ಸಾರಾಂಶ
- ವೈಚಾರಿಕತೆ, ಚಲನಶೀಲತೆ ಕಳೆದುಕೊಂಡಾಗ ಬೌದ್ಧಿಕ ಅಂಗವಿಕಲತೆ
- ಕನ್ನಡ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನ, ಕಾರ್ಯಾಗಾರಕನ್ನಡಪ್ರಭ ವಾರ್ತೆ ಮಂಡ್ಯಸ್ವಾತಂತ್ರ್ಯಾನಂತರ ಕರ್ನಾಟಕ ಹೇಗಿರಬೇಕೆಂಬ ಬಗ್ಗೆ ಪಠ್ಯಗಳಲ್ಲಿ, ಭಾಷಣಗಳಲ್ಲಿ, ಬರಹದಲ್ಲಿ ನಿರಂಕುಶಮತಿತ್ವ ಕರ್ನಾಟಕ ಆಗಬೇಕು ಎಂಬ ಆಶಯ ಇದುವರೆಗೂ ಈಡೇರಿಲ್ಲ. ನಿರಂಕುಶಮತಿತ್ವ ಕರ್ನಾಟಕದಿಂದ ಕಣ್ಮರೆಯಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ವಿಷಾದಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನ ಮತ್ತು ಕಾರ್ಯಾಗಾರದಲ್ಲಿ ‘ಕನ್ನಡ ಭಾಷೆ ಮತ್ತು ಸಾಹಿತ್ಯ ಬೋಧನೆಯ ಪುನಶ್ಚೇತನ’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ದೃಶ್ಯ ಮಾಧ್ಯಮಗಳು ನಿರಂಕುಶಮತಿತ್ವವನ್ನು ಸಾಯಿಸುವ ಯಂತ್ರಗಳಾಗಿವೆ. ಅವು ನಮ್ಮ ಲೇಖಕರನ್ನೂ ಸಾಯಿಸುತ್ತಿವೆ. ಕಲಬುರ್ಗಿ ಅವರನ್ನು ಕೊಲೆಗೈಯುವ ಮುಂಚೆ ಅವರನ್ನು ರಾಕ್ಷಸೀಕರಿಸಲಾಗಿತ್ತು. ನಿರಂಕುಶಮತಿತ್ವ ಎಂದರೆ ‘ಸಂಪ್ರದಾಯದ ಅಂಕುಶವಿಲ್ಲದ ಹಾಗೆ ಬದುಕಬೇಕು ಎಂದರ್ಥ’. ಹಾಗೆಂದ ಮಾತ್ರಕ್ಕೆ ಅದು ಸ್ವೇಚ್ಛಾಚಾರವಲ್ಲ, ಆತ್ಮಶ್ರೀಗಾಗಿ ಲೋಕ ಕಲ್ಯಾಣಕ್ಕಾಗಿ ನಿರಂಕುಶಮತಿಯಾಗಬೇಕು ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.
ನಾಡಗೀತೆಯಲ್ಲಿ ಟಿಪ್ಪು-ಹೈದರ್ ಹೆಸರಿತ್ತು:ಮಂಡ್ಯದ ನೆಲದಲ್ಲಿ ಆಚರಿಸುವ ಕುಂತಿ ಪೂಜೆ ಜಗತ್ತಿನಲ್ಲೇ ವಿಶಿಷ್ಟ ಆಚರಣೆಯಾಗಿದೆ. ಕುವೆಂಪು ಬರೆದ ಜಯ ಭಾರತ ಜನನಿಯ ತನುಜಾತೆ.... ಕರಡು ಪ್ರತಿಯಲ್ಲಿ ಟಿಪ್ಪು ಮತ್ತು ಹೈದರ್ ಹೆಸರಿತ್ತು. ನಂತರ ಆ ಹೆಸರುಗಳನ್ನು ಕೈಬಿಟ್ಟರು. ಈ ಗೀತೆ ಕೇಳುವಾಗ ಆ ಇಬ್ಬರು ಆಚೆಗೆ ಹೋದರಲ್ಲ ಎಂಬ ಕೊರಗಿದೆ ಎಂದರು.
ಕುವೆಂಪು ಅವರ ‘ವಿಚಾರ ಕ್ರಾಂತಿಗೆ ಆಹ್ವಾನ’ ಈ ಕೃತಿಯನ್ನು ನಮ್ಮ ಎಲ್ಲಾ ಕನ್ನಡಿಗರಿಗೆ ಸುಲಭವಾಗಿ ದೊರೆಯುವಂತೆ ಹಂಚಬೇಕು. ಅದರ ಮೂಲಕ ಕಂಪನಶೀಲ, ಸಂವೇದನಾಶೀಲ ಸಮಾಜ ಕಟ್ಟುವುದು ಶಿಕ್ಷಕರ, ಲೇಖಕರ, ಶಿಕ್ಷಣ ತಜ್ಞರ ಕರ್ತವ್ಯವಾಗಬೇಕು. ಇದರ ಜೊತೆಯಲ್ಲಿ ಅಧ್ಯಾಪಕರನ್ನು ಸಂವೇದನಾಶೀಲರನ್ನಾಗಿ ಮಾಡಬೇಕು. ಆಗ ವಿದ್ಯಾರ್ಥಿಗಳು ಸಂವೇದನಾಶೀಲರಾಗುತ್ತಾರೆ, ನಾಗರಿಕರಾಗುತ್ತಾರೆ ಎಂದರು.ದೃಶ್ಯ ಮಾಧ್ಯಮಗಳು ನಮ್ಮ ವೈಚಾರಿಕ ಪ್ರಜ್ಞೆಯನ್ನು ಸಾಯಿಸಲು ಹುಟ್ಟಿವೆ ಎನ್ನುವಂತೆ ವರ್ತಿಸುತ್ತಿವೆ. ಯಾವ ದೇಶ ವೈಚಾರಿಕತೆ ಮತ್ತು ಚಲನಶೀಲತೆಯನ್ನು ಕೊಲ್ಲುತ್ತದೋ ಆ ದೇಶ ೨-೩ ದಶಕಗಳಲ್ಲಿ ಬೌದ್ಧಿಕ ಅಂಗವಿಕಲತೆಯ ಸಂತಾನವನ್ನು ಸೃಷ್ಟಿ ಮಾಡುತ್ತದೆ. ಬೌದ್ಧಿಕ ಅಂಗವಿಕಲತೆ ದೇಶಕ್ಕೆ ಒಂದು ಶಾಪ. ವಿಜ್ಞಾನ ಮತ್ತು ವಿಚಾರದ ಬಗ್ಗೆ ಕುವೆಂಪು ಹೇಳುತ್ತಿದ್ದರು. ಅವು ಈ ದೇಶದ ಅಂಧಕಾರವನ್ನು ಓಡಿಸುವ ದೀಪಗಳು ಎಂದು ಭಾವಿಸಿದ್ದರು. ನಮ್ಮ ಶಿಕ್ಷಣ ಕ್ರಮದಲ್ಲಿ ವಿಜ್ಞಾನ ಮತ್ತು ವಿಚಾರದ ದೀಪ ಬೆಳಗಿಸುವ ಕಾರ್ಯಕ್ರಮ ಮಾಡಬೇಕು ಎಂದರು.
ಪ್ರಾಂಶುಪಾಲರ ಸಂಘದ ಖಜಾಂಚಿ ಗುರುಲಿಂಗೇಗೌಡ ಹಾಗೂ ಗಣ್ಯರು ಮೊರದಲ್ಲಿದ್ದ ರಾಗಿಯನ್ನು ಮಡಕೆಗೆ ತುಂಬುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯದ ಅಧ್ಯಾಪಕರು ಅಂದರೆ ನನಗೆ ತುಂಬಾ ಅಭಿಮಾನ. ಅವರು ತಮ್ಮ ಚಿಂತನೆ ವಿಮರ್ಶೆ ಬರಹಗಳ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರುತ್ತಾರೆ. ಕನ್ನಡ ಅತ್ಯಂತ ಶ್ರೀಮಂತ ಭಾಷೆ. ಕನ್ನಡದ ವಿಷಯದಲ್ಲಿ ನೂರರಷ್ಟು ಫಲಿತಾಂಶ ಬರುವಂತಾಗಲಿ ಆ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದರು.ರಹಮತ್ ತರೀಕೆರೆ ಅವರು ಉಪನ್ಯಾಸದ ನಂತರ ಉಪನ್ಯಾಸಕರೊಂದಿಗೆ ಚರ್ಚೆ ಸಂವಾದ ನಡೆಸಿದರು. ಉಪನ್ಯಾಸಕ ಗುರುಸ್ವಾಮಿಯವರು ಕವಯತ್ರಿ ಮಾಲತಿ ಪಟ್ಟಣಶೆಟ್ಟಿ ಅವರ ‘ನಾ ಬರಿ ಭ್ರೂಣವಲ್ಲ’ ಕವನ ಗಾಯನ ಮಾಡಿದರು.
ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಲೋಕೇಶ ಬೆಕ್ಕಳಲೆ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ ವೇದಿಕೆಯ ಗೌರವಾಧ್ಯಕ್ಷ ಎಚ್.ಎಸ್.ಚಂದ್ರಶೇಖರಯ್ಯ, ಗೌರವ ಸಲಹೆಗಾರ ಗೌರಮ್ಮ, ಕಾರ್ಯಾಧ್ಯಕ್ಷೆ ಕೆ.ಟಿ.ಪುಷ್ಪಲತಾ, ಖಜಾಂಚಿ ಸಿ.ಸೋಮಶೆಟ್ಟಿ, ಡಿ.ಎನ್.ನಾಗಾಚಾರಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್ ಇತರರಿದ್ದರುಮಧ್ಯಾಹ್ನ ಅಧಿವೇಶನದಲ್ಲಿ ‘ನೂತನ ಮಾದರಿ ಪ್ರಶ್ನೆಪತ್ರಿಕೆ ಮತ್ತು ನೀಲಿನಕ್ಷೆ ಅನ್ವಯಿಕತೆ’ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿ ಸಿ.ಬಿ.ನೀರಜಾ ವಿಶೇಷ ಉಪನ್ಯಾಸ ನೀಡಿದರು. ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಚನ್ನಕೃಷ್ಣ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ.ಕೆ.ಎಲ್ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ವೇದಿಕೆ ಉಪಾಧ್ಯಕ್ಷ ವಿನೋದ್ ಸಿಂಗ್, ಶಿವಲಿಂಗೇಗೌಡ, ಶ್ವೇತಾ, ರವೀಂದ್ರ, ವೆಂಕಟೇಗೌಡ, ಸಿದ್ದರಾಜು, ಎಂ.ಪಿ.ಸರ್ವಶ್ರೀ ಜಿಲ್ಲೆಯ ವಿವಿಧ ಕಾಲೇಜುಗಳ ಕನ್ನಡ ಉಪನ್ಯಾಸಕರು ಹಾಜರಿದ್ದರು.