ಸಾರಾಂಶ
ಕೊಳ್ಳೇಗಾಲ ತಾಲೂಕು ಕಚೇರಿ ಬಳಿ ದಲಿತ ಸಂಘಟನೆ ನಡೆಸಿದ ಧರಣಿ ಸ್ಥಳಕ್ಕೆ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಡೀಸಿ ಶಿಲ್ಪಾನಾಗ್ ಭೇಟಿ ನೀಡಿ ಅಹವಾಲು ಆಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಇಲ್ಲಿನ ತಹಸೀಲ್ದಾರ್ ಬಸವರಾಜು, ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಅವರು ಸರಗೂರು ಗ್ರಾಮದ ಆದಿ ಕರ್ನಾಟಕದ ಜನರ ಮೇಲೆ ದರ್ಪ ತೋರಿದ್ದಾರೆ, ಅಗೌರದ ರೀತಿ ನಡೆದುಕೊಂಡಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದಲ್ಲಿ ವಿವಿಧ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವ ತನಕ ಪ್ರತಿಭಟನೆ ಬಿಡಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.ಭೀಮನಗರ ಸಾವಿತ್ರಿ ಬಾಯಿಫುಲೆ ರಂಗಮಂದಿರದ ಬಳಿ ಜಮಾವಣೆಗೊಂಡ ಸರಗೂರು ಗ್ರಾಮದ ಆದಿ ಕರ್ನಾಟಕ ಜನಾಂಗ ಯಜಮಾನರು, ಮುಖಂಡರು, ಆದಿಕರ್ನಾಟಕ ಸಮುದಾಯದ ಕಸಬಾ ಮನೆ, ಗಡಿಮನೆ ಹಾಗೂ ಕಟ್ಟೆಮನೆ, ದಲಿತ ಸಂಘಟನೆಗಳು, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳು, ಛಲವಾದಿ ಮಹಾಸಭಾ ಪದಾಧಿಕಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್, ಪಿಎಸ್ಸೈ ವಿರುದ್ಧ ಧಿಕ್ಕಾರ ಕೂಗಿ, ಬಳಿಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.ಸರಗೂರು ಗ್ರಾಮದ ಮುಖಂಡ ಶಿವಶಂಕರ್ ಮಾತನಾಡಿ, ಸರಗೂರಿನ ಕಾವೇರಿ ತೀರದಲ್ಲಿರುವ ಸ.ನಂ ೨೧೫/ಬಿ ನಲ್ಲಿರುವ ಸರ್ಕಾರಕ್ಕೆ ಸೇರಿದ ಜಾಗವನ್ನು ಕೃಷ್ಣಪ್ಪ ಎಂಬಾತ ಒತ್ತುವರಿ ಮಾಡಿಕೊಂಡಿದ್ದು, ಈ ಸ್ಥಳವನ್ನು ಸ್ನಾನಘಟ್ಟ ಎಂದು ಕರೆಯಲಾಗುತ್ತದೆ. ಇಲ್ಲಿ ಆದಿ ಕರ್ನಾಟಕ ಜನಾಂಗ ಮಡೆ ಹಬ್ಬ, ಪೂಜಾ ಕೈಂಕರ್ಯಗಳನ್ನು ಮಾಡುವ ವಾಡಿಕೆ ಬೆಳೆದುಬಂದಿದೆ. ಆದರೆ, ಈ ಜಾಗ ಒತ್ತುವರಿ ಆಗಿರುವ ಸಂಬಂಧ ಈಗಾಗಲೇ ಜನಾಂಗದವರು ನ್ಯಾಯಾಂಗ ಹೋರಾಟ ನಡೆಸಿದ್ದೇವೆ. ಈ ಮೂಲಕ ಸರ್ಕಾರಿ ಜಾಗವನ್ನು ನಾವು ಉಳಿಸಿದ್ದೇವೆ. ಈ ಜಾಗವನ್ನು ಕಾಪಾಡಿಕೊಳ್ಳಲು ಗ್ರಾಮಸ್ಥರು ಇತ್ತೀಚೆಗೆ ತೆಗೆಸಿದ್ದ ಟ್ರಂಚ್ ಅನ್ನು ತಹಸೀಲ್ದಾರ್ ಐ.