ಸಾರಾಂಶ
ದಾವಣಗೆರೆ: ಪ್ರಜಾಪ್ರಭುತ್ವದಲ್ಲಿ ವಿಚಾರವಂತರು, ವಿದ್ಯಾವಂತರು ಹೆಚ್ಚಾಗಬೇಕು. ಸಾಕ್ಷರತಾ ಮತದಾರರು ಮತದಾನವನ್ನು ಪ್ರಬುದ್ಧತೆಯಿಂದ ಚಲಾಯಿಸಲಿದ್ದು, ಇವರೇ ಮತದಾನ ಪ್ರಕ್ರಿಯೆಯಿಂದ ದೂರ ಉಳಿದರೆ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಕಷ್ಟವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.ನಗರದ ಪೊಲೀಸ್ ವಸತಿ ಗೃಹ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಚುನಾವಣೆಗಳಲ್ಲಿ ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಮತದಾನ ಹೆಚ್ಚಾಗುತ್ತಿದ್ದು, ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ನಗರದ ಎರಡು ಕ್ಷೇತ್ರದಲ್ಲಿ ಶೇ.65ರಷ್ಟು ಮತದಾನ ಆಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ಶೇ.75ಕ್ಕಿಂತ ಹೆಚ್ಚು ಮತದಾನ ಆಗಿದೆ ಎಂದು ಹೇಳಿದರು.ದಾವಣಗೆರೆ ಉತ್ತರ ವ್ಯಾಪ್ತಿಯಲ್ಲಿ ಒಟ್ಟು 21 ಮತಗಟ್ಟೆಗಳಲ್ಲಿ ಶೇ.55ಕ್ಕಿಂತ ಕಡಿಮೆ ಮತದಾನವಾಗಿದೆ. ಆದ್ದರಿಂದ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ಸಖಿ ಮಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಮಹಿಳೆರಿಂದಲೇ ಅದರ ಸಂಪೂರ್ಣ ನಿರ್ವಹಣೆ ಮಾಡಲಾಗುತ್ತದೆ. 7 ಬೂತ್‌ಗಳಲ್ಲಿ ವಿಕಲಚೇತರು ಪೂರ್ಣ ಪ್ರಮಾಣದಲ್ಲಿ ನಿರ್ವಹಣೆ ಮಾಡುವರು ಎಂದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಎರಡು ರೀತಿಯಲ್ಲಿ ಮತದಾನ ಮಾಡಲು ಅವಕಾಶ ಇರುತ್ತದೆ. ಒಂದು ಜಿಲ್ಲೆಯಲ್ಲೇ ಕರ್ತವ್ಯ ನಿರತ ಪೊಲೀಸರು, ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲೇ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ತೋರಿಸಿ ಮತದಾನ ಮಾಡಬಹುದು. ಜಿಲ್ಲೆಯ ಹೊರಗಡೆ ಮತ ಇದ್ದರೆ, ಅದರ ಮಾಹಿತಿಯನ್ನು ಪೋಸ್ಟಲ್ ತರಿಸಿ, ಜಿಲ್ಲೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗುವುದು. ಒಟ್ಟಾರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನ ಮಾಡಲು ಎಲ್ಲರೂ ಭಾಗವಹಿಸಬೇಕು. ಎಲ್ಲಾ ಪೊಲೀಸ್ ಸಿಬ್ಬಂದಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಿಕೊಂಡು ಮೇ 7ರಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು.ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯಲ್ಲಿನ ಮತಗಟ್ಟೆಗಳಲ್ಲಿ ನೀರು, ಶೌಚಾಲಯ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶಾಮಿಯಾನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ದಾವಣಗೆರೆ ನಗರದಲ್ಲಿ ಎರಡು ಮತ ಕ್ಷೇತ್ರಗಳಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ 42 ಮತಗಟ್ಟೆಗಳಲ್ಲಿ ಶೇ. 55ಕ್ಕಿಂತ ಕಡಿಮೆ ಮತದಾನವಾಗಿದ್ದು, ಅದರಲ್ಲಿ ವಿದ್ಯಾನಗರ, ಕೆಟಿಜೆ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಡಿಮೆ ಮತದಾನವಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಪಾಲಿಕೆ ಆಯುಕ್ತರಾದ ರೇಣುಕಾ, ಬಿಸಿಎಂ ಅಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.