ಆಧಾರ್- ಆರ್‌ಟಿಸಿ ಸೀಡಿಂಗ್‌: ಶೇ. 20.67 ಪ್ರಗತಿ

| Published : May 21 2024, 12:32 AM IST

ಸಾರಾಂಶ

ಜಿಲ್ಲೆಯಲ್ಲಿ ೨೦,೮೮,೧೫೧ ರೈತರನ್ನು ಆಧಾರ್ ಲಿಂಕ್ ಮಾಡಲು ಗುರುತಿಸಲಾಗಿದ್ದು, ಈಗಾಗಲೇ ೪,೩೧,೫೭೨ ರೈತರು ಆಧಾರ್ ಲಿಂಕ್ ಮಾಡಿಸಿದ್ದಾರೆ.

ಜಿ.ಡಿ. ಹೆಗಡೆ

ಕಾರವಾರ: ರಾಜ್ಯ ಸರ್ಕಾರ ಪಹಣಿ(ಆರ್‌ಟಿಸಿ) ಹಾಗೂ ಆಧಾರ್ ಲಿಂಕ್(ಸೀಡಿಂಗ್) ಮಾಡಲು ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಶೇ. ೨೦.೬೭ರಷ್ಟು ಲಿಂಕ್ ಮಾಡಲಾಗಿದೆ. ಅನುಕೂಲತೆ ಪಡೆಯಲು ಆಸಕ್ತಿ ತೋರಿ ಕೃಷಿಕರು ಸೀಡಿಂಗ್ ಮಾಡಿಸಲು ಮುಂದಾಗಬೇಕಿದೆ.

ಕೃಷಿ ಭೂಮಿಗೆ ಸಂಬಂಧಿಸಿದ ತೊಂದರೆ ತೊಡಕುಗಳನ್ನು ನಿವಾರಿಸಲು ಈ ವ್ಯವಸ್ಥೆಯನ್ನು ಮಾಡಿದ್ದು, ಕಳೆದ ೭ ವರ್ಷದ ಹಿಂದೆಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಹೆಚ್ಚಿನ ಕೃಷಿಕರು ಆಧಾರ್, ಆರ್‌ಟಿಸಿ ನೋಂದಣಿ ಮಾಡಿಕೊಂಡಿರಲಿಲ್ಲ. ಪ್ರಸಕ್ತ ಕಡ್ಡಾಯಗೊಳಿಸಿದ್ದು, ಕೃಷಿಕರೆ ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬಹುದು. ಒಂದು ವೇಳೆ ಸಾಧ್ಯವಾಗದೇ ಇದ್ದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ (ಗ್ರಾಮ ಆಡಳಿತ ಅಧಿಕಾರಿ) ಸಂಪರ್ಕಿಸಿದರೆ ಆಧಾರ್ ಮತ್ತು ಆರ್‌ಟಿಸಿ ಲಿಂಕ್ ಮಾಡಿಕೊಡುತ್ತಾರೆ. ಜಾಗದ ಮಾಲೀಕತ್ವದ ಗೊಂದಲ, ಜಮೀನು ಮಾರಾಟ ಮಾಡಲು, ಸರ್ಕಾರದಿಂದ ಬರುವ ಪರಿಹಾರಗಳಿಗೆ, ಸಾಲ ಪಡೆಯಲು, ಲಿಂಕ್ ಮಾಡಿಕೊಳ್ಳುವುದು ಅವಶ್ಯಕವಾಗಿದ್ದು, ಇದರಲ್ಲಿ ಭೂ ಮಾಲೀಕರ ವಿವರ, ವಿಸ್ತೀರ್ಣ, ಬೆಳೆ ವಿವರ, ಮಣ್ಣಿನ ಪ್ರಕಾರ ಇತ್ಯಾದಿ ಮಾಹಿತಿ ಇರಲಿದೆ.

ಜಿಲ್ಲೆಯಲ್ಲಿ ಎಷ್ಟು?: ಕಾರವಾರ ಶೇ. ೧೪.೫೭, ಜೋಯಿಡಾ ಶೇ. ೩೯.೮೧, ಹಳಿಯಾಳ ಶೇ. ೪೭.೫೭, ಯಲ್ಲಾಪುರ ಶೇ. ೩೧.೭೯, ಮುಂಡಗೋಡ ಶೇ. ೧೬.೧೪, ಶಿರಸಿ ಶೇ. ೨೨.೬, ಅಂಕೋಲಾ ಶೇ. ೧೩.೪೬, ಕುಮಟಾ ಶೇ. ೨೨.೯೫, ಸಿದ್ದಾಪುರ ಶೇ. ೪೦.೯, ಹೊನ್ನಾವರ ಶೇ. ೧೫.೧೪, ಭಟ್ಕಳ ಶೇ. ೯.೪೯, ದಾಂಡೇಲಿ ಶೇ. ೩೩.೫೫ರಷ್ಟು ಸಾಧನೆಯಾಗಿದೆ.

