ಸಾರಾಂಶ
ಆಟಿದ ಅಟಿಲ್ ವಿಶೇಷ ಕಾರ್ಯಕ್ರಮದಲ್ಲಿ 25-3೦ ವಿಶೇಷ ಖಾದ್ಯಗಳನ್ನು ತಯಾರಿಸಿ,ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತುಳುನಾಡಿನ ಪ್ರಾದೇಶಿಕ ವಿಶೇಷತೆಗಳಲ್ಲಿ ಆಟಿ ಆಚರಣೆಯೂ ಒಂದಾಗಿದೆ. ಪ್ರಕೃತಿಯ ಸಸ್ಯಮೂಲಗಳು ದೇಹದ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಶರೀರದ ರೋಗ ರುಜಿನಗಳಿಗೆ ಆಟಿ ಕಷಾಯದಂತಹ ಔಷಧೀಯ ಸೇವನೆ ವೈಜ್ಞಾನಿಕವಾಗಿಯೂ ಆರೋಗ್ಯವರ್ಧಕವಾಗಿದ್ದು ಈ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿ ಹೇಳಬೇಕಾಗಿದೆ ಎಂದು ಉಜಿರೆ ಎಸ್ ಡಿ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ದಿವ ಕೊಕ್ಕಡ ಹೇಳಿದರು. ಅವರು ಶನಿವಾರ ಉಜಿರೆಯ ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಶ್ರೀ ಧ ಮಂ.ಶಿಕ್ಷಕರ ತರಬೇತಿ ಸಂಸ್ಥೆ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ ನಡೆದ ಆಟಿದ ಅಟಿಲ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಟಿ ಆಚರಣೆಯ ಮಹತ್ವ ತಿಳಿಸಿದರು.ತುಳುನಾಡಿನ ಪ್ರಾಚೀನ ಜೀವನ ಪದ್ಧತಿಯನ್ನು ನಾವು ಮರೆತಿದ್ದೇವೆ. ತುಳುವರು ವಿಶೇಷ ಜ್ಞಾನ ಸಂಪನ್ನರು. ಆಟಿ ಅಮಾವಾಸ್ಯೆಯಂದು ಹಾಲೆ ಮರದ ತೊಗಟೆಯ ಕಷಾಯ ಸೇವನೆ ವೈಜ್ಞಾನಿಕವಾಗಿಯೂ ನಂಜು ನಿವಾರಕ. ಅಂದು ಕೃಷಿಯ ಗದ್ದೆಗೆ ಕಾಪು ಇಡುವ ಪದ್ಧತಿ,ಮರಕೆಸುವಿನ ಪತ್ರೊಡೆ ಸೇವನೆ, ಆಟಿ ತೀರ್ಥ ಸ್ನಾನ, ಮಾರಿ ಓಡಿಸುವ ಆಟಿ ಕಳಂಜ ಮೊದಲಾದ ಪ್ರಾದೇಶಿಕ ಆಚರಣೆಯ ಮಹತ್ವ ಅರಿತು ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಪ್ರಯತ್ನವೇ ಆಟಿ ಆಚರಣೆಯ ಸಂದೇಶವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ,ಅಧ್ಯಕ್ಷತೆ ವಹಿಸಿ ಮಾತನಾಡಿದ ಸೋನಿಯಾ ವರ್ಮ ಅವರು ವಿಪರೀತ ಮಳೆ ಸುರಿಯುವ ಬೇಸಾಯದ ನಾಟಿ ಸಂದರ್ಭದಲ್ಲಿ ಸುತ್ತುಮುತ್ತಲಿನ ಪ್ರಕೃತಿ ಜನ್ಯ ಸಸ್ಯ, ಸೊಪ್ಪು, ತರಕಾರಿಗಳ ಸೇವನೆ ಔಷಧೀಯ ಗುಣ ಹೊಂದಿದೆ. ಪರಂಪರೆಯ ಪಾಕವೈವಿಧ್ಯದ ಅರಿವು ಮುಂದಿನ ಪೀಳಿಗೆಗೆ ಅಗತ್ಯವಿದೆ. ಹಲಸು, ಮಾವು, ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ, ಹಲಸಿನ ಬೀಜ ಶರೀರದ ಆರೋಗ್ಯಕ್ಕೆ ಒಳ್ಳೆಯದೆಂದು ಹಿರಿಯರ ಅನುಭವ. ಆಟಿ ಅಮಾವಾಸ್ಯೆಯಂದು ಹಾಲೆ ಕಷಾಯ ಕುಡಿದು ಉಷ್ಣಕ್ಕೆ ಮೆಂತೆ ಗಂಜಿ ಸೇವನೆ ಹಿರಿಯರಿಂದ ನಡೆದುಬಂದಿದೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಆಟಿ ತಿಂಗಳ ವಿಶೇಷ ಆಹಾರದ ರುಚಿ ಬೆಳೆಸಿ ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದರು.ಸಮೀರ್ ಅವರು ಆಟಿ ತಿಂಗಳ ಮಹತ್ವ, ಪ್ರಭಾವತಿ ಆಚರಣೆಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಪೂರ್ವಾಧ್ಯಕ್ಷ ಅರುಣ ಕುಮಾರ್ ಎಂ.ಎಸ್., ಸದಸ್ಯ ಪ್ರಶಾಂತ್ ಜೈನ್, ಎಸ್‌ಡಿಎಂ ಕ್ರೀಡಾ ಸಂಘದ ನಿರ್ದೇಶಕ ರಮೇಶ್, ರತ್ನಮಾನಸದ ರವಿಚಂದ್ರ ಉಪಸ್ಥಿತರಿದ್ದರು. ರತ್ನಮಾನಸದ ಪಾಲಕ ಯತೀಶ್ ಕುಮಾರ್ ಸ್ವಾಗತಿಸಿದರು. ಎಸ್ ಡಿ.ಎಂ. ಡಿ.ಎಡ್ ಕಾಲೇಜು ಪ್ರಾಂಶುಪಾಲ ಸ್ವಾಮಿ ವಂದಿಸಿದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಧ ಮಂ , ಶಿಕ್ಷಕರ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು, ರತ್ನಮಾನಸದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಟಿದ ಅಟಿಲ್ ವಿಶೇಷ ಕಾರ್ಯಕ್ರಮದಲ್ಲಿ 25-3೦ ವಿಶೇಷ ಖಾದ್ಯಗಳನ್ನು ತಯಾರಿಸಿ,ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು.