರಾರು ಮಾದರಿ ಶಾಲೆಗಳನ್ನು ವಿವಿಧ ಹೆಸರುಗಳ ಯೋಜನೆಯಡಿ ತೆರೆಯುತ್ತದೆ. ಆದರೆ ಫಲಿತಾಂಶ ನಗಣ್ಯವೇ.
ಇದೇ ಯೋಜನೆಯ ಒಂದು ಕೇಂದ್ರವನ್ನು ನಮ್ಮಲ್ಲೂ ಕೊಟ್ಟು ಅದೇ ಅನುದಾನ ಕೊಡಿ. ಸಾಧಿಸಿ ತೋರಿಸುತ್ತೇವೆ ಎನ್ನುತ್ತಾರೆ ಡಾ. ಆಳ್ವರು. ಮಾ.3ರಂದು ನಡೆಯುವ ಪ್ರವೇಶ ಪರೀಕ್ಷೆಗೆ ಈಗಾಗಲೇ ನೋಂದಾಯಿಸಿಕೊಂಡವರು 19006 ಮಂದಿ. ಈ ಪೈಕಿ ಬೆಳಗಾವಿ ಜಿಲ್ಲೆಯಿಂದಲೇ 6417 ಮಂದಿ.
ಬಾಗಲಕೋಟೆ, ಬಿಜಾಪುರ ಆಕಾಂಕ್ಷಿಗಳ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ. ದಕ್ಷಿಣ ಕನ್ನಡದಿಂದ 48 ಮತ್ತು ಉಡುಪಿಯಿಂದ 24 ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಬಾರಿ 13169 ಮಂದಿ ಆಕಾಂಕ್ಷಿಗಳಿದ್ದರು.ನಾನು ಪ್ರೌಢಶಿಕ್ಷಣವನ್ನು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ್ದೇನೆ. ಇಲ್ಲಿನ ಪ್ರಬುದ್ಧ ಶಿಕ್ಷಕರ, ಸದಾ ಪ್ರೋತ್ಸಾಹಿಸುವ ವಸತಿ ನಿಲಯ ಪಾಲಕರ ಹಾಗೂ ಆಡಳಿತ ವೃಂದದ ಮಾರ್ಗದರ್ಶನ ಹಾಗೂ ಇಲ್ಲಿನ ಗುಣಮಟ್ಟದ ಶಿಕ್ಷಣ ನನಗೆ ಜೀವನದಲ್ಲಿ ಯಾರ ಎದುರೂ ಕೀಳರಿಮೆ ಎಣಿಸಿದಂತೆ ಆತ್ಮಸ್ಥೈರ್ಯ ತುಂಬಿದೆ ಎನ್ನುತ್ತಾರೆ ಡಾ. ಸ್ನೇಹಾ ಆರ್. ಶೆಟ್ಟಿ.ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ನನಗೆ ಕವನ ರಚನೆಯಿಂದ ಹಿಡಿದು ಭಾಷಣ, ನಿರೂಪಣೆ ಇತ್ಯಾದಿಗಳಿಗೆ ವೇದಿಕೆ ನೀಡಿದೆ.
ಇಲ್ಲಿ ವಿದ್ಯಾಭ್ಯಾಸದ ಜೊತೆಗೆ ಮೌಲ್ಯಗಳು, ಸಂವೇದನಾಶೀಲತೆಗಳನ್ನು ಒಳಗೊಂಡ ಶಿಕ್ಷಣ ಪದ್ಧತಿಯಾಗಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಾರೆ ಎಂದು ಮುಂಬೈ ಪಿಎಚ್.ಡಿ ವಿದ್ಯಾರ್ಥಿನಿ ಗೀತಾ ಲಕ್ಷ್ಮೀ ಕೊಚ್ಚಿ ಅಭಿಪ್ರಾಯಪಡುತ್ತಾರೆ.