ಸಾರಾಂಶ
ಜಿಲ್ಲಾಮಟ್ಟದ ಆಧಾರ್ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು
ಕನ್ನಡಪ್ರಭ ವಾರ್ತೆ ಚಾಮರಾಜನಗರಜನಸಾಮಾನ್ಯರಿಗೆ ಅತ್ಯಾವಶ್ಯಕ ಗುರುತಿನ ದಾಖಲೆಯಾಗಿರುವ ಆಧಾರ್ ಕಾರ್ಡ್ ನೋಂದಣಿ, ನವೀಕರಣ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದ ಯಾವುದೇ ಸೌಲಭ್ಯ, ಸವಲತ್ತು ಪಡೆಯುವುದು, ಸಕಾಲ ಸೇವೆಗಳು ಸೇರಿದಂತೆ ಇತರೆ ಕಾರ್ಯಗಳಿಗೂ ಆಧಾರ್ ಗುರುತಿನ ದಾಖಲೆ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ನಾಗರಿಕರ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ನವೀಕರಣ ಕಾರ್ಯಗಳಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವಂತೆ ನಿರ್ದೇಶನ ನೀಡಿದರು. ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯ ಸ್ಪಂದನಾ ಕೇಂದ್ರ, ತಾಲೂಕು ಕಚೇರಿ, ನಾಡಕಚೇರಿ, ಗ್ರಾಮ ಒನ್ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರ, ಬಿ.ಎಸ್.ಎನ್.ಎಲ್ ಕಚೇರಿ, ಅಂಚೆ ಕಚೇರಿ ಹಾಗೂ ಸ್ಟೇಟ್ ಬ್ಯಾಂಕ್ ಮತ್ತು ಇತರೆ ಬ್ಯಾಂಕ್‌ಗಳಲ್ಲಿ ಆಧಾರ್ ನೊಂದಣಿ, ತಿದ್ದುಪಡಿ ಹಾಗೂ ನವೀಕರಣ ಕಾರ್ಯ ನಿರ್ವಹಿಸಲಾಗುತ್ತಿದೆ. ಆಧಾರ್ ನೊಂದಣಿಯಿಂದ ಯಾರು ಕೂಡ ವಂಚಿತರಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು. ಚಾಮರಾಜನಗರ ತಾಲೂಕಿನಲ್ಲಿ 24, ಗುಂಡ್ಲುಪೇಟೆ 12, ಕೊಳ್ಳೇಗಾಲ 17, ಹನೂರು 12 ಹಾಗೂ ಯಳಂದೂರು ತಾಲೂಕಿನ 7 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 72 ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. 5 ವರ್ಷದೊಳಗಿನ 27,815 ಮಕ್ಕಳು, 5 ರಿಂದ 18 ವರ್ಷದೊಳಗಿನ 1,78,789 ಹಾಗೂ 18 ವರ್ಷ ಮೇಲ್ಪಟ್ಟ 8,89,513 ಸೇರಿ ಜಿಲ್ಲೆಯಲ್ಲಿ ಒಟ್ಟು 10,96,117 ಜನರನ್ನು ಈಗಾಗಲೇ ನೋಂದಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಡಂಚಿನ ಜನರು ಸೇರಿದಂತೆ ಆಧಾರ್ ನೋಂದಣಿಯಾಗದಿರುವವರನ್ನು ಗುರುತಿಸಿ ನೋಂದಾಯಿಸುವ ಕೆಲಸವಾಗಬೇಕು ಎಂದರು. ಆಧಾರ್ ನೋಂದಣಿಗಾಗಿ ಕೇಂದ್ರಗಳಿಗೆ ಬರುವ ನಾಗರಿಕರಿಂದ ಯಾವುದೇ ದೂರುಗಳು ಬಾರದಂತೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಆಧಾರ್ ಸೇವಾ ಕೇಂದ್ರಗಳ ನಿರ್ವಹಣೆಗಾಗಿ ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯಲಾಗಿದ್ದು, ಗಣಕಯಂತ್ರಗಳಲ್ಲಿ ತಾಂತ್ರಿಕ ಸಮಸ್ಯೆ, ಆಪರೇಟರ್ ಕೊರತೆ ಸೇರಿದಂತೆ ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಆಧಾರ್ ನೋಂದಣಿಯಾಗಿ 10 ವರ್ಷಗಳಿಂದ ಒಂದೇ ವಿಳಾಸದಲ್ಲಿರುವ ನಾಗರಿಕರು ಆಧಾರ್ ನವೀಕರಣ ಮಾಡಿಸಬೇಕು. ಜಿಲ್ಲೆಯಲ್ಲಿ ನೋಂದಣಿಯಾಗಿರುವ 10, 96,117ರ ಪೈಕಿ 3.20,656 ಜನರು ನವೀಕರಣ ಮಾಡಿಸಿಕೊಳ್ಳಬೇಕಾಗಿದೆ. ಅಲ್ಲದೆ ನೋಂದಣಿಯಾಗಿರುವ 10,96,117ರ ಪೈಕಿ 4,72,147 ಜನರು ಮೊಬೈಲ್ ಸಂಖ್ಯೆಗೆ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳುವುದು ಬಾಕಿ ಉಳಿದಿದೆ. ಆಧಾರ್ ಸೀಡಿಂಗ್ ಆಗದಿದ್ದರೆ ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿರುವುದರಿಂದ ಅಧಿಕಾರಿಗಳು ನಾಗರಿಕರೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.ಆಧಾರ್ ನೋಂದಣಿ ಸಂಬಂಧ ತಾಲೂಕು ಮಟ್ಟದಲ್ಲಿ ನೋಂದಣಿ, ತಿದ್ದುಪಡಿ, ಪ್ರಗತಿ ಕಾರ್ಯಗಳ ಬಗ್ಗೆ ಪರಿಶೀಲಿಸಲು ತಾಲೂಕು ಕಚೇರಿಯ ಶಿರಸ್ತೇದಾರರನ್ನು ತಾಲೂಕು ಆಧಾರ್ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು. ನೋಡಲ್ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ತಾಲೂಕು ವ್ಯಾಪ್ತಿಯ ಎಲ್ಲಾ ನಾಡಕಚೇರಿಗಳಿಗೂ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಪರಿಶೀಲಿಸಿ ಉಪ ತಹಸೀಲ್ದಾರರ ಸಭೆ ಕರೆದು ಪ್ರಗತಿ ಕುರಿತು ಚರ್ಚಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಬೆಂಗಳೂರಿನ ಅಧಾರ್ ಯುಐಡಿಐಎಐ ಉಪನಿರ್ದೇಶಕರಾದ ರಾಘವೇಂದ್ರ, ಜಿಲ್ಲಾ ಅಧಾರ್ ಸಮಾಲೋಚಕರಾದ ಪ್ರಭುಸ್ವಾಮಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಅಂಚೆ ಕಚೇರಿ ನಿರೀಕ್ಷಕರು ಸಭೆಯಲ್ಲಿ ಇದ್ದರು. ಎಲ್ಲಾ ತಾಲೂಕು ತಹಸೀಲ್ದಾರರು ವರ್ಚುವೆಲ್ ಮೂಲಕ ಭಾಗವಹಿಸಿದ್ದರು. ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಆಧಾರ್ ಸಮಿತಿ ಸಭೆಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧ್ಯಕ್ಷತೆ ವಹಿಸಿದರು.