ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ರಿಚಾ ಪಾಂಡೆಯ ಅಬ್ರಕಾ-ಡಾಗ್ ಕಾದಂಬರಿಯ ಲೋಕರ್ಪಣೆ ಮಾಡಲಾಯಿತು.

ಧಾರವಾಡ: 15ರ ಬಾಲಕಿ ರಿಚಾ ಪಾಂಡೆ ಬರೆದ ಅಬ್ರಕಾ-ಡಾಗ್ ಕಾದಂಬರಿ ಓದುಗರ ಕಲ್ಪನಾ ಲೋಕವನ್ನು ಶ್ರೀಮಂತಗೊಳಿಸುವುದರಲ್ಲಿ ಸಂದೇಹವಿಲ್ಲ ಎಂದು ಕಲಬುರ್ಗಿಯ ಕೇಂದ್ರಿಯ ವಿವಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಡೋಣೂರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಸಂಸ್ಕಾರ ಭಾರತಿ ಆಯೋಜಿಸಿದ್ದ ರಿಚಾ ಪಾಂಡೆಯ ಅಬ್ರಕಾ-ಡಾಗ್ ಕಾದಂಬರಿಯ ಲೋಕರ್ಪಣೆಯಲ್ಲಿ ಕೃತಿ ಪರಿಚಯಿಸಿದರು.

ಲೇಖಕಿ ರಿಚಾ ಪಾಂಡೆಯಲ್ಲಿ ಕಲ್ಪನಾಶಕ್ತಿ ಹಾಗೂ ಸೂಕ್ಷ್ಮ ಸಂವೇದನೆಯಿರುವುದು ಗೊತ್ತಾಗುತ್ತದೆ. ಬಾಲಕಿಯೊಬ್ಬಳು ಕಾದಂಬರಿ ಲೋಕಕ್ಕೆ ಅಮೋಘ ಕೊಡುಗೆ ನೀಡಿದ್ದಾಳೆ. ಇದು ಕೇವಲ ಮಕ್ಕಳ ಕಾದಂಬರಿಯಲ್ಲ, ಎಲ್ಲರೂ ಓದಬೇಕಾದ ಕಾದಂಬರಿ. ಮುಂದೆ ಅವಳು ದೊಡ್ಡ ಕಾದಂಬರಿಕಾರ್ತಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು.

273 ಪುಟಗಳ ಕಾದಂಬರಿಯ ಸರಳ ನಿರೂಪಣಾ ಶೈಲಿ ಇಷ್ಟವಾಗುತ್ತದೆ. ಅದ್ಭುತ ಬಾಲ್ಯ, ಮುಗ್ಧ ಜಗತ್ತನ್ನು ಮತ್ತೆ ಕಾಣಲು ಸಾಧ್ಯವಾಗುತ್ತದೆ. ನಾಯಿ ಕಾದಂಬರಿಯ ಶಕ್ತಿ. ನಾಯಿಯ ದೃಷ್ಟಿಯಿಂದ ಜಗತ್ತನ್ನು ನೋಡಿದ್ದಾಳೆ ಎಂದು ನುಡಿದರು.

ಕೃತಿ ಲೋಕಾರ್ಪಣೆ ಮಾಡಿದ ಸುಬ್ಬು ಪ್ರಕಾಶನದ ಋತ್ವಿಕ್ ಸುಬ್ರಮಣ್ಯ ಮಾತನಾಡಿ, ಕಾದಂಬರಿಯಲ್ಲಿ ನಾಯಿಯ ವಿಶಿಷ್ಟ ಗುಣಲಕ್ಷಣಗಳನ್ನು ಬಹಳ ಮಾರ್ಮಿಕವಾಗಿ, ಹಿರಿಯ ಓದುಗರನ್ನು ಅಚ್ಚರಿಗೊಳಿಸಿದ್ದಾಳೆ, ಸ್ವಬೋಧ, ಶತ್ರುಬೋಧದ ಪ್ರತೀಕಗಳನ್ನು ಚೆನ್ನಾಗಿ ಬೆಸೆದಿದ್ದಾಳೆ. ಮಕ್ಕಳಿಗೆ ಪಂಚತಂತ್ರ ಪುಸ್ತಕ ನೀಡುವಂತೆ ಈ ಕಾದಂಬರಿಯನ್ನು ನೀಡಬೇಕು. ಇದು ಮಕ್ಕಳಿಗೆ ಸ್ಪೂರ್ತಿ ನೀಡುವುದರಲ್ಲಿ ಸಂಶಯವಿಲ್ಲ ಎಂದರು.

ಹಿರಿಯ ಕಲಾವಿದ ಬಿ. ಮಾರುತಿ, ರಿಚಾ ಪಾಂಡೆಯಲ್ಲಿ ಶ್ರೇಷ್ಠ ಕಲಾವಿದೆಯಾಗುವ ಸಾಮರ್ಥ್ಯವಿದ್ದು, ಅವಳು ಲೇಖನಕ್ಕೆ ಸೀಮಿತಗೊಳ್ಳದೇ ಚಿತ್ರಕಲೆಯಲ್ಲಿಯೂ ಸಾಧನೆ ಮಾಡಬೇಕು ಎಂದರು.

ಡಾ. ಜೆ.ವೈ. ಕದಂ, ವಿಜಯ ನಾಡಗೀರ, ಬಾಲಕರಾದ ಸಾತ್ವಿಕ, ಜೀವಿಕಾ, ಅಮೋದಿನಿ, ತನ್ಮಯಿ ಕಲೇಬರ್ ಅಭಿಪ್ರಾಯ ಹಂಚಿಕೊಂಡರು. ರಿಚಾ ಪಾಂಡೆ ವೇದಿಕೆಯಲ್ಲಿದ್ದರು. ಡಾ. ಶಶಿಧರ ನರೇಂದ್ರ, ಪರಿಮಳಾ ಕಾಗಲಕರ ನಿರೂಪಿಸಿದರು. ಶಿಲ್ಪಾ ಪಾಂಡೆ ವಂದಿಸಿದರು.