ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿಯವರ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ತಾಲೂಕಿನ ಜೋಡಿಗುಬ್ಬಿಯ ಇಟ್ಟಿಗೆ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಜೀತದಾಳುಗಳಾಗಿ ದುಡಿಯುತ್ತಿದ್ದ ಅಂತಾರಾಜ್ಯದ ೪ ಜನರನ್ನು ರಕ್ಷಣೆ ಮಾಡಿದ್ದಾರೆ.ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿಯವರು ಜುಲೈ ೨ ಮಂಗಳವಾರ ಹಳ್ಳಿಮೈಸೂರು ಪೊಲೀಸ್ ಠಾಣೆಗೆ ಹಾಜರಾಗಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ತಾ. ಹಳ್ಳಿಮೈಸೂರು ಹೋಬಳಿಯ ಜೋಡಿಗುಬ್ಬಿ ಗ್ರಾಮದಲ್ಲಿರುವ ಎಸ್.ಎಂ ಇಟ್ಟಿಗೆ ಕಾರ್ಖಾನೆಯಲ್ಲಿ ಜೀತ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಟ್ವಿಟರ್ ಸಂದೇಶ ಬಂದಿದ್ದು, ಸ್ಥಳ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದರು.
ತಹಸೀಲ್ದಾರ್ ಅವರ ಸೂಚನೆ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜೋಡಿಗುಬ್ಬಿ ಗ್ರಾಮದ ಸರ್ವೇ ನಂಬರ್ ೧೦೦ ರ ೧.೦೬ ಎಕರೆ ಜಮೀನಿನಲ್ಲಿ ಸುಬ್ಬೇಗೌಡ ಎಂಬುವರ ಪುತ್ರ ಸತೀಶ್ ಎಂಬುವರು ಎಸ್.ಎಂ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಒಡಿಶಾ ರಾಜ್ಯದ ಬಲಂಗಿರ್ ಜಿಲ್ಲೆ, ಪೊನ್ನಾಗೋಡ್ ತಾಲೂಕು ಕೋಪ್ರಾಕೋಲ್ ಗ್ರಾಮದ ಮೊಕರ್ದಾಜ್ ಪುಟೇಲ್ ಬಿನ್ ಜನಕ ಪುಟೇಲ್, ಸುಮಾರು ೩೫ ವರ್ಷ, ಉರ್ಮೀಳಾ ಪುಟೇಲ್ ಕೊಂ ಪೋಕರ್ದಾಜ್ ಪುಟೇಲ್, ಅಂದಾಜು ೨೭ ವರ್ಷ, ವರ್ಷಿತಾ ಪುಟೇಲ್, ಸುಮಾರು ೧೧ ವರ್ಷ ಹಾಗೂ ರಾಜು ಪುಟೇಲ್, ೫ ವರ್ಷ ಇವರನ್ನು ಕರೆದುಕೊಂಡು ಬಂದಿದ್ದರು.ಕಳೆದ ೩ ವರ್ಷಗಳಿಂದ ಎಸ್.ಎಂ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಇರಿಸಿಕೊಂಡಿದ್ದು, ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಗೆಯವರೆಗೆ ಕೆಲಸಕ್ಕೆಂದು ೩ ವರ್ಷದ ಹಿಂದೆ ೧೭ ಸಾವಿರ ರು. ಹಣವನ್ನು ಪಡೆದಿದ್ದು, ದಿನಕ್ಕೆ ಸಾವಿರ ಇಟ್ಟಿಗೆ ಮಾಡಿದರೆ ೮೦೦ ರು. ನೀಡುವುದಾಗಿ ಕರೆದುಕೊಂಡು ಬಂದಿದ್ದಾರೆ. ಇಟ್ಟಿಗೆ ಕೆಲಸ ನಿರ್ವಹಿಸಿದ ಬಾಬ್ತು ಹಣವನ್ನು ನೀಡದೇ, ಒಂದು ವಾರದಲ್ಲಿ ಒಂದು ದಿನವು ವಿಶ್ರಾಂತಿ ಇಲ್ಲದೇ ೭ ದಿನವೂ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಹೊರಗಡೆ ಮುಕ್ತವಾಗಿ ತಿರುಗಲು ಅವಕಾಶ ಕೊಡದೇ ಸ್ವಂತ ಗ್ರಾಮಕ್ಕೆ ತೆರಳಲು ೩ ವರ್ಷದಿಂದ ಒಮ್ಮೆಯು ಅವಕಾಶವನ್ನು ನೀಡದೇ ಇದ್ದುದರಿಂದ ಜೀತದಾಳುಗಳಾಗಿ ದುಡಿಸಿಕೊಂಡಿದ್ದರಿಂದ ಎಸ್.ಎಂ ಇಟ್ಟಿಗೆ ಕಾರ್ಖಾನೆ ಮಾಲೀಕ ಸತೀಶ್‌ರವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.