ಕಡಲಾಮೆಗಳನ್ನು ವಿಷ್ಣುವಿನ ಅವತಾರ ಎಂದು ನಂಬಿ ಪೂಜಿಸುವ ಶ್ರಮಜೀವಿ ಮೀನುಗಾರರ ಬದುಕು ಇಂದು ಘಟಸರ್ಪದ ಅಡಿಯಿರುವ ಕಪ್ಪೆಯಂತಾಗಿದೆ.
ಟೊಂಕಾ ಉತ್ಸವದಲ್ಲಿ ಸಹಕಾರಿ ಧುರೀಣ
ಕನ್ನಡಪ್ರಭ ವಾರ್ತೆ ಹೊನ್ನಾವರಜನಸಾಮಾನ್ಯರಿಗೆ ತೊಂದರೆ ಕೊಡುವ ಯೋಜನೆಗಳಿಗಿಂತ ಜಿಲ್ಲೆಗೆ ತುರ್ತಾಗಿ ಬೇಕಾಗಿರುವ ಆಸ್ಪತ್ರೆ ನೀಡಿ ಜನರ ಜೀವ ಉಳಿಸಿ ಎಂದು ಸಹಕಾರಿ ಧುರೀಣ ಜಿ.ಜಿ. ಶಂಕರ ಆಗ್ರಹಿಸಿದರು.
ತಾಲೂಕಿನ ಟೊಂಕಾದಲ್ಲಿ ನಡೆದ ಟೊಂಕಾ ಉತ್ಸವ ಉದ್ಘಾಟಿಸಿ ಮಾತನಾಡಿದರು. ಬಂದರು ಯೋಜನೆ ಹಾಗೂ ರಾಜಕೀಯ ನಾಯಕರ ವೈಫಲ್ಯಗಳ ವಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಡಲಾಮೆಗಳನ್ನು ವಿಷ್ಣುವಿನ ಅವತಾರ ಎಂದು ನಂಬಿ ಪೂಜಿಸುವ ಶ್ರಮಜೀವಿ ಮೀನುಗಾರರ ಬದುಕು ಇಂದು ಘಟಸರ್ಪದ ಅಡಿಯಿರುವ ಕಪ್ಪೆಯಂತಾಗಿದೆ ಎಂದು ಹೇಳಿದರು.ಶಿರೂರು ಅಪಘಾತದ ವೇಳೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇನೆ ಎಂದು ಭರವಸೆ ನೀಡಿದವರು ಈಗ ₹1200 ಕೋಟಿಯ ಪಂಪ್ ಸ್ಟೋರೇಜ್ ಯೋಜನೆ ತರುತ್ತಿದ್ದಾರೆ. ಇದರಲ್ಲಿ ಕಮಿಷನ್ ಎಷ್ಟು? ಜಿಲ್ಲೆಯ ಜನರ ಜೀವ ಉಳಿಸುವ ಆಸ್ಪತ್ರೆಯ ಬಗ್ಗೆ ಇವರಿಗೆ ಆಸಕ್ತಿಯಿಲ್ಲ. ಮೀನುಗಾರರ ಹಿತ ಕಾಯಬೇಕಾದ ಸಚಿವರೇ ಇಂದು ಅವರ ವಿರುದ್ಧ ನಿಂತಿದ್ದಾರೆ ಎಂದು ಚಾಟಿ ಬೀಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಸ್ತಪ್ಪ ನಾಯ್ಕ ಬಲಸೆ ಮಾತನಾಡಿ, ಕಾಸರಕೋಡು ಬಂದರಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಪ್ರಭಾವಿ ನಾಯಕರು ಕೇವಲ ಆಶ್ವಾಸನೆ ನೀಡಿ ಇಲ್ಲಿನ ಜನರಿಗೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಖಾಸಗಿ ಬಂದರುಗಳೊಂದಿಗೆ ಕೈಜೋಡಿಸಿರುವ ನಾಯಕರು, ಮೀನುಗಾರರು ತಿಂಗಳುಗಟ್ಟಲೆ ಜೈಲುವಾಸ ಅನುಭವಿಸುವಂತೆ ಮಾಡಿದ್ದಾರೆ. ಈಗ ಭಾರಿ ವಾಹನಗಳ ಸಂಚಾರದಿಂದಾಗಿ ಮಕ್ಕಳ ಮತ್ತು ವಯಸ್ಕರ ಆರೋಗ್ಯ ಹದಗೆಡುತ್ತಿದೆ. ಕಮಿಷನ್ ಏಜೆಂಟ್‌ಗಳಂತೆ ವರ್ತಿಸುತ್ತಿರುವ ಜನಪ್ರತಿನಿಧಿಗಳು ಜನವಿರೋಧಿ ಯೋಜನೆಗಳಿಗೆ ಸಹಿ ಹಾಕುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಅತಿಥಿಯಾಗಿ ಆಗಮಿಸಿದ್ದ ಸಂದೀಪ ಹೆಗಡೆ ಮಾತನಾಡಿ, ಟೊಂಕಾ ಭಾಗದಲ್ಲಿ ಪ್ರತಿವರ್ಷ ಕಡಲಾಮೆಗಳು ಮೊಟ್ಟೆ ಇಡುವುದನ್ನು ಕಾಣುತ್ತಿದ್ದೆವು. ಆದರೆ, ಈ ಬಾರಿ ಇಲ್ಲಿ ಸೂತಕದ ಛಾಯೆ ಆವರಿಸಿದೆ. ಆಮೆಗಳು ಮೊಟ್ಟೆ ಇಡದಿರುವುದು ಪರಿಸರ ಹಾನಿಯ ಸೂಚನೆಯಾಗಿದೆ. ನಿಮ್ಮ ಕುಂದುಕೊರತೆಗಳ ವಿರುದ್ಧ ಧ್ವನಿ ಎತ್ತಲು 1902 ಸಂಖ್ಯೆಗೆ ಕರೆ ಮಾಡಿ ಎಂದರು.
ಗ್ರಾಪಂ ಸದಸ್ಯ ಜಗದೀಶ್ ತಾಂಡೇಲ್ ಮಾತನಾಡಿ, ಕಡಲಾಮೆಗಳನ್ನು ರಕ್ಷಿಸುವಲ್ಲಿ ಜೈನ ಜಟಗೇಶ್ವರ ಯುವಕ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಬಂದರು ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮೀನುಗಾರರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.ಸಮಾಜದ ಮುಖಂಡರಾದ ಹನುಮಂತ ತಾಂಡೇಲ್, ಉತ್ಸವ ಸಮಿತಿಯ ಅಧ್ಯಕ್ಷ ಭಾಸ್ಕರ್ ತಾಂಡೇಲ್, ಗೌರವಾಧ್ಯಕ್ಷ ರಮೇಶ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಆನಂತರ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.