- ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಮಾಯಕೊಂಡ ಶಾಸಕ ಬಸವಂತಪ್ಪ ಆಗ್ರಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಖಾಸಗಿ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ನೌಕರರ ಮೇಲಾಗುತ್ತಿರುವ ಶೋಷಣೆ ತಪ್ಪಿಸಿ, ರಾಜ್ಯ ಸರ್ಕಾರವು ಹೊರಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ ನೌಕರರ ಖಾತೆಗೆ ನೇರ ಪಾವತಿ ಅಥವಾ ಒಳಗುತ್ತಿಗೆ ಪದ್ಧತಿ ಜಾರಿಗೆ ತರಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.ವಿಧಾನಸಭೆಯಲ್ಲಿ ಸೋಮವಾರ ಸಂಜೆ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ಎಸ್.ಬಸವಂತಪ್ಪ, ರಾಜ್ಯದ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರಿಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಕೊಡುತ್ತಿಲ್ಲ. ಇಎಸ್‌ಐ, ಪಿಎಫ್ ಪಾವತಿ ಮಾಡುತ್ತಿಲ್ಲ. 24 ಸಾವಿರ ರೂ. ವೇತನ ನಿಗದಿ ಮಾಡಿದ್ದರೆ, 10 ಸಾವಿರ ರೂ. ಪಾವತಿಸಿ ಉಳಿದ ಹಣ ಏಜೆನ್ಸಿಯವರ ಪಾಲಾಗುತ್ತಿದೆ. ಈ ರೀತಿ ಪ್ರತಿನಿತ್ಯ ಶೋಷಣೆ ನಡೆಯುತ್ತಿರುವ ದೂರುಗಳು ಸರ್ವೇ ಸಾಮಾನ್ಯವಾಗಿದೆ. ಈ ಹಿಂದೆ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದರು.ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಈ ವಿಷಯ ಗಂಭೀರವಾಗಿ ತೆಗೆದುಕೊಂಡು ಬೀದರ್ ಜಿಲ್ಲೆಯಲ್ಲಿ 2008ರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘದ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ರೂಪಕ್ಕೆ ತರಬೇಕೆಂದು ಚಿಂತನೆ ನಡೆಸಿದ್ದಾರೆ. ಇದರನ್ವಯ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಸಹಾಕರ ಸಂಘ ಪ್ರಾರಂಭಿಸಲು ಎಲ್ಲಾ ಸಿದ್ಧತೆ ನಡೆದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಇಲಾಖಾ ಮುಖ್ಯಸ್ಥರ ಸಭೆ ಕರೆದು ಬೀದರ್ ಮಾದರಿಯಲ್ಲಿ ಸಹಕಾರ ಸಂಘ ರಚಿಸಿ ಆ ಮೂಲಕ ನೌಕರರಿಗೆ ನೇರ ಪಾವತಿ ಪದ್ಧತಿ ಜಾರಿ ಮಾಡಬೇಕು. ನೌಕರರ ಮೇಲೆ ಶೋಷಣೆ ಮಾಡಿ ಕಡಿಮೆ ವೇತನ ಪಾವತಿಸುತ್ತಿರುವ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.ಆರೋಗ್ಯ ಸಚಿವರ ಪರವಾಗಿ ಸದನಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್, ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ ನೇರ ಪಾವತಿ ಪದ್ಧತಿ ಜಾರಿ ಮಾಡಬೇಕೆಂಬುದು ಶಾಸಕ ಕೆ.ಎಸ್.ಬಸವಂತಪ್ಪ ಅವರ ಒತ್ತಾಯವಾಗಿದೆ. ಆದರೆ ಆರೋಗ್ಯ ಇಲಾಖೆಯಿಂದ ನೇರ ಪಾವತಿ ಪದ್ಧತಿ ಜಾರಿಗೆ ಕಾನೂನು ತೊಡಕುಗಳಿವೆ. ಹೀಗಾಗಿ ಏಜೆನ್ಸಿ ಮೂಲಕ ನೌಕರರಿಗೆ ವೇತನ, ಇಎಸ್‌ಐ, ಪಿಎಫ್ ಹಣವನ್ನು ಪಾವತಿಸಲಾಗುತ್ತಿದೆ ಎಂದು ಸದನಕ್ಕೆ ಉತ್ತರ ನೀಡಿದರು.ಹೊರಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿ ಬೀದರ್ ಜಿಲ್ಲೆಯ ಮಾದರಿಯಲ್ಲಿ ಸಹಕಾರ ಸಂಘಗಳನ್ನು ರಚಿಸಿ ಆ ಮೂಲಕ ನೌಕರರಿಗೆ ನೇರ ಪಾವತಿ ವ್ಯವಸ್ಥೆ ಜಾರಿಗೆ ತರಬೇಕೆಂದು ಸರ್ಕಾರವನ್ನು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.- - -
(ಕೋಟ್) ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವುದು ಅಸಾಧ್ಯ. ಆದರೆ ಈ ನೌಕರರಿಗೆ ಕಾರ್ಮಿಕ ಕಾಯ್ದೆ ಪ್ರಕಾರ ಕೈತುಂಬ ವೇತನ ನೀಡಿದರೆ ಅವರು ನೆಮ್ಮದಿಯಿಂದ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
- ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ.
- - --20ಕೆಡಿವಿಜಿ32: