ಮುಜರಾಯಿ, ಪ್ರವಾಸೋದ್ಯಮ, ಕಂದಾಯ ಮತ್ತು ಪುರಾತತ್ವ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಎಲ್ಲಾ ಇಲಾಖೆಗಳನ್ನೂ ಒಳಗೊಂಡ ಪ್ರಾಧಿಕಾರ ರಚನೆ ಅಗತ್ಯ. ಎತ್ತಿನಹೊಳೆ ನೀರಾವರಿ ಯೋಜನೆಗಾಗಿ ₹1500 ಕೋಟಿ ಅಗತ್ಯವಿದೆ, ಪ್ರಾರಂಭದಲ್ಲಿ ₹500 ಕೋಟಿ ಕೇಳಿದ್ದರೂ ಸರ್ಕಾರ ಕೇವಲ ₹50 ಕೋಟಿ ನೀಡಲು ಮುಂದಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.

ಬೇಲೂರು: ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಸಚಿವರು ಗೈರಾಗಿರುವುದಕ್ಕೆ ಶಾಸಕ ಎಚ್. ಕೆ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಹಾಗೂ ಯುನೆಸ್ಕೋ ಪಟ್ಟಿಗೆ ಸೇರಿರುವ ಬೇಲೂರು ಕ್ಷೇತ್ರವನ್ನು ಕಡೆಗಣಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಜರಾಯಿ ಸಚಿವರು ರಥೋತ್ಸವಕ್ಕೆ ಗೈರಾಗಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಸಚಿವರಿಗೆ ಸಮರ್ಪಕ ಮಾಹಿತಿ ತಲುಪದೇ ಇದ್ದರೆ ಇದಕ್ಕೆ ಜಿಲ್ಲಾಡಳಿತ ಕಾರಣ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ಜಿಲ್ಲಾಡಳಿತದ ವೈಫಲ್ಯ: ಕಳೆದ ಮೂರು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ರಥೋತ್ಸವದಲ್ಲಿ ಭಾಗವಹಿಸದಿರುವುದನ್ನು ಅವರು ಟೀಕಿಸಿದರು. ಪ್ರೋಟೋಕಾಲ್ ಪ್ರಕಾರ ಆಹ್ವಾನ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಿಂದ ರಥೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಇದರ ಯಶಸ್ಸಿಗೆ ಪತ್ರಕರ್ತರು ಹಾಗೂ ಸಾರ್ವಜನಿಕರ ಸಹಕಾರವೇ ಕಾರಣ ಎಂದು ಅವರು ಶ್ಲಾಘಿಸಿದರು.

ಹೊಯ್ಸಳೋತ್ಸವಕ್ಕೆ ನಿರ್ಲಕ್ಷ್ಯ:

ಹೊಯ್ಸಳೋತ್ಸವಕ್ಕೆ ಅನುದಾನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಇತರೆ ಉತ್ಸವಗಳಿಗೆ ಅನುದಾನ ನೀಡುವ ಸರ್ಕಾರ, ಹೊಯ್ಸಳ ಉತ್ಸವಕ್ಕೆ ನಿರ್ಲಕ್ಷ್ಯ ತೋರುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರೊಂದಿಗೆ ಸೇರಿ ಸ್ವತಃ ಹೊಯ್ಸಳೋತ್ಸವ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳಿಗೆ ಮನವಿ:

ಮುಜರಾಯಿ, ಪ್ರವಾಸೋದ್ಯಮ, ಕಂದಾಯ ಮತ್ತು ಪುರಾತತ್ವ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಎಲ್ಲಾ ಇಲಾಖೆಗಳನ್ನೂ ಒಳಗೊಂಡ ಪ್ರಾಧಿಕಾರ ರಚನೆ ಅಗತ್ಯ. ಎತ್ತಿನಹೊಳೆ ನೀರಾವರಿ ಯೋಜನೆಗಾಗಿ ₹1500 ಕೋಟಿ ಅಗತ್ಯವಿದೆ, ಪ್ರಾರಂಭದಲ್ಲಿ ₹500 ಕೋಟಿ ಕೇಳಿದ್ದರೂ ಸರ್ಕಾರ ಕೇವಲ ₹50 ಕೋಟಿ ನೀಡಲು ಮುಂದಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.

ಅಧಿವೇಶನದಲ್ಲಿ ಮಾತನಾಡುವಾಗ ಉಪಮುಖ್ಯಮಂತ್ರಿಗಳನ್ನು ‘ಭಾವಿ ಮುಖ್ಯಮಂತ್ರಿಗಳು’ ಎಂದು ಉಲ್ಲೇಖಿಸಿರುವುದಕ್ಕೆ ಸ್ಪಷ್ಟನೆ ನೀಡಿ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪಡೆಯುವ ಉದ್ದೇಶದಿಂದ ಆ ಮಾತು ಹೇಳಿದ್ದಾಗಿ ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಂಜಯ್ ಕೌರಿ, ಸಿ.ಎಚ್. ಪ್ರಕಾಶ್ ಇತರರು ಇದ್ದರು.