ಇ ಬಸವರಾಜು ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಸುಪ್ರೀತ್ ಮುಚ್ಚಿಸಿ ಗ್ರಾಮಸ್ಥರ ಮೇಲೆ ದೌರ್ಜನ್ಯ ಎಸಗಿ ನಿಂದಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಗ್ರಾಮಸ್ಥರ ಮೇಲೆ ದರ್ಪ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದ ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಮಹೇಶ್ ಪ್ರತಿಭಟನಾನಿರತರ ಬಳಿ ಆಗಮಿಸಿ ಮನವಿ ಸ್ವೀಕರಿಸಲು ಮುಂದಾದರು. ಆದರೆ, ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ರಾತ್ರಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಆಗಮಿಸಿದರು. ಆದರೆ, ಡೀಸಿ, ಎಸ್ಪಿ ಬರಲೇಬೇಕೆಂದು ಹೋರಾಟಗಾರರು ಪಟ್ಟು ಹಿಡಿದು ಧರಣಿ ನಡೆಸಿದ ಫಲ, ಜಿಲ್ಲಾಧಿಕಾರಿ ಶಿಲ್ಪನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ.ಕವಿತಾ ಆಗಮಿಸಿ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಹಿಂಪಡೆಯಲಾಯಿತು. ಇದಕ್ಕೂ ಮುನ್ನ ಪ್ರತಿಭಟನಾಕಾರರು ಇಬ್ಬರು ಅಧಿಕಾರಿಗಳ ಮೇಲೆ ಜಾತಿ ನಿಂದನೆ ದಾಖಲಿಸಬೇಕು, ತಕ್ಷಣ ಅಮಾನತುಗೊಳಿಸಿ ಎಂದು ಆಗ್ರಹಿಸಿದರು.ಈ ವೇಳೆ ಸರಗೂರು ಗ್ರಾಮದ ಯಜಮಾನ ಶಿವಶಂಕರ್, ಮಲ್ಲು, ಮಲ್ಲ, ಶಿವಕುಮಾರ್, ಪುಟ್ಟಸ್ವಾಮಿ, ಪುಟ್ಟಮಾದ, ಮಹೇಶ್, ರಂಗಸ್ವಾಮಿ, ಕೊಳ್ಳೇಗಾಲ ಭೀಮನಗರ ಯಜಮಾನ ಚಿಕ್ಕಮಾಳಿಗೆ, ಸಿದ್ದಾರ್ಥ, ರಾಜಶೇಖರ್, ಪಾಪಣ್ಣ, ಲಿಂಗರಾಜು,ಸನತ್ ಕುಮಾರ್, ನಟರಾಜು, ಮುಳ್ಳೂರು ಶಿವಮಲ್ಲು, ಪಾಳ್ಯ ಪರಮೇಶ್, ದೊಡ್ಡಿಂದುವಾಡಿ ಸಿದ್ದರಾಜು, ಬಸವರಾಜು, ಪ್ರಕಾಶ್, ಸಿದ್ದಯ್ಯನಪುರ ಗ್ರಾ.ಪಂ ಸದಸ್ಯರು ಮುರುಳಿಧರನ್, ಛಲವಾದಿ ಮಹಾಸಭೆ ರಾಜ್ಯ ಉಪಾಧ್ಯಕ್ಷ ಬಸವರಾಜು ಇನ್ನಿತರರಿದ್ದರು.ಈಗಾಗಲೇ ತಹಸೀಲ್ದಾರ್ ರಜೆ ಮೇಲೆ ತೆರಳಿದ್ದಾರೆ. ರಜೆ ಮುಗಿದ ಬಳಿಕ ಈ ಪ್ರಕರಣದ ಕುರಿತು ಮಾಹಿತಿ ಪಡೆದು ಕ್ರಮವಹಿಸಲಾಗುವುದು. ಅದೇ ರೀತಿ ಪಿಎಸ್ಸೈ ಸುಪ್ರೀತ್ ವಿರುದ್ಧವೂ ವಿಚಾರಣೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲು ಆಗದು, ಹಾಗಾಗಿ ಅಧಿಕಾರಿಗಳು ನಿಂದಿಸಿದ್ದು, ತಪ್ಪಾಗಿ ಮಾತನಾಡಿದ್ದು ಆಡಿಯೋ, ವಿಡಿಯೋ ಇದ್ದರೆ ನೀಡಿ, ಇದನ್ನ ಗಂಭೀರವಾಗಿ ಪರಿಗಣಿಸಲಾಗುವುದು.-ಶಿಲ್ವಾನಾಗ್, ಜಿಲ್ಲಾಧಿಕಾರಿ. ಚಾ.ನಗರ