ಸಾಮಾಜಿಕ ಹಾಗೂ ಜನಸಂಖ್ಯಾ ಪಲ್ಲಟಗಳ ಕುರಿತು ಮಾತನಾಡಲು ಸಾಂಪ್ರದಾಯಿಕವಾಗಿ ಜನ ಹಿಂಜರಿಯುತ್ತಿದ್ದಾರೆ. ನಾವು ಮಾತನಾಡಿದರೆ ಕೋಮುವಾದಿ ಎಂದು ಕರೆಯುತ್ತಾರೆ ಎಂಬ ಭಯದಿಂದ ಅನೇಕರು ಮೌನವಾಗಿದ್ದಾರೆ. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಭಯವನ್ನು ತೊರೆದು ಸತ್ಯವನ್ನು ಎತ್ತಿಹಿಡಿಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಪ್ರಸಾರ್ ಭಾರತಿಯ ಸಲಹೆಗಾರ ಭರತ್ ಭೂಷಣ್ ಹೇಳಿದರು.
ಮಡಿಕೇರಿ: ಸಾಮಾಜಿಕ ಹಾಗೂ ಜನಸಂಖ್ಯಾ ಪಲ್ಲಟಗಳ ಕುರಿತು ಮಾತನಾಡಲು ಸಾಂಪ್ರದಾಯಿಕವಾಗಿ ಜನ ಹಿಂಜರಿಯುತ್ತಿದ್ದಾರೆ. ನಾವು ಮಾತನಾಡಿದರೆ ಕೋಮುವಾದಿ ಎಂದು ಕರೆಯುತ್ತಾರೆ ಎಂಬ ಭಯದಿಂದ ಅನೇಕರು ಮೌನವಾಗಿದ್ದಾರೆ. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಈ ಭಯವನ್ನು ತೊರೆದು ಸತ್ಯವನ್ನು ಎತ್ತಿಹಿಡಿಯುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಪ್ರಸಾರ್ ಭಾರತಿಯ ಸಲಹೆಗಾರ ಭರತ್ ಭೂಷಣ್ ಹೇಳಿದರು. ನಗರದ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯಿಂದ ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಆಗ್ರಹಿಸಿ ಜಿಲ್ಲೆಯಾದ್ಯಂತ ನಡೆದ ಜನ ಜಾಗೃತಿ ಆಂದೋಲನಾ ಕಾರ್ಯಕ್ರಮ ಮಡಿಕೇರಿಯಲ್ಲಿ ಶುಕ್ರವಾರ ಸಮಾರೋಪದಲ್ಲಿ ಮಾತನಾಡಿದರು.
ಕಾಫಿ ತೋಟಗಳಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ಕೈ ತಪ್ಪುತ್ತಿದ್ದು, ಬಾಂಗ್ಲಾದೇಶಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಕೇವಲ ಉದ್ಯೋಗದ ಸಮಸ್ಯೆಯಷ್ಟೇ ಅಲ್ಲದೆ, ಭವಿಷ್ಯದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಲಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಮುಂದಾಗಬೇಕಿದೆ ಎಂದರು.ಸ್ಥಳೀಯರು ಕಾರ್ಮಿಕ ಸಂಘಟನೆಗಳನ್ನು ರಚಿಸಿ, ದಾಖಲೆಗಳೊಂದಿಗೆ ತಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ಜಸ್ಟಿಸ್ ನಾವ್ಲೆಕರ್ ಸಮಿತಿ, ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರಕ್ಕೆ ತಲುಪಿಸಬೇಕು. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ತನಿಖೆ ಮತ್ತು ಎನ್‌ಆರ್‌ಸಿ ಮಾದರಿಯ ದೃಢೀಕರಣ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್ ಮಾತನಾಡಿ 70 ವರ್ಷಗಳ ಕಾಲ ಆಡಳಿತ ಮಾಡಿದವರು ನುಸುಳಕೋರರನ್ನು ಒಳಬಿಟ್ಟು ಅವರಿಗೆ ನಮ್ಮ ದೇಶದಲ್ಲಿ ಹಲವು ದಾಖಲೆ ಮಾಡಿಕೊಟ್ಟು ದೇಶವನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದರು.6 ಕೋಟಿ ಮಂದಿ ಬಾಂಗ್ಲಾದವರು:
ಕ್ಯಾ ಬಿದ್ದಂಡ ನಾಣಿ ನಾಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದಲ್ಲಿ 6 ಕೋಟಿ ಮಂದಿ ಬಾಂಗ್ಲಾದವರು ಇದ್ದಾರೆಂದು ಹೇಳಲಾಗುತ್ತಿದೆ. 4 ಸಾವಿರ ಕಿ.ಮೀ ಬಾಂಗ್ಲಾ ಗಡಿಯಿದೆ. ಇದರಿಂದ ಅವರು ಸುಲಭವಾಗಿ ನಮ್ಮ ದೇಶಕ್ಕೆ ನುಸುಳುತ್ತಿದ್ದಾರೆ. ಇಂತಹ ಬಾಂಗ್ಲಾ ವಲಸಿಗರ ಬಗ್ಗೆ ನಮ್ಮ ಜಿಲ್ಲೆಯಲ್ಲೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಪ್ರಮುಖರಾದ ಅಜಿತ್ ಕುಕ್ಕೇರ ಮಾತನಾಡಿ ರಾಜ್ಯದಲ್ಲಿ ನುಸುಳಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಸೆ.25ರಿಂದ ಅ.9 ರ ವರೆಗೆ 15 ದಿನಗಳ ಕಾಲ ಈ ಜನಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. ಬಾಂಗ್ಲಾ ವಲಸಿಗರಿಗೆ ಸಿಕ್ಕಿರುವ ನಾಗರಿಕ ದಾಖಲೆಗಳನ್ನು ವಶಕ್ಕೆ ಪಡೆಯಬೇಕು ಎಂದರು.
ಕೊಡಗು ಸುರಕ್ಷಾ ಆಂದೋಲನ ಸಮಿತಿಯಿಂದ ಗಾಂಧಿ ಮೈದಾನದಿಂದ ಜಾಥಾ ಆರಂಭವಾಗಿ ಮುಖ್ಯ ರಸ್ತೆಗಳ ಮೂಲಕ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾರೋಪಗೊಂಡಿತು. ಈ ಸಂದರ್ಭ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.