ಕನ್ನಡಪ್ರಭ ವಾರ್ತೆ ಹಾಸನ
ಮದ್ಯಪಾನವು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಾಮಾಜಿಕ ಬದುಕನ್ನು ಹಾಳುಮಾಡುವ ದುಶ್ಚಟವಾಗಿದ್ದು, ಅದರಿಂದ ದೂರವಿರುವ ಮೂಲಕವೇ ಸುಖ, ಶಾಂತಿ ಮತ್ತು ಗೌರವಯುತ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ವಿವಿಧ ಗಣ್ಯರು ಅಭಿಪ್ರಾಯಪಟ್ಟರು.ನಗರದ ಎಂ.ಜಿ. ರಸ್ತೆಯ ಸಮೀಪದ ಕುರುಹಿನ ಶೆಟ್ಟಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೇಂದ್ರ, ಲೈಲ್, ಉಜಿರೆ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ೨೦೯೨ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ ಹೊನ್ನವಳ್ಳಿ ಸತೀಶ್, ಮದ್ಯಪಾನ ಕಡಿಮೆಯಾದರೂ ಹೆಚ್ಚು ಆದರೂ ಅದು ವ್ಯಕ್ತಿಯ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಮದ್ಯದ ಚಟದಿಂದ ವ್ಯಕ್ತಿಯ ಆರೋಗ್ಯ ಮಾತ್ರವಲ್ಲ, ಕುಟುಂಬದ ವಿಶ್ವಾಸ, ಸಾಮಾಜಿಕ ಗೌರವ ಹಾಗೂ ಸಂಬಂಧಗಳೂ ಹಾಳಾಗುತ್ತವೆ. ಹಣವಿದ್ದಾಗ ಅನೇಕರು ಸ್ನೇಹಿತರಾಗಿರುತ್ತಾರೆ. ಆದರೆ ಸಂಕಷ್ಟದ ಸಂದರ್ಭದಲ್ಲಿ ನಿಜವಾದ ಬೆಂಬಲ ಕುಟುಂಬದಿಂದ ಮಾತ್ರ ದೊರೆಯುತ್ತದೆ. ಆದ್ದರಿಂದ ಜೀವನವನ್ನು ಹಾಳುಮಾಡುವ ದುಶ್ಚಟಗಳಿಂದ ಹೊರಬಂದು ಕುಟುಂಬದೊಂದಿಗೆ ನೆಮ್ಮದಿಯ ಬದುಕು ನಡೆಸುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು. ಧರ್ಮಸ್ಥಳದಲ್ಲಿ ನಡೆಯುವ ಮದ್ಯವರ್ಜನ ಶಿಬಿರಗಳು ಕೇವಲ ಚಿಕಿತ್ಸೆ ನೀಡುವ ಕೇಂದ್ರಗಳಲ್ಲ. ವ್ಯಕ್ತಿಯ ಬದುಕಿಗೆ ಹೊಸ ದಿಕ್ಕು ತೋರಿಸುವ ಪುನರ್ಜನ್ಮದ ವೇದಿಕೆಗಳಾಗಿವೆ. ಇಲ್ಲಿ ಯಾವುದೇ ಬಲವಂತ ಅಥವಾ ಹಿಂಸಾತ್ಮಕ ವಿಧಾನಗಳಿಲ್ಲದೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನದ ಮೂಲಕ ಶಿಬಿರಾರ್ಥಿಗಳಿಗೆ ಹೊಸ ಬದುಕಿನ ದಾರಿ ತೋರಿಸಲಾಗುತ್ತದೆ ಎಂದು ಹೇಳಿದರು. .
