ಬೀದಿನಾಯಿಗಳಿಗಾಗಿ ಶೆಲ್ಟರ್‌ ಮಾಡುವುದು ಅಷ್ಟು ಸುಲಭವಲ್ಲ. 40 ಸಾವಿರಕ್ಕೂ ಅಧಿಕ ನಾಯಿಗಳಿವೆ. ಹೀಗಾಗಿ ಅದು ಸಾಧ್ಯವಿಲ್ಲ. ಆದರೆ, ಸಂಸ್ಥೆಗಳಲ್ಲಿರುವ ಅಂದರೆ ಶಾಲೆ-ಕಾಲೇಜ್‌, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸರ್ಕಾರಿ ಕಚೇರಿ ಆವರಣಗಳಲ್ಲಿರುವ ನಾಯಿಗಳಿಗಾಗಿ ಮಾತ್ರ ಶೆಲ್ಟರ್‌ ಮಾಡಿ ಇಡಬಹುದು.

ಹುಬ್ಬಳ್ಳಿ:

ಬೀದಿ ನಾಯಿ ಹಾವಳಿ ತಡೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಬಿಸಿ (ಎನಿಮಲ್‌ ಬರ್ತ್‌ ಕಂಟ್ರೋಲ್‌)ಗೆ ಅಸ್ತು ಎಂದಿದೆ. ಇದೇ ವೇಳೆ ಸಿಟಿ ವಾಟರ್‌ ಕಂಪನಿಗೆ ಒಪ್ಪಿಗೆ ನೀಡದೆ ಇನ್ನಷ್ಟು ಚರ್ಚಿಸಿ ನಿರ್ಧಾರ ಕೈಗೊಳ್ಳಲು ನಿರ್ಣಯಿಸಿತು.ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಬೀದಿನಾಯಿ ಹಾವಳಿ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಪಾಲಿಕೆಯು ಬೀದಿನಾಯಿಗಳನ್ನು ಹಿಡಿದುಕೊಂಡು ಹೋಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ, ರೇಬಿಸ್‌ ವ್ಯಾಕ್ಸಿನೇಷನ್‌ ಮಾಡಿ ಅಲ್ಲಿಯೇ ಒಂದೆರಡು ದಿನ ಇಟ್ಟುಕೊಂಡು ನಂತರ ಅವು ಮೊದಲಿದ್ದ ಜಾಗೆಗೆ ತಂದು ಬಿಡಲು ಏಜೆನ್ಸಿ ಗೊತ್ತು ಮಾಡಿದೆ. ಪ್ರತಿ ನಾಯಿಗೆ ₹ 1650 ವೆಚ್ಚವಾಗುತ್ತದೆ ಎಂದು ಸಭೆಯ ಗಮನಕ್ಕೆ ತರಲಾಯಿತು. ಇದಕ್ಕೆ ಸದಸ್ಯ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ ಆಕ್ಷೇಪಿಸಿ, ಮೊದಲೇ ಅಲ್ಲಿದ್ದ ಜಾಗೆಗೆ ತಂದು ಬಿಡುವುದರಿಂದ ಮತ್ತೆ ಅವುಗಳಿಂದ ತೊಂದರೆಯಾಗುತ್ತದೆ. ಹೀಗೆ ಮಾಡುವುದರಿಂದ ಉಪಯೋಗವೇನು? ಮೊದಲು ಇವುಗಳಿಗಾಗಿ ಶೆಲ್ಟರ್‌ ಮಾಡುತ್ತೇವೆ ಎಂದು ಹೇಳಿದ್ದರೀ ಎಂದು ಪ್ರಶ್ನಿಸಿದರು. ಇದಕ್ಕೆ ವಿಪಕ್ಷ ನಾಯಕ ಇಮ್ರಾನ್‌ ಎಲಿಗಾರ ಕೂಡ ಧ್ವನಿಗೂಡಿಸಿದರು.ಆಗ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಬೀದಿನಾಯಿಗಳಿಗಾಗಿ ಶೆಲ್ಟರ್‌ ಮಾಡುವುದು ಅಷ್ಟು ಸುಲಭವಲ್ಲ. 40 ಸಾವಿರಕ್ಕೂ ಅಧಿಕ ನಾಯಿಗಳಿವೆ. ಹೀಗಾಗಿ ಅದು ಸಾಧ್ಯವಿಲ್ಲ. ಆದರೆ, ಸಂಸ್ಥೆಗಳಲ್ಲಿರುವ ಅಂದರೆ ಶಾಲೆ-ಕಾಲೇಜ್‌, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸರ್ಕಾರಿ ಕಚೇರಿ ಆವರಣಗಳಲ್ಲಿರುವ ನಾಯಿಗಳಿಗಾಗಿ ಮಾತ್ರ ಶೆಲ್ಟರ್‌ ಮಾಡಿ ಇಡಬಹುದು. ಆದರೆ ಬೀದಿನಾಯಿಗಳಿಗೆ ಸುಪ್ರೀಂ ನಿರ್ದೇಶನದಂತೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ಅವುಗಳಿದ್ದ ಜಾಗೆಯಲ್ಲೇ ಬಿಡಲಾಗುವುದು ಎಂದರು. ಬಳಿಕ ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.