ಸನಾತನ ಸಂಸ್ಕೃತಿ ಮುಂದುವರಿಸಬೇಕು: ಸುಬ್ರಹ್ಮಣ್ಯ ಸ್ವಾಮೀಜಿ

| Published : Jan 10 2025, 12:47 AM IST

ಸಾರಾಂಶ

ಆನೆಮಹಲಿನಿಂದ ನಡೆದ ಹೊರೆಕಾಣಿಕೆ ಮೆರವಣಿಗೆಗೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿನ ವಾಹನಗಳಲ್ಲಿ ಹಸಿರುವಾಣಿಯನ್ನು ತರಲಾಯಿತು. ಚೆಂಡೆವಾದನ, ಕೊಂಬು, ಕೀಲು ಕುದುರೆ ಕುಣಿತ, ಕುಣಿತ ಭಜನೆ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ್ದವು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಆಹಾರವನ್ನು ಮೊದಲು ದೇವರಿಗೆ ಅರ್ಪಿಸಿದ ನಂತರವೇ ನಾವು ಸೇವಿಸುವ ಪದ್ಧತಿ ನಮ್ಮ ಸನಾತನ ಸಂಸ್ಕೃತಿಯದ್ದು. ಇಂತಹ ಶ್ರೇಷ್ಠ ಕ್ರಮವನ್ನು ಮುಂದುವರಿಸಿಕೊಂಡು ಹೋಗುವುದರಲ್ಲಿ ನಮ್ಮೆಲ್ಲರ ಶ್ರೇಯಸ್ಸು ಅಡಗಿದೆ ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರಿ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿ ನುಡಿದರು.

ಅವರು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಿಗೆ ನಡೆಯುತ್ತಿರುವ ಅಷ್ಟಬಂಧ-ಬ್ರಹ್ಮಕಲಶೋತ್ಸವ ಸಮಾರಂಭದ ಮೊದಲ ದಿನವಾದ ಬುಧವಾರ ಉಗ್ರಾಣ ಪೂಜೆಯನ್ನು ನೆರವೇರಿಸಿ ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವದಿಸಿದರು. ಉಗ್ರಾಣದ ಚಟುವಟಿಕೆಗಳಿಗೆ ದೀಪಬೆಳಗಿಸಿ ಚಾಲನೆ ನೀಡಿದ ಧರ್ಮಸ್ಥಳ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಹರ್ಷೇಂದ್ರ ಕುಮಾರ್ ಅವರು, ಇಂದಿನ ಜನಾಂಗ ವಿದ್ಯಾವಂತರಾಗಿದ್ದಾರೆ, ವಿಚಾರವಂತರಾಗಿದ್ದಾರೆಯೇ ಹೊರತು ಆಚಾರವಂತರಾಗಿಲ್ಲದಿರುವುದು ಬೇಸರದ ಸಂಗತಿ. ಎಲ್ಲರೂ ಆಚಾರವಂತರಾದರೆ ಹಿಂದೂಧರ್ಮಕ್ಕೆ ಅಪೂರ್ವ ಶಕ್ತಿ ಬಂದಂತೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ಭಕ್ತರ ಒತ್ತಡ ನಿರ್ವಹಣೆಗಾಗಿ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸಿದೆ. ಇತ್ತೀಚೆಗೆ ಉಜಿರೆ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಉಚಿತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಜನರ ಹಿತಕ್ಕಾಗಿ ಕ್ಷೇತ್ರ ಹಲವಾರು ಯೋಜನೆಗಳನ್ನು ತರುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅನುವಂಶಿಕ ಆಡಳಿತ ಮೊಕ್ತೇಸರ ಮತ್ತು ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಪ್ರಾಸ್ತಾವಿಕವಾಗಿ ಮಾತನಾಡಿ, 17 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದೆ. ಈ ಬಾರಿ ದೇವತಾಕಾರ್ಯಗಳಿಗೆ ಮತ್ತು ಅನ್ನದಾಸೋಹಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡಲಾಗಿದೆ. ಯಾವುದೇ ದುಂದುವೆಚ್ಚಗಳಿಗೆ ಅವಕಾಶವಿಲ್ಲ ಎಂದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕಳ, ಯೋಗೀಶ್ ಕುಮಾರ್ ನಡಕರ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸರಸ್ವತಿ, ಬ್ರಹ್ಮಕಲಶೋತ್ಸವದ ಪ್ರಧಾನ ಸಂಚಾಲಕ ಶಿವಪ್ರಸಾದ ಅಜಿಲ ಉಪಸ್ಥಿತರಿದ್ದರು.