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ. ಯೋಗೇಶ್ ಮಾತನಾಡಿ, ೧೯೯೩ರಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಯಾರಂಭ ಮಾಡಿತು. ಆರಂಭದಿಂದಲೇ ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಮದ್ಯಪಾನ ನಿಯಂತ್ರಣಕ್ಕೆ ಒತ್ತಾಯಿಸಲಾಗಿತ್ತು. ೧೯೯೬,೯೮ರ ಅವಧಿಯಲ್ಲಿ ರಾಜ್ಯಾದ್ಯಂತ ಮದ್ಯನಿಷೇಧ ಜಾರಿಗೆ ತರಬೇಕೆಂದು ವ್ಯಾಪಕ ಹೋರಾಟ ನಡೆಸಲಾಗಿತ್ತು ಎಂದರು. ಧರ್ಮಸ್ಥಳದ ಮದ್ಯವರ್ಜನ ಶಿಬಿರಗಳು ಸಾವಿರಾರು ಕುಟುಂಬಗಳಲ್ಲಿ ಹೊಸ ಆಶಾಕಿರಣ ಮೂಡಿಸಿವೆ. ಇದುವರೆಗೆ ಸುಮಾರು ೧ ಲಕ್ಷ ೩೫ ಸಾವಿರಕ್ಕೂ ಹೆಚ್ಚು ಮಂದಿ ವ್ಯಸನದಿಂದ ಮುಕ್ತರಾಗಿ ತಮ್ಮ ಕುಟುಂಬದೊಂದಿಗೆ ಗೌರವಯುತ ಬದುಕು ಸಾಗಿಸುತ್ತಿದ್ದಾರೆ. ಶಿಬಿರದಲ್ಲಿ ಪಾಲ್ಗೊಂಡ ಅನೇಕರು ಮದ್ಯಪಾನದಿಂದ ಅನುಭವಿಸಿದ ಕಷ್ಟಗಳು ಹಾಗೂ ಶಿಬಿರದ ಬಳಿಕ ಬದುಕಿನಲ್ಲಿ ಕಂಡ ಬದಲಾವಣೆಗಳನ್ನು ಹಂಚಿಕೊಂಡಿರುವುದು ಈ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ವ್ಯಸನಮುಕ್ತ ಸಮಾಜ ನಿರ್ಮಾಣದ ಜೊತೆಗೆ ಆರೋಗ್ಯವಂತ ಕುಟುಂಬ ಮತ್ತು ಉತ್ತಮ ಸಾಮಾಜಿಕ ವಾತಾವರಣ ರೂಪಿಸುವಲ್ಲಿ ಧರ್ಮಸ್ಥಳದ ಈ ಅಭಿಯಾನ ಮಹತ್ವದ ಪಾತ್ರ ವಹಿಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಇಂತಹ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದರು.ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಎಂಟು ದಿನಗಳ ಕಾಲ ಶಿಬಿರದ ಪ್ರಯೋಜನ ಪಡೆದುಕೊಂಡ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಕುರುಹಿನ ಶೆಟ್ಟಿ ಸಭಾಭವನದ ಅಧ್ಯಕ್ಷ ಕೆ.ಸಿ. ಕೃಷ್ಣಶೆಟ್ಟಿ, ಹಾಸನಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ. ಮೋಹನ್ ಕುಮಾರ್, ವಲಯಾಧ್ಯಕ್ಷ ತಿಮ್ಮರಾಯ ಶೆಟ್ಟಿ, ಖಜಾಂಚಿ ಎಲ್.ಎಸ್. ಧರಣಿ, ಮಾಜಿ ರೀಜನ್ ಪರ್ಸನ್ ಕೇಶವಮೂರ್ತಿ, ರೋಟರಿ ಸನ್‌ರೈಸ್ ಕ್ಲಬ್ ಅಧ್ಯಕ್ಷ ಕೆ.ಎಸ್. ಯೋಗೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಸಿ.ಎಸ್. ವಿಜಯ್, ಜೀವನ್ ಗೌಡ, ನಗರ ಬ್ರಾಹ್ಮಣ ಸಭೆಯ ಅಧ್ಯಕ್ಷ ವೆಂಕಟೇಶ್, ಜನನಿ ಫೌಂಡೇಶನ್ ಸಂಸ್ಥಾಪಕಿ ಭಾನುಮತಿ, ದಯಾನಂದ ಶೆಟ್ಟಿ, ಕ್ಷೇತ್ರ ಯೋಜನಾಧಿಕಾರಿ ಧನಂಜಯ್, ಕಂಚಮಾರನಹಳ್ಳಿ ಶ್ರೀರಂಗನಾಥ ಪ್ರೌಢಶಾಲೆಯ ಮುಖ್ಯಸ್ಥ ಲಕ್ಷ್ಮೀಕಾಂತ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಶಿಬಿರದ ಗೌರವಾಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.