ಗಂಭೀರ ಹಾಸ್ಯ ಮಾಡಿ ಜನರನ್ನು ನಗಿಸಲು ಸಾಧ್ಯ: ಮುಖ್ಯಪ್ರಾಣ ಕಿನ್ನಿಗೋಳಿ

| Published : Oct 09 2024, 01:36 AM IST

ಗಂಭೀರ ಹಾಸ್ಯ ಮಾಡಿ ಜನರನ್ನು ನಗಿಸಲು ಸಾಧ್ಯ: ಮುಖ್ಯಪ್ರಾಣ ಕಿನ್ನಿಗೋಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಕಿನ್ನಿಗೋಳಿಯಲ್ಲಿನ ಕಲಾವಿದರ ಮನೆ ಉದಯಗಿರಿಯಲ್ಲಿ ಶುಕ್ರವಾರ ನಡೆದ‌ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ ಸರಣಿ - 6ರ’ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ತಮ್ಮ ಯಕ್ಷ ಪಯಣದ ಅನುಭವ ಕಥನ ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಯಕ್ಷಗಾನದಲ್ಲಿ ಹಾಸ್ಯಗಾರನ ಸ್ಥಾನ ಮಹತ್ವಪೂರ್ಣವಾದುದು. ರಂಗಸ್ಥಳದಲ್ಲಿ ಭಾಗವತರು ಪ್ರಧಾನವಾದರೆ, ಚೌಕಿಯಲ್ಲಿ ಹಾಸ್ಯಗಾರನಿಗೇ ಜವಾಬ್ದಾರಿ. ಹಾಸ್ಯ ಎಂದರೆ ಜನರಿಗೆ ಬೇಕಾದ್ದನ್ನು ನೀಡುವುದಲ್ಲ. ಜನರ ಮನೋಧರ್ಮವನ್ನು ರೂಪಿಸುವ ಕೆಲಸ. ಆದ್ದರಿಂದ ಹಾಸ್ಯದ ಹೆಸರಲ್ಲಿ ಬಂಡು ಮಾತು ಬೇಡ. ಗಂಭೀರ ಹಾಸ್ಯದಲ್ಲಿಯೇ ಜನರನ್ನು ನಗಿಸಿ ರಸಾಸ್ವಾದನೆ ಮಾಡಿಸಬಹುದು ಎಂದು ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಕಿನ್ನಿಗೋಳಿಯಲ್ಲಿನ ಕಲಾವಿದರ ಮನೆ ಉದಯಗಿರಿಯಲ್ಲಿ ಶುಕ್ರವಾರ ನಡೆದ‌ ಕಲಾವಿದರ ಯಕ್ಷಪಯಣದ ಸ್ವಗತ ‘ಯಕ್ಷಾಯಣ- ದಾಖಲೀಕರಣ ಸರಣಿ - 6ರ’ ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡರು.

ಸೀನು ಸೀನರಿಯ ಯಕ್ಷಗಾನದ ಕಾಲದಲ್ಲಿ ಹಾಸ್ಯ ಪಾತ್ರಧಾರಿಯಾಗಿ ಪ್ರವೇಶಿಸಿದ ಬಳಿಕ ಶಿಮಂತೂರು ನಾರಾಯಣ ಶೆಟ್ಟಿ ಮತ್ತು ಮಿಜಾರು ಅಣ್ಣಪ್ಪ ಮಾರ್ಗದರ್ಶನದಿಂದ ಕಲಾವಿದನಾಗಿ ಬೆಳೆಯುವುದಕ್ಕೆ ಸಾಧ್ಯವಾಯಿತು. ತೆಂಕು- ಬಡಗು ಎರಡೂ ತಿಟ್ಟುಗಳಲ್ಲಿಯೂ ಹಾಸ್ಯ ಪಾತ್ರದಲ್ಲಿ ವಿಪುಲ ಅವಕಾಶ ದೊರೆಯಿತು. ಹಾಸ್ಯ ಕಲಾವಿದನಿಗೆ ತೆಂಕುತಿಟ್ಟಿನಲ್ಲಿ ಸ್ವಾತಂತ್ರ್ಯ ಹೆಚ್ಚು. ಬಡಗಲ್ಲಿ ಶಿಸ್ತು ಹೆಚ್ಚು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ್ ಕೊಡೆತ್ತೂರು ಮಾತನಾಡಿ, ಮುಖ್ಯಪ್ರಾಣ ಕಿನ್ನಿಗೋಳಿ ಬಡತನದ ಹಿನ್ನೆಲೆಯಿಂದ ಬಂದವರು. 82 ರ ಹಿರಿ ವಯಸ್ಸಿನಲ್ಲೂ ತಾಳಮದ್ದಳೆ ಯಕ್ಷಗಾನಗಳನ್ನು ನೋಡುವ ಆಸಕ್ತಿ ಹೊಂದಿದ್ದಾರೆ. ಇದು ಹೊಸ ಕಲಾವಿದರಿಗೆ ಮಾರ್ಗದರ್ಶಿ. ಎಷ್ಟು ಗೌರವ ಬಂದರೂ ಅಹಂ ಇಲ್ಲದೆ ಕಲಾವಿದ ಹೇಗಿರಬಹುದೆಂಬುದಕ್ಕೆ ಇವರು ಮಾದರಿ ಎಂದರು.

ಮಂಗಳೂರು ವಿ.ವಿ. ಯಕ್ಷಗಾನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ‌ ಮಾತನಾಡಿ ಮುಖ್ಯಪ್ರಾಣರು ಐದು ದಶಕಗಳ ತಿರುಗಾಟದ ಅನುಭವಿ. ಕಲಿತದ್ದು 5ನೇ ತರಗತಿಯಾದರೂ ಕಲಾವಿದರಾಗಿ ವಿ.ವಿ.ಯ ಸಂಶೋಧನೆಯ ಗಮನ ಸೆಳೆದಿದ್ದಾರೆ. ಕಂದರ, ವೃದ್ಧಭೂಸುರ, ಚಂದಗೋಪ, ವಿಜಯ, ಬಾಹುಕ, ಸಂಜಯ, ದೇವಿಮಹಾತ್ಮೆಯ ಚಾರಕ ಮೊದಲಾದ ಹಲವು ಪಾತ್ರಗಳಿಗೆ ರಂಗದಲ್ಲಿ ಜೀವತುಂಬಿರುವ ಇವರು ಕಟೀಲು, ಸಾಲಿಗ್ರಾಮ, ಮಂತ್ರಾಲಯ, ಮಂದಾರ್ತಿ, ಇರಾ, ಪೆರ್ಡೂರು, ಸುಬ್ರಹ್ಮಣ್ಯ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಯಕ್ಷಗಾನದ ರಾಜಹಾಸ್ಯದ ಪರಂಪರೆಯಲ್ಲಿ ಮುಖ್ಯಪ್ರಾಣರದು ಮಹತ್ವದ ಹೆಸರು ಎಂದರು.

ಯಕ್ಷಪಯಣದ ಅನುಭವ ಹಂಚಿಕೊಂಡ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಗೌರವಿಸಲಾಯಿತು.

ಕಿನ್ನಿಗೋಳಿ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕೆಲೆಂಜೂರು, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ, ಸಿಬ್ಬಂದಿ ಸ್ವಾತಿ ಎಸ್. ರಾವ್, ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಚಂದ್ರಶೇಖರ್ ಎಂ.ಬಿ, ರತ್ನಾಕರವರ್ಣಿ ಪೀಠದ ಸಂಶೋಧಕ ಪ್ರಸಾದ್ ಮತ್ತಿತರರು ಇದ್ದರು.