ಬಳ್ಳಾರಿ: ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಇಲ್ಲಿನ ಕೌಲ್ ಬಜಾರ್ ಪ್ರದೇಶದ ಹಜರತ್ ಬೀದಿ ನಿವಾಸಿ ಅಬ್ದುಲ್ ಸಲಾಮ್ (36) ಎಂಬಾತನನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

ಸಾಮಾಜಿಕ ಮಾಧ್ಯಮ ಬಳಸಿಕೊಂಡು ಕೆಲವರು ಉಗ್ರವಾದ ಹರಡುತ್ತಿರುವ ಕುರಿತು ಆಂಧ್ರಪ್ರದೇಶ ವಿಜಯವಾಡದ ಸೆಕೆಂಡ್ ಟೌನ್ ಠಾಣೆಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಮಾ.23ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಕೆಲವರ ವಿರುದ್ಧ ಶೋಧನಾ ವಾರೆಂಟ್ ಪಡೆದು ಕಾರ್ಯಾಚರಣೆ ನಡೆಸಿದ್ದರು. ಉಗ್ರ ಸಂಘಟನೆಯ ನಂಟು ಹೊಂದಿದ್ದ ಎನ್ನಲಾದ ವಿಜಯವಾಡದ ರೆಹಮತುಲ್ಲಾ ಷರೀಫ್ (24) ಎಂಬಾತ ಸಿಕ್ಕಿಬಿದ್ದಿದ್ದ. ಈತನನ್ನು ವಿಚಾರಣೆ ನಡೆಸಿದಾಗ ಬಳ್ಳಾರಿಯಲ್ಲಿರುವ ಅಬ್ದುಲ್ ಸಲಾಮ್ ಕೂಡ ರೆಹಮತುಲ್ಲಾ ಷರೀಫ್‌ ಜತೆ ನಿರಂತರ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿ ತಿಳಿದ ಆಂಧ್ರ ಪೊಲೀಸರು ಮಂಗಳವಾರ ಮಧ್ಯರಾತ್ರಿ ಬಳ್ಳಾರಿಗೆ ಆಗಮಿಸಿ ಆರೋಪಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ಗೊತ್ತಾಗಿದೆ. ಬಂಧಿತ ಬಳ್ಳಾರಿಯ ಅಬ್ದುಲ್ ಸಲಾಮ್ ಲಾರಿ ಡ್ರೈವರ್ ಆಗಿದ್ದು, ಕಾಯಿಪಲ್ಯೆ ಹಾಗೂ ಒಣ ಮೆಣಸಿನಕಾಯಿ ಚೀಲಗಳನ್ನು ಸಾಗಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಉಗ್ರವಾದ ಸಿದ್ಧಾಂತ ಹರಡುತ್ತಿದ್ದ ಎನ್ನಲಾಗಿದೆ. ನಿಷೇಧಿತ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ಎಂದು ತಿಳಿದು ಬಂದಿದೆ.

ಈ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಶಂಕಿತನ ಜಾಡು ಹಿಡಿದು ಬಳ್ಳಾರಿಗೆ ಆಗಮಿಸಿದ್ದ ಎನ್‌ಐಎ ಅಧಿಕಾರಿಗಳು ಸ್ಫೋಟ ಪ್ರಕರಣದ ಆರೋಪಿ ಒಬ್ಬನನ್ನು ಬಂಧಿಸಿ ಕರೆದೊಯ್ದಿದ್ದರು. 2023ರಲ್ಲಿ ಐಸಿಸ್ ಶಂಕಿತ ಉಗ್ರರ ಚಟುವಟಿಕೆಗೆ ಸಂಬಂಧಿಸಿದಂತೆ ಬಳ್ಳಾರಿ ಮೂಲದ ಮಹ್ಮದ್ ಮೀನಜ್, ಸುಲೈಮಾನ್, ಮಹ್ಮದ್ ಯೂನಸ್ ಎಂಬವರನ್ನು ಬಂಧಿಸಲಾಗಿತ್ತು. ಬಳ್ಳಾರಿಯ ಸುಲೈಮಾನ್ ಇರಾಕ್ ಹಾಗೂ ಸಿರಿಯಾ ದೇಶದಲ್ಲಿ ಕುಖ್ಯಾತಿ ಪಡೆದಿದ್ದ ಐಸಿಎಸ್ ಸಂಘಟನೆಯಿಂದ ಪ್ರೇರಣೆಗೊಂಡಿದ್ದ. ಐಸಿಎಸ್ ಉಗ್ರವಾದಿಗಳನ್ನು ಬೆಂಬಲಿಸುವಂತಹ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಸರಿಯಾಗಿ ತರಬೇತುಗೊಳಿಸಿ, ಅದೇ ವಿದ್ಯಾರ್ಥಿಗಳನ್ನು ವಿಧ್ವಂಸಕ ಕೃತ್ಯಗಳಿಗೆ ಬಳಸಲು ನಿರ್ಧರಿಸಿದ್ದ ಎಂಬ ಮಾಹಿತಿ ವಿಚಾರಣೆ ಬಳಿಕ ಬಹಿರಂಗವಾಗಿತ್ತು. ಕಳೆದ ಮಂಗಳವಾರ ತಡರಾತ್ರಿ ಬಂಧಿತನವಾಗಿರುವ ಆರೋಪಿ ಅಬ್ದುಲ್ ಸಲಾಮ್ ಸಹ ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದ ವ್ಯಕ್ತಿ ಎಂಬುದು ಗಮನಾರ್ಹ.