ಬೆಂಗಳೂರನ್ನು ಮತ್ತಷ್ಟು ವಿಸ್ತರಣೆಗೆ ಆಮ್‌ ಆದ್ಮಿ ಆಕ್ಷೇಪ

| Published : Jul 13 2024, 01:31 AM IST

ಸಾರಾಂಶ

ಯಾವುದೇ ಕಾರಣಕ್ಕೂ ಬೆಂಗಳೂರನ್ನು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಬೇಡಿ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಹೊರಟಿರುವ ನಿರ್ಧಾರ ಆಕ್ಷೇಪಾರ್ಹ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯಾವುದೇ ಕಾರಣಕ್ಕೂ ಬೆಂಗಳೂರನ್ನು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಬೇಡಿ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಹೊರಟಿರುವ ನಿರ್ಧಾರ ಆಕ್ಷೇಪಾರ್ಹ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಈ ಸಂಬಂಧ ಅವರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಸಮಸಮಾಜ ನಿರ್ಮಾಣದ ಸದುದ್ದೇಶ ಹೊಂದಿರುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರು ಕೇಂದ್ರೀಕರಿಸಿದ ಅಭಿವೃದ್ಧಿಯಂತಹ ಅಸಮಾನ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬಾರದು. ರಾಜ್ಯದ ಜನರ ತೆರಿಗೆ ಹಣವನ್ನು ಕೇವಲ ಬೆಂಗಳೂರನ್ನು ವಿಸ್ತರಿಸಲು ವಿನಿಯೋಗಿಸಿದರೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಜನರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ಹೆಚ್ಚಿನ ಯುವಕರು ಉದ್ಯೋಗಕ್ಕಾಗಿ ದೂರದ ಬೆಂಗಳೂರನ್ನು ಆಯ್ಕೆ ಮಾಡುವ ಬದಲು ಹೈದರಾಬಾದ್‌, ಪುಣೆ, ಮುಂಬೈ, ಪಣಜಿಯಂತಹ ನೆರೆ ರಾಜ್ಯದ ನಗರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ಕೇಂದ್ರೀಕರಿಸಿದ ಅಭಿವೃದ್ಧಿಯಿಂದ ಯುವಕರೆಲ್ಲ ಬೇರೆ ರಾಜ್ಯಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಹೊರಟಿರುವ ನಿರ್ಧಾರ ಆಕ್ಷೇಪಾರ್ಹವಾಗಿದೆ. ಕೇವಲ ಹೆಸರು ಬದಲಿಸುವುದರಿಂದ ಅಭಿವೃದ್ಧಿಯಾಗುವುದಿದ್ದರೆ ಕರ್ನಾಟಕದ ಹೆಸರನ್ನೇ ಬೆಂಗಳೂರು ಎಂದು ಮಾಡುವುದು ಒಳಿತಲ್ಲವೇ? ಆಗ ಇಡೀ ಕರ್ನಾಟಕವೇ ಅಭಿವೃದ್ಧಿಯಾದಂತೆ ಆಗುತ್ತದೆಯಲ್ಲವೇ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇಡೀ ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿದ್ದಾರೆಯೋ ಅಥವಾ ಕೇವಲ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿಗಳಿಗೆ ಸೀಮಿತಗೊಂಡ ಉಪಮುಖ್ಯಮಂತ್ರಿಯಾಗಿದ್ದಾರೆಯೋ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿರುವುದು ಕೇವಲ ಜಿಲ್ಲೆಯ ಹೆಸರು ಬದಲಾವಣೆಗಾಗಿ ಅಲ್ಲ. ಕರಾಳ ರಿಯಲ್‌ ಎಸ್ಟೇಟ್‌ ದಂಧೆಗೆ ಪರವಾನಗಿ ಪಡೆಯುವ ಪ್ರಸ್ತಾವನೆಯಾಗಿದೆ. ರಾಮನಗರವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿ, ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಿದರೆ ಕೆಲವೇ ಕೆಲವು ಭೂಮಾಲೀಕರಿಗೆ ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಜನರಿಗೆ ಯಾವುದೇ ಉಪಯೋಗವಿಲ್ಲ. ತಮ್ಮ ಆಧಾರ್‌ ಸೇರಿದಂತೆ ಮತ್ತಿತರ ದಾಖಲೆ ಪತ್ರಗಳಲ್ಲಿ ಜಿಲ್ಲೆ ಹೆಸರನ್ನು ತಿದ್ದಿಸುವ ಸಲುವಾಗಿ ಸರ್ಕಾರಿ ಕಚೇರಿಗಳನ್ನು ಅಲೆಯಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎಂದು ಚಂದ್ರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಮನಗರ, ಚನ್ನಪಟ್ಟಣಗಳನ್ನು ಬೆಂಗಳೂರಿಗೆ ಸೇರಿಸುವ ಪ್ರಸ್ತಾವವನ್ನು ತಿರಸ್ಕರಿಸಬೇಕು. ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಉಭಯ ನಗರಗಳನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.