ವಾಟರ್‌ ಕಂಪನಿಗೆ ನಕಾರ:ವಿಶ್ವ ಬ್ಯಾಂಕ್‌ ಸಲಹೆಯಂತೆ ನಿರಂತರ ನೀರು ಯೋಜನೆಯ ಅನುಷ್ಠಾನದ ಮೇಲುಸ್ತುವಾರಿ, ಭವಿಷ್ಯದ ಯೋಜನೆಗಳ ನಿರ್ಧರಿಸಲು ಸಿಟಿ ವಾಟರ್‌ ಕಂಪನಿ ರಚಿಸುವ ಪ್ರಸ್ತಾಪಕ್ಕೆ ಪಾಲಿಕೆ ಸದ್ಯಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಾತ್ರವೇನು? ಪಾಲಿಕೆಯ ಪಾತ್ರವೇನು ಎಂಬುದರ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು. ಆದಕಾರಣ ಇದಕ್ಕೆ ಒಪ್ಪಿಗೆ ಸೂಚಿಸುವುದು ಬೇಡ. ಮುಂದಿನ ಸಭೆಯಲ್ಲಿ ಇನ್ನಷ್ಟು ಚರ್ಚೆ ನಡೆಸಿ ನಂತರ ಏನು ಮಾಡಬೇಕು ಎಂಬುದನ್ನು ನಿರ್ಧರಿಸೋಣ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅದಕ್ಕಾಗಿ ಈ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲ್ಪಟ್ಟಿತು.ಆಶ್ರಯ ಮನೆ:ಸಭೆ ಆರಂಭವಾಗುತ್ತಿದ್ದಂತೆ ಆಶ್ರಯ ಮನೆ ಹಸ್ತಾಂತರವಾಗದಿರುವ ಬಗ್ಗೆ ಪ್ರಸ್ತಾಪಿಸಿದ ಸಭಾನಾಯಕ ಈರೇಶ ಅಂಚಟಗೇರಿ, ಬಂಗಾರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಾಜೀವ ಗಾಂಧಿ ವಸತಿ ಯೋಜನೆಯಡಿ ಸಾಕಷ್ಟು ಮನೆಗಳನ್ನು ಹಂಚಿಕೆ ಮಾಡಲಾಗಿದೆ. 15 ವರ್ಷ ಪರಭಾರೆ ಮಾಡಲು ಬರುವುದಿಲ್ಲವೆಂದು ನಿಯಮದಡಿ ಹಕ್ಕುಪತ್ರ ನೀಡಲಾಗಿದೆ. ಆದರೆ, 15 ವರ್ಷವಾದರೂ ಅವುಗಳನ್ನು ಬೇರೆಯವರಿಗೆ ಹಸ್ತಾಂತರಿಸಲು ಬರುತ್ತಿಲ್ಲ. ಸರ್ಕಾರವೇ ಕೊಟ್ಟಂತಹ ಹಕ್ಕುಪತ್ರಗಳು ಇ-ಸ್ವತ್ತು ಆಗುತ್ತಿಲ್ಲ. ನೋಂದಣಿ ಕೂಡ ಆಗುತ್ತಿಲ್ಲ ಎಂದು ಗಮನ ಸೆಳೆದರು.ಇದಕ್ಕೆ ಪಕ್ಷಾತೀತವಾಗಿ ಸದಸ್ಯರೆಲ್ಲರೂ ಬೆಂಬಲಿಸಿದರು. ಕೊನೆಗೆ ಆಯುಕ್ತ ರುದ್ರೇಶ ಘಾಳಿ ಅವರು, ಆಗ ಕೊಟ್ಟಂತಹ ಫಲಾನುಭವಿಗಳೇ ಬೇರೆ. ಈಗ ಅಲ್ಲಿ ವಾಸವಾಗಿರುವವರೇ ಬೇರೆಯವರಾಗಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು. ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಕುಡಿಯುವ ನೀರಿಗೆ ಪ್ರತ್ಯೇಕ ಸಭೆನಿರಂತರ ನೀರು ಯೋಜನೆಯ ಕಾಮಗಾರಿಯ ಗುತ್ತಿಗೆ ಪಡೆದಿರುವ ಎಲ್‌ ಆ್ಯಂಡ್‌ ಟಿ ಕಂಪನಿಯಿಂದ ಸರಿಯಾಗಿ ಕೆಲಸವೇ ಆಗುತ್ತಿಲ್ಲ. ಪೈಪ್‌ಗಳನ್ನೆಲ್ಲ ಹೆಣಾ ಮುಚ್ಚಿದಂತೆ ಮುಚ್ಚಿ ಹೋಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸದಸ್ಯೆ ಕವಿತಾ ಕಬ್ಬೇರ್‌ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿ ಎಲ್‌ ಆ್ಯಂಡ್‌ ಟಿ ಕಂಪನಿಯ ಕಾಮಗಾರಿಗಳಲ್ಲಿ ಲೋಪದೋಷಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಬಳಿಕ ಮೇಯರ್‌ ಅನುಪಸ್ಥಿತಿಯಲ್ಲಿ ಸಭೆ ನಡೆಸಿದ ಉಪಮೇಯರ್‌ ಸಂತೋಷ ಚವ್ಹಾಣ, ಫೆ. 10ಕ್ಕೆ ಇದಕ್ಕಾಗಿಯೇ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ರೂಲಿಂಗ್‌ ನೀಡಿದರು. ಅಲ್ಲದೇ ಅಂದಿನ ಸಭೆಗೆ ಎಲ್‌ ಆ್ಯಂಡ್‌ ಟಿ ಕಂಪನಿಯ ಹಿರಿಯ ಅಧಿಕಾರಿಗಳೇ ಬರಬೇಕು ಎಂದು ತಾಕೀತು ಮಾಡಿದರು.