ಜಿಲ್ಲೆಯಲ್ಲಿ ೨೦,೮೮,೧೫೧ ರೈತರನ್ನು ಆಧಾರ್ ಲಿಂಕ್ ಮಾಡಲು ಗುರುತಿಸಲಾಗಿದ್ದು, ಈಗಾಗಲೇ ೪,೩೧,೫೭೨ ರೈತರು ಆಧಾರ್ ಲಿಂಕ್ ಮಾಡಿಸಿದ್ದಾರೆ. ಜಮೀನಿನ ಮಾಲೀಕತ್ವಕ್ಕಾಗಿ, ಸರ್ಕಾರದಿಂದ ಬರುವ ಪರಿಹಾರ ಪಡೆದುಕೊಳ್ಳಲು, ಸಾಲ ಸೌಲಭ್ಯ ಪಡೆದುಕೊಳ್ಳಲು, ನಕಲಿ ದಾಖಲೆ ಸೃಷ್ಟಿಸಿ ನಡೆಯುವ ಭೂಗಳ್ಳತನ ತಡೆಯಲು ಹೀಗೆ ಸಾಕಷ್ಟು ಉಪಯೋಗವಿದ್ದು, ಜಮೀನು ಹೊಂದಿದ ಮಾಲೀಕರು ನಿರ್ಲಕ್ಷ್ಯ ಮಾಡದೇ ತಮ್ಮ ಊರಿನ ಗ್ರಾಮ ಆಡಳಿತ ಅಧಿಕಾರಿಯನ್ನು ಸಂಪರ್ಕಿಸಿ ಆಧಾರ್ ಮತ್ತು ಆರ್‌ಟಿಸಿ ಲಿಂಕ್ ಮಾಡಿಸುವತ್ತ ಆಸಕ್ತಿ ತೋರಬೇಕಿದೆ.

ಆಧಾರ ಲಿಂಕ್‌ ಮಾಡುವುದು ಹೇಗೆ?https://landrecords.karnataka.gov.in/service4 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ರೈತರ ಆಧಾರ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್‌ ನಂಬ‌ರ್ ಹಾಕಬೇಕು. ಆ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಆಗ ಮೊಬೈಲ್‌ಗೆ ಬಂದ ಒಟಿಪಿಯನ್ನು ಅಲ್ಲಿ ಬರೆದು ಸಬ್‌ಮೀಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಭೂಮಿ ಸಿಟಿಜನ್‌ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ಆರ್‌ಟಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಲು ನೀವು ಬಯಸುತ್ತೀರಾ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿ ಯೆಸ್ ಎನ್ನುವುದನ್ನು ಕ್ಲಿಕ್ ಮಾಡಬೇಕು. ಪಹಣಿಗೆ ಆಧಾ‌ರ್ ಕಾರ್ಡ್ ಲಿಂಕ್ ಆಗುತ್ತದೆ. ಕೆಲವೇ ಸೆಕೆಂಡಿನಲ್ಲಿ ಆಧಾರ್‌ಗೆ ಜೋಡಣೆಯಾದ ಮೊಬೈಲ್‌ಗೆ ಆಧಾ‌ರ್ ಪಹಣಿ ಲಿಂಕ್ ಆಗಿದೆ ಎಂಬ ಸಂದೇಶವೂ ಕಾಣಿಸುತ್ತದೆ. ಶೀಘ್ರ ಪೂರ್ಣ: ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಜಮೀನಿನ ಪಹಣಿ ಹಾಗೂ ಆಧಾರ್ ಲಿಂಕ್ ಮಾಡಲು ಸಂಬಂಧಿಸಿದಂತೆ ಗ್ರಾಮ ಆಡಳಿತ ಅಧಿಕಾರಿಗಳು(ವಿಎಒ) ಕಾರ್ಯನಿರತರಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಶೇ. ೨೦.೬೭ರಷ್ಟು ಆಗಿದ್ದು, ಉಳಿದವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ತಿಳಿಸಿದರು.