ಹೊರಗುತ್ತಿಗೆ ಪದ್ಧತಿ ಕೈಬಿಡಿ: ಅಧಿವೇಶನದಲ್ಲಿ ಬಸವಂತಪ್ಪ ಆಗ್ರಹ

| Published : Jul 25 2024, 01:16 AM IST

ಸಾರಾಂಶ

ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರಿಗೆ ಗುತ್ತಿಗೆದಾರರು ಸರಿಯಾಗಿ ವೇತನ, ವಿವಿಧ ಸೌಲಭ್ಯ ನೀಡದೇ, ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನಾದರೂ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಸರ್ಕಾರದಿಂದಲೇ ನೌಕರರ ಖಾತೆಗೆ ಪ್ರತಿ ತಿಂಗಳ ನೇರವಾಗಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಒತ್ತಾಯಿಸಿದ್ದಾರೆ.

- ಗುತ್ತಿಗೆದಾರರ ದೌರ್ಜನ್ಯ ಹಿನ್ನೆಲೆ ಪೌರ ಕಾರ್ಮಿಕರ ಖಾತೆಗೆ ನೇರ ವೇತನ ಪಾವತಿಗೆ ಆಗ್ರಹ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರಿಗೆ ಗುತ್ತಿಗೆದಾರರು ಸರಿಯಾಗಿ ವೇತನ, ವಿವಿಧ ಸೌಲಭ್ಯ ನೀಡದೇ, ಹಗಲು ದರೋಡೆ ಮಾಡುತ್ತಿದ್ದಾರೆ. ಇನ್ನಾದರೂ ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ, ಸರ್ಕಾರದಿಂದಲೇ ನೌಕರರ ಖಾತೆಗೆ ಪ್ರತಿ ತಿಂಗಳ ನೇರವಾಗಿ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಮುಂಗಾರು ಅಧಿವೇಶನ ಪ್ರಶ್ನೋತ್ತರ ಕಲಾಪ ವೇಳೆ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆ, ಜಿಪಂ, ಸಮಾಜ ಕಲ್ಯಾಣ, ತೋಟಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ, ಎಪಿಎಂಸಿ, ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ನೌಕರರಿಗೆ ಗುತ್ತಿಗೆದಾರರು ಪ್ರತಿ ತಿಂಗಳು ವೇತನ ನೀಡದೇ, ಸತಾಯಿಸುತ್ತಿದ್ದಾರೆ. ಕಾರ್ಮಿಕ ಕಾಯ್ದೆ ಪ್ರಕಾರ ಪ್ರತಿ ನೌಕರನಿಗೆ ₹17500 ವೇತನ ನೀಡಬೇಕು. ಆದರೆ, ಗುತ್ತಿಗೆ ಪಡೆದ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಶಾಮೀಲಾಗಿ, ಒಬ್ಬೊಬ್ಬ ನೌಕರನಿಗೆ ಕೇವಲ ₹10 ಸಾವಿರ ನೀಡುತ್ತಿದ್ದಾರೆ ಎಂದು ದೂರಿದರು.

ಬರೀ ₹10 ಸಾವಿರ ವೇತನ ನೀಡಿದರೂ ನಿಗದಿತ ಸಮಯಕ್ಕೆ ನೀಡುತ್ತಿಲ್ಲ. ಸರಿಯಾಗಿ ಇಎಸ್‌ಐ, ಪಿಎಫ್‌ ಸಹ ಕಟ್ಟುತ್ತಿಲ್ಲ. ಇದರಿಂದ ಡಿ ದರ್ಜೆ ನೌಕರರಿಗೆ ತೀವ್ರ ಅನ್ಯಾಯವಾಗುತ್ತಿದೆ. ಆಕಸ್ಮಾತ್‌ ಡಿ ದರ್ಜೆ ನೌಕರ ಅನಾರೋಗ್ಯಕ್ಕೆ ತುತ್ತಾದರೆ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಪರದಾಡಬೇಕಾಗುತ್ತದೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ, ಕೆಲ ನೌಕರರು ಜೀವ ಕಳೆದುಕೊಂಡ ನಿದರ್ಶನಗಳೂ ಇವೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಡಿ ದರ್ಜೆ ನೌಕರರ ಸಮಸ್ಯೆ ಇದಾಗಿದೆ ಎಂದು ಸರ್ಕಾರದ ಗಮನ ಸೆಳೆದರು. ಕೆ.ಎಸ್.ಬಸವಂತಪ್ಪ ಅವರು ಮುಂದಿಟ್ಟ ಬೇಡಿಕೆಗೆ ಶಾಸಕ ಮಹಾಂತೇಶ ಕೌಜಲಗಿ ಸೇರಿದಂತೆ ಅನೇಕರು ಧ್ವನಿಗೂಡಿಸಿ, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದರು.

ಡಿಸಿ ಮೂಲಕ ಪಾವತಿಗೆ ಚಿಂತನೆ:

ಆಗ ಕಾರ್ಮಿಕ ಸಚಿವ ಸಂತೋಷ ಲಾಡ್, ಗುತ್ತಿಗೆದಾರರು ಹೊರಗುತ್ತಿಗೆ ನೌಕರರಿಗೆ ವೇತನ, ಭವಿಷ್ಯ ನಿಧಿ, ಇಎಸ್‌ಐ ಸೇರಿದಂತೆ ವಿವಿಧ ಸೌಲಭ್ಯ ಸರಿಯಾಗಿ ನೀಡದ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಈ ಬಗ್ಗೆ ಸೂಕ್ತ ದಾಖೆ ನೀಡಿದರೆ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಂದು ಸೊಸೈಟಿ ಸ್ಥಾಪಿಸಿ, ಜಿಲ್ಲಾಧಿಕಾರಿಗಳ ಮೂಲಕ ನೇರವಾಗಿ ನೌಕರರ ಖಾತೆಗೆಗಳಿಗೆ ವೇತನ ಪಾವತಿಸುವ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆಸಿದ್ದೇವೆ ವಿವರಿಸಿದರು.

ಬೀದರ್ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇಂತಹ ವ್ಯವಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ಎಲ್ಲ ಜಿಲ್ಲೆಗೂ ವಿಸ್ತರಿಸಿ ಪ್ರತಿ ತಿಂಗಳು ಹೊರಗುತ್ತಿಗೆ ನೌಕರರ ಖಾತೆಗೆ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಆದಷ್ಟು ಬೇಗನೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮುಂದುವರಿದು ಮಾತನಾಡಿ, ರಾಜ್ಯದ ನಗರಸಭೆ, ಪುರಸಭೆ, ಪಾಲಿಕೆಗಳಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಿದ ಮುಖ್ಯಮಂತ್ರಿ ಅರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಪಾಲಿಕೆಯಲ್ಲಿ ಇನ್ನೂ ಕೆಲ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿದ್ದು, ಅವರನ್ನೂ ಕಾಯಂಗೊಳಿಸಬೇಕು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರಿತ ಡಿ ದರ್ಜೆ ನೌಕರರನ್ನು ಕಾಯಂಗೊಳಿಸಿ ಅಥವಾ ನೇರವಾಗಿ ಖಾತೆಗೆ ವೇತನ ಪಾವತಿ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

- - -

ಬಾಕ್ಸ್

* ಗುತ್ತಿಗೆದಾರನ ಬಳಿಯೇ ಎಟಿಎಂ, ಪಾಸ್ ಬುಕ್: ದಾವಣಗೆರೆಗೆ ನಾನೇ ಬರ್ತೀನಿ: ಸಚಿವ ಲಾಡ್

ದಾವಣಗೆರೆ ಪಾಲಿಕೆಯಲ್ಲಿ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಸರಿಯಾಗಿ ವೇತನವನ್ನೇ ನೀಡುತ್ತಿಲ್ಲ. ಈ ನೌಕರರ ಎಟಿಎಂ ಕಾಡ್೯, ಬ್ಯಾಂಕ್ ಪಾಸ್ ಬುಕ್‌ಗಳನ್ನು ಗುತ್ತಿಗೆದಾರರು ತಮ್ಮ ಬಳಿಯೇ ಇಟ್ಟುಕೊಂಡು, ಪೌರ ಕಾರ್ಮಿಕರ ಖಾತೆಗಳಿಗೆ ವೇತನ ಹಾಕುತ್ತಿದ್ದಂತೆ ಗುತ್ತಿಗೆದಾರರೇ ಬಿಡಿಸಿಕೊಂಡು, ತಿಂಗಳಿಡಿ ದುಡಿದ ಪೌರಕಾರ್ಮಿಕರ ಕೈಗಳಿಗೆ ಖಾಲಿ ಚಿಪ್ಪು ಕೊಡುತ್ತಾರೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು. ಆಗ ಕಾರ್ಮಿಕ ಸಚಿವ ಸಂತೋಷ ಲಾಡ್, ಇಷ್ಟೆಲ್ಲಾ ಆರೋಪ, ದೂರು ಕೇಳಿ ಬರುತ್ತಿರುವ ಹಿನ್ನೆಲೆ ಶೀಘ್ರವೇ ದಾವಣಗೆರೆ ಜಿಲ್ಲೆಗೆ ಭೇಟಿ ನೀಡಿ, ಈ ಬಗ್ಗೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.

- - - -24ಕೆಡಿವಿಜಿ4, 5:

ಬೆಂಗಳೂರಿನ ವಿಧಾನಸೌಧದಲ್ಲಿ ಅಧಿವೇಶನದಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿದರು.