ಮಾರುಕಟ್ಟೆ ಶುಲ್ಕ ವಿನಾಯಿತಿ ರದ್ದು: ಶಿವಾನಂದ ಪಾಟೀಲ

| Published : Feb 06 2025, 11:48 PM IST

ಸಾರಾಂಶ

ಮದ್ದೂರು ಎಪಿಎಂಸಿ ಕಾರ್ಯದರ್ಶಿ ಲತಾ ಅವರ ವರದಿ ಮತ್ತು ಮಾಹಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇದೇ ರೀತಿ ವರದಿ ಸಿದ್ಧಪಡಿಸುವುದು ಸೂಕ್ತ ಎಂದು ಹೇಳಿದರು. ನಿಗದಿತ ನಮೂನೆಯಲ್ಲಿ ವರದಿ ಸಿದ್ಧಪಡಿಸಿದರೆ ಅನುಕೂಲ. ಮಾಹಿತಿಯಲ್ಲಿ ಶೇಕಡಾವಾರು ಇರಲಿ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಆಹಾರ ಸಂಸ್ಕರಣಾ ಘಟಕಗಳು ಸೇರಿ ಹಲವು ಉದ್ದಿಮೆಗಳಿಗೆ ನೀಡಿರುವ ಮಾರುಕಟ್ಟೆ ಶುಲ್ಕ ವಿನಾಯಿತಿ ಅವಧಿ ಮುಗಿದಿದ್ದರೆ ಮತ್ತೆ ವಿಸ್ತರಣೆ ಮಾಡುವುದು ಬೇಡ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗುರುವಾರ ಜಿಲ್ಲೆಯ ಎಲ್ಲ ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಎಪಿಎಂಸಿಗಳನ್ನು ಸದೃಢಗೊಳಿಸಲು ಕಠಿಣ ಕ್ರಮ ಅನಿವಾರ್ಯ. ಮಾರುಕಟ್ಟೆ ಶುಲ್ಕ ವಿನಾಯಿತಿಯನ್ನು ಯಾವ ಯಾವ ಸ್ವರೂಪದ ಉದ್ದಿಮೆಗಳಿಗೆ ನೀಡಲಾಗಿದೆ. ಇದರಿಂದ ಎಪಿಎಂಸಿಗೆ ವಾರ್ಷಿಕ ಎಷ್ಟು ನಷ್ಟ ಉಂಟಾಗುತ್ತಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ ಎಂದು ಸೂಚಿಸಿದರು.

ಮತ್ತೆ ವಿಸ್ತರಣೆ ಮಾಡಬೇಡಿ:

ಕೈಗಾರಿಕಾ ನೀತಿ ರೂಪಿಸುವ ವೇಳೆ ಆಹಾರ ಸಂಸ್ಕರಣಾ ಘಟಕಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನ ಖರೀದಿಗೆ ಅನುಮತಿ ನೀಡಿರಬಹುದು. ಇದರಿಂದ ಅವರಿಗೆ ಎಪಿಎಂಸಿ ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ. ಆದರೆ ಈ ವಿನಾಯಿತಿ ಅವಧಿ ಮುಗಿದ ನಂತರ ಮತ್ತೆ ವಿಸ್ತರಣೆ ಮಾಡಬಾರದು. ಜಿಲ್ಲೆಯ ಒಂದು ಆಹಾರ ಸಂಸ್ಕರಣಾ ಘಟಕಕ್ಕೆ ನೀಡಿರುವ ವಿನಾಯಿತಿಯಿಂದ ಎಪಿಎಂಸಿಗೆ ವಾರ್ಷಿಕ 21 ಲಕ್ಷ ರು. ಆದಾಯ ತಪ್ಪಿದರೆ ಇಡೀ ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಈ ರೀತಿ ಎಷ್ಟು ಆದಾಯ ಕೈತಪ್ಪಬಹುದು ಅಂದಾಜು ಮಾಡಿ ಎಂದು ಹೇಳಿದರು.

ವಿದ್ಯುತ್‌ ಬಳಕೆ, ಜಿಎಸ್‌ಟಿ ಪಾವತಿಯನ್ನು ಪರಿಶೀಲಿಸಿ:

ಆಹಾರ ಸಂಸ್ಕರಣಾ ಘಟಕಗಳಿಗೆ ನಿಗದಿತ ಪ್ರಮಾಣಕ್ಕೆ ಮಾತ್ರ ಮಾರುಕಟ್ಟೆ ಶುಲ್ಕ ವಿನಾಯಿತಿ ನೀಡಲಾಗಿದೆ. ಸರ್ಕಾರ ನೀಡಿರುವ ಈ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಈ ಘಟಕಗಳು ಬಳಕೆ ಮಾಡುವ ವಿದ್ಯುತ್‌ ಪ್ರಮಾಣ ಮತ್ತು ಜಿಎಸ್‌ಟಿ ಪಾವತಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ದುರ್ಬಳಕೆಯಾಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ದುಸ್ಥಿತಿಯಲ್ಲಿದ್ದರೆ ನೆಲಸಮಗೊಳಿಸಿ:

