ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಭದ್ರಾ ಜಲಾಶಯದಿಂದ ನೀರನ್ನು ಲಿಪ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಿ ಎಂಬ ಜನಪ್ರತಿನಿಧಿಗಳ ಸೂಚನೆ, ರೈತ ಸಂಘಟನೆಗಳ ಹಕ್ಕೊತ್ತಾಯಗಳಿಂದಾಗಿ ಒಂದೆಡೆ ಅಬ್ಬಿನಹೊಳಲು ರೈತರ ಬದುಕು ಕೊಚ್ಚಿ ಹೋಗಿದ್ದರೆ ಮತ್ತೊಂದೆಡೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ದಿಕ್ಕು ತೋಚದೆ ಅಡಕತ್ತರಿಯಲ್ಲಿ ಸಿಲುಕಿದ ಅನುಭವಕ್ಕೆ ಒಳಗಾಗುತ್ತಿದ್ದಾರೆ.
ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಬೆಟ್ಟದಾವರೆ ಕೆರೆಯ ಬಳಿ ಲಿಫ್ಟ್ ಮಾಡಿದ ನೀರನ್ನುಅಜ್ಜಂಪುರ ತಾಲೂಕಿನ ಹೆಬ್ಬೂರು ಗ್ರಾಮದ ವ್ಯಾಪ್ತಿಯ ವೈ.ಜಂಕ್ಷನ್ ಹತ್ತಿರವಿರುವ ಹಳ್ಳದ ಮೂಲಕ ವಿವಿ ಸಾಗರಕ್ಕೆ ಹರಿಸಲಾಗುತ್ತಿದೆ. ಹಳ್ಳದಲ್ಲಿ ಸತತವಾಗಿ ನೀರು ಹರಿಯುವ ಕಾರಣ ಮಣ್ಣು ಸವಕಳಿಯಾಗಿ ದಂಡೆ ವಿಸ್ತಾರವಾಗುತ್ತಿದೆ. ತನ್ನ ಸರಹದ್ದನ್ನು ಮೀರಿ ರೈತರ ಜಮೀನುಗಳನ್ನು ಆವರಿಸಿದೆ. ಕೆಲವು ಕಡೆ ಜಮೀನುಗಳ ಬದುಗಳು ಕೊಚ್ಚಿಹೋಗಿ ಅಡಕೆ, ತೆಂಗಿನ ಮರಗಳು ಉರುಳಿ ಬಿದ್ದಿವೆ.ನೀರು ಲಿಫ್ಟ್ ಮಾಡುವುದು ನಿಲ್ಲಿಸುತ್ತೀರೋ, ಇಲ್ಲವೋ ಎಂದು ಹಾನಿಗೊಳಗಾದ ಸಂತ್ರಸ್ತ ರೈತರು ಆಗ್ರಹಿಸುತ್ತಿದ್ದರೆ, ನೀರು ನಿಲ್ಲಿಸಿದರೆ ಪರಿಣಾಮ ನೆಟ್ಟಗಿರದು ಎಂಬ ಹಿರಿಯೂರಿನ ರೈತರಿಂದ ಎಚ್ಚರಿಕೆ ಮಾತಗಳು ಬರುತ್ತಿವೆ. ಜಮೀನು ಕೊಚ್ಚಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಲು ಜಲಸಂಪನ್ಮೂಲ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಿಕೊಂಡಿಲ್ಲ. ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿಯೇ ಮುಂದುವರಿಯಬೇಕು. ಹಾಗಾಗಿ ನಷ್ಟಕ್ಕೊಳಗಾದ ರೈತರ ಸಾಂತ್ವನ ಮಾಡಲು ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಳೆಯಾಗದ ಕಾರಣ ಹಳ್ಳವು ಭಾಗಶಃ ಹೂಳು ತುಂಬಿದ್ದು, ಸಾಕಷ್ಟು ಗಿಡಗಂಟೆಗಳು ಬೆಳೆದಿವೆ. ಇದರೊಟ್ಟಿಗೆ ಭದ್ರೆ ನೀರನ್ನು ಹಾಯಿಸುತ್ತಿರುವುದರಿಂದ ಹಳ್ಳದ ನೀರು ತನ್ನ ವ್ಯಾಪ್ತಿ ಪ್ರದೇಶ ಬಿಟ್ಟು ರೈತರ ಜಮೀನುಗಳಿಗೆ ನುಗ್ಗಿ ಮಣ್ಣು ಕೊರೆದು ಹಾನಿ ಮಾಡಿದೆ. ಅಬ್ಬಿನಹೊಳಲು ಗ್ರಾಮದ ಸರ್ವೆ ನಂ.4/8 ರಲ್ಲಿ ಹಾದು ಹೋಗಿರುವ ಹಳ್ಳಕ್ಕೆ ಕೊರೆತ ಮರುಕಳಿಸದಂತೆ ತಡೆಗಟ್ಟಲು ಹಳ್ಳದ ಮಣ್ಣನ್ನು ತೆಗೆದು ಜಮೀನಿಗೆ ತಡೆಗೋಡೆ ನಿರ್ಮಿಸಬೇಕು. ಸೂಕ್ತ ಭದ್ರತಾ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ವಿವಿ ಸಾಗರಕ್ಕೆ ನೀರನ್ನು ಹಳ್ಳದ ಮೂಲಕ ಹರಿಸಬಾರದು ಎಂಬುದು ಹಬ್ಬಿನಹೊಳಲು ರೈತರ ಆಗ್ರಹವಾಗಿದೆ.ಆಗಸ್ಟ್ 4ರಿಂದ ಭದ್ರಾ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರಕ್ಕೆ ಹರಿಸಲಾಗುತ್ತಿದ್ದು, ತೆಂಗಿನ ತೋಟ ಕೊಚ್ಚಿಹೋಗಿವೆ, ಯಾವುದೇ ಕಾರಣದಿಂದ ನೀರು ಹರಿಸಬಾರದೆಂದು ಹೇಳಿ ಅಬ್ಬಿನಹೊಳಲು ರೈತರು ವಿಷ ಕುಡಿಯುವುದಾಗಿ ಹೆದರಿಸಿದ ಕಾರಣಕ್ಕೆ ಕೆಲ ಗಂಟೆಗಳ ಕಾಲ ಲಿಫ್ಟ್ ಮಾಡುವುದ ನಿಲ್ಲಿಸಲಾಗಿತ್ತು. ಏತನ್ಮಧ್ಯೆ ಹಿರಿಯೂರು ಭಾಗದ ಕೆಲ ರೈತರು ಫೇಸ್ ಬುಕ್ ಲೈವ್ ನಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಲಿಫ್ಟ್ ನಿಲ್ಲಿಸಿದ್ದಾರೆ. ನೀರು ಕೊಡುವ ಉದ್ದೇಶ ಅವರಿಗಿಲ್ಲ ಎಂಬ ಸಂದೇಶ ರವಾನಿಸಿದ್ದು ಅಧಿಕಾರಿಗಳನ್ನು ತೊಂದರೆ ಸಿಲುಕಿಸಿದೆ. ಹಾನಿಗೆ ಒಳಗಾದವರೂ ರೈತರೆ, ಇನ್ನೂ ನೀರು ಕೊಡಿ ಎಂದು ಕೇಳುವವರು ರೈತರೆ. ನೈಸರ್ಗಿಕವಾಗಿ ಹರಿಯುವ ಹಳ್ಳಕ್ಕೆ ಒತ್ತಾಯವಾಗಿ ಭದ್ರೆ ಹರಿಸಿದ ಪರಿಣಾಮದಿಂದ ಉಂಟಾಗಿರುವ ಹಾನಿಯಿದು.
ಎರಡು ವರ್ಷಗಳ ಹಿಂದೆ ವಿವಿ ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ತೀರಾ ಕೆಳಗೆ ಇಳಿದಿತ್ತು. ಡೆಡ್ ಸ್ಟೋರೇಜ್‌ಗೆ ತಲುಪಿದ್ದರಿಂದ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಲ ಸಂಪನ್ಮೂಲ ಇಲಾಖೆ ಭದ್ರೆ ಲಿಫ್ಟ್ ಮಾಡಿ ಹಳ್ಳಕ್ಕೆ ನೀರು ಬಿಟ್ಟು, ವಿವಿ ಸಾಗರ ಜಲಾಶಯಕ್ಕೆ ಹರಿಯುವಂತೆ ಮಾಡಿತ್ತು. ನಂತರದಲ್ಲಿ ಮಳೆ ಸುರಿದಿದ್ದರಿಂದ ವಿವಿ ಸಾಗರ ಜಲಾಶಯ ಭರ್ತಿಯಾಗಿತ್ತು.ಹಳ್ಳದಲ್ಲಿ ಸತತವಾಗಿ ನೀರಿನ ಹರಿಯುವಿಕೆಯಿಂದ ಕಾಟಿನಗೆರೆಯಿಂದ ಅಬ್ಬಿನಹೊಳಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬರುವ ಬ್ರಿಡ್ಜ್‌ನ ತಳಪಾಯ ಹಾನಿಗೊಂಡಿದ್ದು, ಒಂದು ವೇಳೆ ಸೇತುವೆ ಕುಸಿತವಾದಲ್ಲಿ ಗ್ರಾಮಗಳ ನಡುವೆ ಸಂಪರ್ಕವೇ ಕಡಿತಗೊಳ್ಳುತ್ತದೆ. ತೋಟಗಾರಿಕೆ ಬೆಳೆ ಹಾನಿ ಸಂಬಂಧಿಸಿದಂತೆ ಅಜ್ಜಂಪುರದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎರಡು ದಿನದ ಹಿಂದೆಯಷ್ಟೇ ಸ್ಥಳ ಪರಿಶೀಲಿಸಿ ಹೋಗಿದ್ದಾರೆ. ಅಬ್ಬಿನಹೊಳಲು ರೈತರಿಗೆ ರಾಜ್ಯ ಸರ್ಕಾರ ತುರ್ತುಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮತ್ತೊಂದು ಸಂಕಷ್ಟ ಸನ್ನಿವೇಶ ಎದುರಿಸಬೇಕಾಗಿ ಬರಬಹುದು.