ಧರ್ಮಸ್ಥಳ ಹರ್ಷೇಂದ್ರ ಕುಮಾರ್, ಅಳದಂಗಡಿಯ ವೈದ್ಯ ಡಾ.ಎನ್‌.ಎಂ. ತುಳಪುಳೆ, ಕೋಡಂಗೆ ಸಂಜೀವ ಪೂಜಾರಿ, ಮಲ್ಲಿಕಾ ಪಕಳ, ಯೋಗೀಶ್ ಕುಮಾರ್ ನಡಕರ, ಅರ್ಚಕ ಪ್ರಕಾಶ್ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.

ಸಮಿತಿ ಕಾರ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ವಂದಿಸಿದರು. ಸ್ವಾಗತ ಸಮಿತಿ ಸದಸ್ಯ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಇದಕ್ಕೂ ಮೊದಲು ತಂತ್ರಿವರ್ಯರಾದ ಬ್ರಹ್ಮಶ್ರೀ ವೇ.ಮೂ. ಶ್ರೀಪಾದ ಪಾಂಗಣ್ಣಾಯ ಹಾಗೂ ಪುರೋಹಿತರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಡಾ. ಪದ್ಮಪ್ರಸಾದ ಅಜಿಲರ ಉಪಸ್ಥಿತಿಯಲ್ಲಿ ಆಚಾರ್ಯಾದಿ ಋತ್ವಿಗ್ವರಣ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನೆರವೇರಿತು. ದೇವಳದೊಳಗೆ ಕಂಕಣ ಬಂಧ, ಸಪ್ತಶುದ್ಧಿ, ಪ್ರಾಸಾದ ಶುದ್ಧ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ಮೆರವಣಿಗೆ: ಆನೆಮಹಲಿನಿಂದ ನಡೆದ ಹೊರೆಕಾಣಿಕೆ ಮೆರವಣಿಗೆಗೆ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿನ ವಾಹನಗಳಲ್ಲಿ ಹಸಿರುವಾಣಿಯನ್ನು ತರಲಾಯಿತು. ಚೆಂಡೆವಾದನ, ಕೊಂಬು, ಕೀಲು ಕುದುರೆ ಕುಣಿತ, ಕುಣಿತ ಭಜನೆ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದ್ದವು.

ಕುಣಿತ ಭಜನೆ: ದೇವಳದ ಎದುರು ಭಾಗದ ಕ್ರೀಡಾಂಗಣದಲ್ಲಿ ತಾಲೂಕಿನಾದ್ಯಂತದ ವಿವಿಧ ಗ್ರಾಮಗಳಲ್ಲಿರುವ 35 ಕುಣಿತ ಭಜನಾ ತಂಡಗಳ ಆಕರ್ಷಕ ಸಮವಸ್ತ್ರಧಾರಿ ಭಜಕರಿಂದ ಮನಮೋಹಕ ಕುಣಿತ ಭಜನೆ ನಡೆಯಿತು.

ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಗುರುವಾರ ದೇವಳದಲ್ಲಿ ಪ್ರಾತಃಕಾಲದಿಂದ ಮಧ್ಯಾಹ್ನದವರಗೆ ಗಣಪತಿ ಹೋಮ, ಕ್ಷಾಲನಾದಿ ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹೋಮಗಳು, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಗಣಪತಿ ಪ್ರಾಯಶ್ಚಿತ್ತ ಹೋಮ ದುರ್ಗಾ ಪೂಜೆ, ಅಂಕುರ ಪೂಜೆ ಮಹಾಪೂಜೆ, ಪ್ರಸಾದ ವಿತರಣೆ ನೆರವೇರಿತು. ರಾತ್ರಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ನಡೆದ ಗೀತ ಸಾಹಿತ್ಯ ಸಂಭ್ರಮ ಜನಮನ ರಂಜಿಸಿತು.

ಇಂದಿನ ಕಾರ್ಯಕ್ರಮಗಳು: ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ದೇವಳದಲ್ಲಿ ಶಾಂತಿಹೋಮಗಳು, ಕಲಶಾಭಿಷೇಕ, ಅಷ್ಟಬಂಧ ಪ್ರಕ್ರಿಯೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಂಟಪ ಸಂಸ್ಕಾರ, ಮಂಡಲ ರಚನೆ, ಬಲಿ ಬಿಂಬಾಧಿವಾಸ, ಅಧಿವಾಸ ಹೋಮ, ಮಹಾಪೂಜೆ, ಪ್ರಸಾದವಿತರಣೆ ನೆರವೇರಲಿದೆ. ಸಂಜೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ದೇವಸ್ಥಾನಕ್ಕೆ ಭೇಟಿ ನೀಡುವರು.