ಸಾರಾಂಶ
ವಿಶೇಷ ವರದಿ: ಮಲ್ಲಿಕಾರ್ಜುನ ಪಟ್ಟಣಶೆಟ್ಟಿಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದ್ದರೂ ವಿಜಯಪುರ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಈವರೆಗೆ ಮಳೆಯೇ ಆಗಿಲ್ಲ. ತಾಲೂಕಿನ ತಿಳಗೂಳ ಗ್ರಾಮಸ್ಥರು ಮಳೆಗಾಗಿ ಗುರ್ಜಿ ಪೂಜೆ ಮೊರೆ ಹೋಗಿದ್ದಾರೆ. ಮುಂಗಾರು ಮಳೆ ಶುರುವಾಗಿ ಹಲವು ತಿಂಗಳು ಕಳೆದರೂ ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆಯೇ ಇಲ್ಲ. ಹೀಗಾಗಿ, ರೈತರು ಗುರ್ಜಿ ಪೂಜೆ ಮಾಡುತ್ತಿದ್ದಾರೆ. ಎಲ್ಲ ಕಡೆ ಮಳೆಯಾದರೂ ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಆಗದ್ದಕ್ಕೆ ಜನರಲ್ಲಿ ಆತಂಕ ಶುರುವಾಗಿದೆ. ಮುಣಿಸಿಕೊಂಡಿರುವ ವರುಣನಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಗುರ್ಜಿ ಪೂಜೆ ವಿಶೇಷ:
ಮಳೆ ಬರದೆ ಇದ್ದಾಗ ಪೂರ್ವಜರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದಲೂ ಗುರ್ಜಿ ಪೂಜೆ ಆಚರಣೆಯಲ್ಲಿದೆ. ವ್ಯಕ್ತಿ ಅಥವಾ ಬಾಲಕನ ತಲೆ ಮೇಲೆ ತವೆ ಇಟ್ಟು ಅದರ ಮೇಲೆ ಆಕಳ ಸಗಣೆಯಿಂದ ತಯಾರಿಸಿದ ಗುರ್ಜಿ ಮೂರ್ತಿ ಮಾಡಿ ಹೊರಿಸಲಾಗುತ್ತದೆ. ಆ ನಂತರ ಗುರ್ಜಿ ಹೊತ್ತವನ ಹಿಂದೆ ಬಾಲಕರು ಗುರ್ಜಿ ಗುರ್ಜಿ ಎಂದು ಹಾಡು ಹೇಳುತ್ತ ಮನೆ ಮನೆಗೆ ಹೋಗಿ ನಿಲ್ಲಬೇಕು. ಆಗ ಮನೆಯವರು ಬಂದು ಗುರ್ಜಿ ಹೊತ್ತವನ ತಲೆ ಮೇಲೆ ನೀರು ಸುರಿದು ಗುರ್ಜಿ ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡುವುದರಿಂದ ಮಳೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಗುರ್ಜಿ ಮಾಡುವ ಮೊದಲು ಮಹಿಳೆಯರು ಜಲಮೂಲಕ್ಕೆ ಪೂಜೆ ಸಲ್ಲಿಸುತ್ತಾರೆ.ಮಳೆಗಾಗಿ ಕಾಯುತ್ತಿರುವ ರೈತರು:
ಮುಂಗಾರು ಆರಂಭದಲ್ಲಿ ಸುರಿದ ಮಳೆಗೆ ಈ ಭಾಗದಲ್ಲಿ ಹೆಸರು, ಹತ್ತಿ, ತೊಗರಿ, ಗೋವಿನಜೋಳ, ಮೆಣಸಿನಕಾಯಿ, ಈರುಳ್ಳಿ, ಎಳ್ಳು, ಹುರುಳಿ ಅನೇಕ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಇದೀಗ ರೈತರ ಬೆಳೆಗಳು ಒಣಗಿ ಹೋಗುತ್ತಿವೆ. ಸದ್ಯ ಎರಡು ಮೂರು ದಿನದಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆ ಕಳೆದುಕೊಳ್ಳಬೇಕಾಗುತ್ತದೆ. ಬೀಜ, ಗೊಬ್ಬರ, ಕೂಲಿ, ಬಾಡಿಗೆ ಹೀಗೆ ಸಾಕಷ್ಟು ಖರ್ಚು ಮಾಡಿರುವ ರೈತರು ಇದೀಗ ಆತಂಕಕ್ಕೊಳಗಾಗಿದ್ದಾರೆ. ಮಳೆರಾಯನನ್ನು ನಂಬಿ ಬೀಜ, ಗೊಬ್ಬರಕ್ಕೆ ಸಾಕಷ್ಟು ಹಣ ಖರ್ಚು ಮಾಡಿ, ಬಿತ್ತನೆಗೆ ಬಾಡಿಗೆ ಕೊಟ್ಟು, ಕಸಕ್ಕೆ ಕೂಲಿ ಕೊಟ್ಟು ರೈತ ಕಂಗಾಲಾಗಿದ್ದಾನೆ.-------------------------------------ಕೋಟ್‌ಸುಮಾರು ದಿನಗಳಿಂದ ಮಳೆ ಇಲ್ಲದ ಕಾರಣ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಮಳೆ ಬರಲಿ ಅಂತಹ ಗುರ್ಜಿ ಪೂಜೆ ಮಾಡಲಾಗಿದೆ. ವರುಣ ದೇವ ಈಗಲಾದರೂ ಕಣ್ಣು ಬಿಡುತ್ತಾನೆ ಎಂಬ ನಂಬಿಕೆಯಿಂದ ಈ ಪೂಜೆ ಮಾಡಲಾಗುತ್ತದೆ. ಹಿಂದಿನಿಂದಲೂ ಮಳೆಗಾಗಿ ಗುರ್ಜಿ ಪೂಜೆ ಮಾಡಲಾಗುತ್ತಿದೆ.ಸಂತೋಷ ನಾಯ್ಕೋಡಿ, ಗುರ್ಜಿ ಹೊತ್ತ ರೈತ