ಬಹುತೇಕ ಎಪಿಎಂಸಿಗಳಲ್ಲಿ ಗೋದಾಮುಗಳು ಖಾಲಿ ಇದ್ದರೂ ಅವುಗಳನ್ನು ಬಾಡಿಗೆ ಕೊಡಲು ನಿರ್ಲಕ್ಷ್ಯ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಕಡೆ ಬಾಡಿಗೆ ಕೊಟ್ಟಿದ್ದರೂ, ಈ ಮೊತ್ತ ಗೋದಾಮುಗಳ ಸುಣ್ಣ- ಬಣ್ಣಕ್ಕೂ ಆಗುತ್ತಿಲ್ಲ. ಕಾರ್ಯದರ್ಶಿಗಳು ಇದನ್ನು ಆದ್ಯತೆ ಮೇಲೆ ಪರಿಗಣಿಸಿ ಖಾಲಿ ಇರುವ ಗೋದಾಮುಗಳನ್ನು ಬಾಡಿಗೆ ಕೊಡಲು ಕ್ರಮ ಕೈಗೊಳ್ಳಬೇಕು. ದುಸ್ಥಿತಿಯಲ್ಲಿರುವ ಗೋದಾಮುಗಳನ್ನು ನೆಲಸಮ ಮಾಡಿ ಈ ನಿವೇಶನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಯೋಜನೆ ರೂಪಿಸಿ ಎಂದು ಸಲಹೆ ನೀಡಿದರು.

ಸಿಬ್ಬಂದಿ ಕೊರತೆ:

ಕೆಲವು ಎಪಿಎಂಸಿಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗತ್ಯ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಸೇವೆಯಿಂದ ನಿವೃತ್ತಿ ಹೊಂದಿರುವ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಉಪನಿರ್ದೇಶಕರನ್ನೇ ನೇಮಕ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದರು. ಎಪಿಎಂಸಿ ಕಾರ್ಯದರ್ಶಿಗಳು ನೀಡುವ ಪ್ರಗತಿಯ ವರದಿಯನ್ನು ಗಮನಿಸಿದರೆ ಇಡೀ ಎಪಿಎಂಸಿಯ ಚಿತ್ರಣ ಸ್ಪಷ್ಟವಾಗುವಂತೆ ಇರಬೇಕು. ಆದ್ದರಿಂದ ನಿರ್ದಿಷ್ಟ ರೂಪದಲ್ಲಿ ವರದಿ ನೀಡಲು ಕೇಂದ್ರ ಕಚೇರಿಯಿಂದಲೇ ನಮೂನೆಯನ್ನು ಕಳುಹಿಸಿಕೊಡಿ ಎಂದು ಸೂಚಿಸಿದರು.

ಕಳಪೆ ರಾಗಿ ಖರೀದಿಸಿದರೆ ತನಿಖೆ:

ಬೆಂಬಲ ಬೆಲೆಯಲ್ಲಿ ಕಳಪೆ ಗುಣಮಟ್ಟದ ರಾಗಿ ಖರೀದಿ ಮಾಡಿದರೆ ತನಿಖೆ ಮಾಡಿಸಬೇಕಾಗುತ್ತದೆ ಎಂದು ಎಪಿಎಂಸಿ ಅಧಿಕಾರಿಗಳಿಗೆ ಸಚಿವ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.

ಜೋಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪಡಿತರ ವಿತರಣೆ ವೇಳೆ ಜೋಳ ಕಳಪೆಯಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದೆ. ಇಂತಹ ಲೋಪ ರಾಗಿ ಖರೀದಿಯಲ್ಲಿ ಆಗಬಾರದು ಎಂದು ಹೇಳಿದರು.

ಮದ್ದೂರು ಕಾರ್ಯದರ್ಶಿಗೆ ಮೆಚ್ಚುಗೆ:

ಮದ್ದೂರು ಎಪಿಎಂಸಿ ಕಾರ್ಯದರ್ಶಿ ಲತಾ ಅವರ ವರದಿ ಮತ್ತು ಮಾಹಿತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಇದೇ ರೀತಿ ವರದಿ ಸಿದ್ಧಪಡಿಸುವುದು ಸೂಕ್ತ ಎಂದು ಹೇಳಿದರು. ನಿಗದಿತ ನಮೂನೆಯಲ್ಲಿ ವರದಿ ಸಿದ್ಧಪಡಿಸಿದರೆ ಅನುಕೂಲ. ಮಾಹಿತಿಯಲ್ಲಿ ಶೇಕಡಾವಾರು ಇರಲಿ ಎಂದು ಹೇಳಿದರು.ಮಂಡ್ಯ ಶಾಸಕ ರವಿಕುಮಾರ್‌, ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಹೆಚ್ಚುವರಿ ನಿರ್ದೇಶಕ (ಆಡಳಿತ) ನಜೀಬುಲ್ಲಾಖಾನ್‌, ಜಿಲ್ಲೆಯ ಎಲ್ಲ ಎಪಿಎಂಸಿಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.