ವೈಭವದಿಂದ ನೆರವೇರಿದ ಅಬಲೂರು ರಥೋತ್ಸವ

| Published : Mar 09 2025, 01:45 AM IST

ಸಾರಾಂಶ

ಹಿರೇಕೆರೂರು ತಾಲೂಕಿನ ಅಬಲೂರು ಗ್ರಾಮದ ಬಸವೇಶ್ವರ ಹಾಗೂ ಬ್ರಹ್ಮೇಶ್ವರ ದೇವರ ಮಹಾ ರಥೋತ್ಸವ ಶುಕ್ರವಾರ ವೈಭವದಿಂದ ನಡೆಯಿತು. ಗುರುವಾರ ಸಣ್ಣ ರಥೋತ್ಸವ ನೆರವೇರಿದ ನಂತರ ರಾತ್ರಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.

ಹಿರೇಕೆರೂರು: ತಾಲೂಕಿನ ಅಬಲೂರು ಗ್ರಾಮದ ಬಸವೇಶ್ವರ ಹಾಗೂ ಬ್ರಹ್ಮೇಶ್ವರ ದೇವರ ಮಹಾ ರಥೋತ್ಸವ ಶುಕ್ರವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ಗುರುವಾರ ಸಣ್ಣ ರಥೋತ್ಸವ ನೆರವೇರಿದ ನಂತರ ರಾತ್ರಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದು ರಥಾರೋಹಣ ಮಾಡಿ ಹಾರ ಸಮರ್ಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು.

ಶುಕ್ರವಾರ ಬೆಳಗ್ಗೆ ಗ್ರಾಮದ ಎಲ್ಲ ದೇವರಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ವಾಧ್ಯಗಳೊಂದಿಗೆ ಅಪಾರ ಭಕ್ತರು ಆಂಜನೇಯ ದೇವಸ್ಥಾನದ ಆವರಣದಿಂದ ರಥ ಬೀದಿಯಲ್ಲಿ ಹರ್ಷೋದ್ಗಾರದೊಂದಿಗೆ ರಥವನ್ನು ಬಸವೇಶ್ವರ ದೇವಸ್ಥಾನದ ವರೆಗೆ ಎಳೆದರು.

ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ತೆಂಗಿನಕಾಯಿಗಳನ್ನು ಶ್ರದ್ಧಾ-ಭಕ್ತಿಯಿಂದ ಸರ್ಮಪಿಸಿದರು. ವಿವಿಧ ವಾಧ್ಯಗಳು, ರಥೋತ್ಸವಕ್ಕೆ ಮೆರಗು ನೀಡಿದವು.

ಆನಂತರ ಗುಗ್ಗಳ ಮಹೋತ್ಸವವನ್ನು ಆರಂಭಿಸಿ ರಥಬೀದಿಯಲ್ಲಿ ಸಂಚರಿಸಿ ಬಸವೇಶ್ವರ ದೇವಸ್ಥಾನ ತಲುಪಿ ಮಂಗಲವಾಯಿತು. ಆನಂತರ ಬಸವೇಶ್ವರ ದೇವಸ್ಥಾನದಿಂದ ರಥೋತ್ಸವ ಪುನಃ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗೆ ಎಳೆಯುವ ಮೂಲಕ ಸಂಪನ್ನಗೊಂಡಿತು.

ವಿವಿಧ ಜಿಲ್ಲೆ, ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ಬಂದು ಬಸವೇಶ್ವರ ಹಾಗೂ ಬ್ರಹ್ಮೇಶ್ವರ ದೇವರ ದರ್ಶನ ಪಡೆದರು. ರಥೋತ್ಸವದ ಅಂಗವಾಗಿ ಹಿರೇಕೆರೂರಿನಿಂದ ಭಕ್ತರಿಂದ ಪಾದಯಾತ್ರೆಯ ಮೂಲಕ ಆಗಮಿಸಿದ ಶರಭಿ ಗುಗ್ಗಳ ಬೆಳಗ್ಗೆ ಬಸವೇಶ್ವರ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.

ವಿವಿಧ ಗ್ರಾಮಗಳ ಭಕ್ತರು ಪಾದಯಾತ್ರೆಯ ಮೂಲಕ ಅಬಲೂರು ಗ್ರಾಮಕ್ಕೆ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಅಬಲೂರು ಬಸವೇಶ್ವರ ರಥೋತ್ಸವದ ನಿಮಿತ್ತ ಓಕಳಿ:

ಹಿರೇಕೆರೂರು ತಾಲೂಕಿನ ಅಬಲೂರು ಗ್ರಾಮದ ಬಸವೇಶ್ವರ ಹಾಗೂ ಬ್ರಹ್ಮೇಶ್ವರ ದೇವರ ಮಹಾ ರಥೋತ್ಸವದ ಅಂಗವಾಗಿ ಶನಿವಾರ ಓಕಳಿ ಕಾರ್ಯಕ್ರಮ ನೆರವೇರಿತು. ರಥೋತ್ಸವದ ನಿಮಿತ್ತ ಮಾ. 2ರಂದು ಗ್ರಾಮದ ಎಲ್ಲ ದೇವರಿಗೆ ಪ್ರತಿ ವರ್ಷದ ಸಂಪ್ರದಾಯದಂತೆ ಕಂಕಣಧಾರಣೆ ಮಾಡಲಾಗಿತ್ತು. ರಥೋತ್ಸವದ ವಿಧಿ-ವಿಧಾನಗಳು ಮುಕ್ತಾಯಗೊಂಡ ನಂತರ ಶನಿವಾರ ಗ್ರಾಮದ ಎಲ್ಲ ದೇವರಿಗೆ ಧಾರಣೆ ಮಾಡಿದ ಕಂಕಣಗಳನ್ನು ತೆಗೆದು ಗಂಗೆಗೆ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಮಕ್ಕಳು ಹಿರಿಯರು ಓಕಳಿಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.