ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರದ ಟೀಸರ್ ಅನ್ನು ಕೂಡಲೆ ರದ್ದುಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಸೋಮವಾರ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರದ ಟೀಸರ್ ಅನ್ನು ಕೂಡಲೆ ರದ್ದುಗೊಳಿಸಬೇಕೆಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಸೋಮವಾರ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ.ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ಈ ಟೀಸರ್‌ನಲ್ಲಿರುವ ಅಶ್ಲೀಲ ದೃಶ್ಯಗಳು ಮಹಿಳೆಯರ ಹಾಗೂ ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಯಾವುದೇ ವಯಸ್ಸಿನ ಮಿತಿ ಅಥವಾ ಮುನ್ನೆಚ್ಚರಿಕೆ ಇಲ್ಲದೆ ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ಈ ದೃಶ್ಯಗಳು ಮಹಿಳೆಯರ ಘನತೆಗೆ ಕುಂದು ತರುವಂತಿದ್ದು ಕನ್ನಡದ ಐತಿಹಾಸಿಕ ಸಾಂಸ್ಕೃತಿಕ ಜಗತ್ತಿಗೆ ಮಾಡುತ್ತಿರುವ ತೀವ್ರ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮೇಲೆ ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ ಇದು ಗಂಭೀರ ದುಷ್ಪರಿಣಾಮಗಳನ್ನು ಬೀರುತ್ತಿದೆ. ರಾಜ್ಯ ಮಹಿಳಾ ಆಯೋಗವು ಈ ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಈ ಟೀಸರ್ ಅನ್ನು ಕೂಡಲೇ ರದ್ದುಗೊಳಿಸಲು ಮತ್ತು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲು ರಾಜ್ಯ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ನಮ್ಮ ನಾಡಿನ ಮಹಿಳೆಯರ ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಂವಿಧಾನಿಕ ಕರ್ತವ್ಯಕ್ಕೆ ಬದ್ಧವಾಗಿರುವ ಮಹಿಳಾಯೋಗವು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಸರ್ಕಾರವು ಸಹ ಈ ಬಗ್ಗೆ ಕಠಿಣವಾದಂತಹ ಕಾನೂನುಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ಮುಖಂಡರಾದ ವೀಣಾ ಸರ್ರಾವ್, ಜ್ಯೋತಿ ಮತ್ತಿತರರು ಇದ್ದರು.