ಸಂತೆ ಜಾಗ ಇ-ಸ್ವತ್ತು ರದ್ದು ಸತ್ಯಕ್ಕೆ ಸಂದ ಜಯ

| Published : Nov 16 2024, 12:30 AM IST

ಸಾರಾಂಶ

ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚಂಗಿಪುರದಲ್ಲಿ ಅಧ್ಯಕ್ಷೆ ಮತ್ತು ಅವರ ಮಗ ಪಿಡಿಒ ಸೇರಿ ರಿ.ಸ.ನಂ ೧/೬ರ ಸಂತೆ ಮೈದಾನದ ಜಾಗ ಅಕ್ರಮವಾಗಿ ಇ-ಸ್ವತ್ತು ಪಡೆಯಲಾಗಿತ್ತು. ಹುಚ್ಚಂಗಿಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಈಗ ಇ-ಸ್ವತ್ತು ರದ್ದುಗೊಳಿಸಲಾಗಿದೆ. ಇದು ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯ ಎಂದು ಹುಚ್ಚಂಗಿಪುರ ಗ್ರಾಮ ಮುಖಂಡ, ನಿವೃತ್ತ ಶಿಕ್ಷಕ ಗೂರಪ್ಪ ಹೇಳಿದರು

- ಮುಂದಿನ ದಿನಗಳಲ್ಲಿ ಇನ್ನೂ ಅಕ್ರಮಗಳು ಹೊರಬರಲಿವೆ: ಗೂರಪ್ಪ

- - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚಂಗಿಪುರದಲ್ಲಿ ಅಧ್ಯಕ್ಷೆ ಮತ್ತು ಅವರ ಮಗ ಪಿಡಿಒ ಸೇರಿ ರಿ.ಸ.ನಂ ೧/೬ರ ಸಂತೆ ಮೈದಾನದ ಜಾಗ ಅಕ್ರಮವಾಗಿ ಇ-ಸ್ವತ್ತು ಪಡೆಯಲಾಗಿತ್ತು. ಹುಚ್ಚಂಗಿಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದ ಹಿನ್ನೆಲೆ ಈಗ ಇ-ಸ್ವತ್ತು ರದ್ದುಗೊಳಿಸಲಾಗಿದೆ. ಇದು ಗ್ರಾಮಸ್ಥರ ಹೋರಾಟಕ್ಕೆ ಸಂದ ಜಯ ಎಂದು ಹುಚ್ಚಂಗಿಪುರ ಗ್ರಾಮ ಮುಖಂಡ, ನಿವೃತ್ತ ಶಿಕ್ಷಕ ಗೂರಪ್ಪ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ. ಸಿಇಒ ಸುರೇಶ್ ಹಿಟ್ನಾಳ್ ಹಾಗೂ ತಾಪಂ ಇಒ ಕೆಂಚಪ್ಪ ಸೇರಿದಂತೆ ಸಂಸದರು, ಶಾಸಕರು ಗ್ರಾಮಸ್ಥರ ಬೆಂಬಲಕ್ಕೆ ನಿಂತಿದ್ದರು. ಇದರಿಂದಾಗಿ ಇ-ಸ್ವತ್ತು ರದ್ದುಗೊಂಡಿದ್ದು, ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

೨೦೦೮ರಲ್ಲಿ ಹುಚ್ಚಂಗಿಪುರದಲ್ಲಿ ಸಂತೆ ಮೈದಾನಕ್ಕೆಂದು ಜಾಗ ಮೀಸಲಿಡಲಾಗಿತ್ತು. ಗ್ರಾಮದ ಕೆಲವು ಸದಸ್ಯರು ಅಕ್ರಮದಲ್ಲಿ ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಕ್ರಮಗಳು ಹೊರಬರಲಿವೆ. ಈ ವಿಚಾರವಾಗಿ ಪ್ರಾಣ ಬೆದರಿಕೆಗಳು ಬರುತ್ತಿವೆ ಎಂದು ತಿಳಿಸಿದರು.

ಮುಖಂಡ ಧರ್ಮ ನಾಯಕ್ ಮಾತನಾಡಿ, ೨೧ ದಿನಗಳ ಹೋರಾಟ ನಡೆಸಿದ ಗ್ರಾಮಸ್ಥರಿಗೆ ಕಡೆಗೂ ಜಯ ಸಿಕ್ಕಿದೆ. ನ್ಯಾಯಬದ್ಧ ಹೋರಾಟ ಮಾಡಿದ್ದೇವೆ. ಅಕ್ರಮ ಮಾಡಿದವರಿಗೆ ಇದುವರೆಗೆ ಯಾವುದೇ ಕಾನೂನಿನ ಶಿಕ್ಷೆ ನೀಡದೇ ಸುಮ್ಮನಿರುವುದು ಏಕೆ? ಪ್ರಾಮಾಣಿಕವಾಗಿ ಹೋರಾಟ ಮಾಡಿದವರಿಗೆ ಬೆಲೆಯೇ ಇಲ್ಲದಂತಾಗಿದೆ. ಅಧಿಕಾರಿಗಳು ಅವರ ರಕ್ಷಣೆಗೆ ಇದ್ದಾರೆ. ಹುಚ್ಚಂಗಿಪುರದ ಪರವಾಗಿ ನಾವು ಹೋರಾಟ ಮಾಡುತ್ತೇವೆ. ಕಾನೂನಿನ ಅಡಿಯಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಹುಚ್ಚಂಗಿಪುರ ರವಿಕುಮಾರ ಮಾತನಾಡಿ, ತಪ್ಪು ಮಾಡಿದವರ ರಕ್ಷಣೆ ಮಾಡುವ ಕೆಲಸ ಆಗುತ್ತಿದೆ. ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಕಾನೂನಿನ ಪ್ರಕಾರ ಶಿಕ್ಷೆ ಆಗದಿದ್ದರೆ, ಗ್ರಾಮದಿಂದ ಪಾದಯಾತ್ರೆ ನಡೆಸಿ, ತಾಲೂಕು ಪಂಚಾಯಿತಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರು ಹಾಜರಿದ್ದರು.

- - -

ಕೋಟ್‌ ಸಂತೆ ಜಾಗ ಅಕ್ರಮ ಇ-ಸ್ವತ್ತು ಮಾಡಿಕೊಂಡಿದ್ದ ದಿದ್ದಿಗಿ ಗ್ರಾಪಂ ಅಧ್ಯಕ್ಷೆಯನ್ನು ತಕ್ಷಣ ವಜಾ ಮಾಡಬೇಕು. ಅವರ ಮಗನಿಗೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು. ಜನರಿಂದ ಆಯ್ಕೆಯಾದವರು ಉತ್ತಮ ಕೆಲಸಗಳನ್ನು ಮಾಡಬೇಕು. ಅವರ ಸೇವೆ ಬೇರೆಯವರಿಗೆ ಮಾದರಿಯಾಗಬೇಕು. ಈ ಉದ್ದೇಶ ಬಿಟ್ಟು ಉಳಿದೆಲ್ಲ ಕೆಲಸಗಳನ್ನು ಮಾಡುತ್ತಾರೆ

- ರವಿಕುಮಾರ, ಗ್ರಾಮಸ್ಥ, ಹುಚ್ಚಂಗಿಪುರ

- - - -14ಜೆಜಿಎಲ್1:

ಸಂತೆ ಜಾಗ ಇ-ಸ್ವತ್ತು ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಹುಚ್ಚಂಗಿಪುರ ಗ್ರಾಮ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.