ಅವ್ಯವಹಾರ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

| Published : Mar 31 2024, 02:04 AM IST

ಸಾರಾಂಶ

ತಾಲೂಕಿನ ಶಿರವಾಳ ಗ್ರಾಮ ಪಂಚಾಯಿತಿ 2022-23 ಮತ್ತು 2023-24ನೇ ಸಾಲಿನ 15ನೇ ಹಣಕಾಸು ಮತ್ತು ನರೇಗಾ ಯೋಜನೆಯಡಿಯಲ್ಲಿ ಭಾರೀ ಮಟ್ಟದ ಅವ್ಯಹಾರ ನಡೆದಿದ್ದು, ಸೂಕ್ತ ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಪಂಚಾಯಿತಿ ಅಧ್ಯಕ್ಷ, ಪಿಡಿಒ ಹಾಗೂ ಜೆಇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

ಶಹಾಪುರ: ತಾಲೂಕಿನ ಶಿರವಾಳ ಗ್ರಾಮ ಪಂಚಾಯಿತಿ 2022-23 ಮತ್ತು 2023-24ನೇ ಸಾಲಿನ 15ನೇ ಹಣಕಾಸು ಮತ್ತು ನರೇಗಾ ಯೋಜನೆಯಡಿಯಲ್ಲಿ ಭಾರೀ ಮಟ್ಟದ ಅವ್ಯಹಾರ ನಡೆದಿದ್ದು, ಸೂಕ್ತ ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಪಂಚಾಯಿತಿ ಅಧ್ಯಕ್ಷ, ಪಿಡಿಒ ಹಾಗೂ ಜೆಇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿವತಿಯಿಂದ ನಗರದ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜೆಇ ಮತ್ತು ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸೂಕ್ತವಾದ ಕಾನೂನು ಕ್ರಮಕೈಗೊಳ್ಳುವಂತೆ ಫೆ.20ರಂದು ಮೇಲಧಿಕಾರಿಗಳಿಗೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕೂಡ ಯಾವುದೇ ಕ್ರಮಕೈಗೊಳ್ಳದೆ ಮೇಲಧಿಕಾರಿಗಳು ಅವ್ಯವಹಾರಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ಆರೋಪಿಸಿದ್ದಾರೆ.

ಗ್ರಾಮೀಣ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ಹಣವನ್ನು ವಿವಿಧ ಯೋಜನೆಗಳಿಗಾಗಿ ನೀಡಿದರೂ ಜನಸಾಮಾನ್ಯರಿಗೆ ತಲುಪುವ ಹೊತ್ತಿಗೆ ಮುಕ್ಕಾಲು ಭಾಗ ಪಿಡಿಒ ಅಧ್ಯಕ್ಷ ಹಾಗೂ ಜೆಇ ಜೇಬು ತುಂಬುತ್ತದೆ. ಜನರು ಮಾತ್ರ ಸಮಸ್ಯೆಗಳಿಂದ ಮುಕ್ತಿಯಾಗದಾಗೆ, ನಿತ್ಯ ನರಕಯಾತನೇ ಅನುಭವಿಸುವ ಪರಿಸ್ಥಿತಿ ಇದೆ. 14 ಮತ್ತು 15ನೇ ಹಣಕಾಸು ಸಂಪೂರ್ಣವಾಗಿ ಅವ್ಯವಹಾರವಾಗಿದೆ. ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ಸಂಘಟನಾ ಸಂಚಾಲಕರಾದ ಶರಬಣ್ಣ ದೋರನಹಳ್ಳಿ, ಸಿಂಗನಹಳ್ಳಿ, ಮಲ್ಲಿಕಾರ್ಜುನ ಹೊಸಮನಿ, ಬಲಭೀಮ ಬೇವಿನಹಳ್ಳಿ, ಮರಿಯಪ್ಪ ಕ್ರಾಂತಿ, ಶರಬಣ್ಣ ದೋರನಹಳ್ಳಿ, ಸಂತೋಷ್, ನಾಗರಾಜ್, ಸಿದ್ದಪ್ಪ, ಹೊನ್ನಪ್ಪ, ಶರಣಪ್ಪ, ಜೈಭೀಮ್, ನಾಗರಾಜ್ ಹುರಸಗುಂಡಗಿ, ಶ್ರೀಮಂತ ಹೊಸಮನಿ, ಮರಿಯಪ್ಪ ಶಿರವಾಳ ಇತರರಿದ್ದರು.