ಎಬಿವಿಬಿ ವೀರರಾಣಿ ಅಬ್ಬಕ್ಕ ರಥಯಾತ್ರೆ ಮಂಗಳೂರಿನಲ್ಲಿ ಸಮಾರೋಪ

| Published : Sep 18 2025, 01:11 AM IST

ಎಬಿವಿಬಿ ವೀರರಾಣಿ ಅಬ್ಬಕ್ಕ ರಥಯಾತ್ರೆ ಮಂಗಳೂರಿನಲ್ಲಿ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ರಾಜ್ಯಾದ್ಯಂತ ಸಂಚರಿಸಿದ ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಸಮಾರಂಭ ಮಂಗಳೂರು ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಮಂಗಳವಾರ ನೆರವೇರಿತು.

ಮಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಉಳ್ಳಾಲದ ವೀರರಾಣಿ ಅಬ್ಬಕ್ಕಳ ತ್ಯಾಗ, ಬಲಿದಾನ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಬ್ಬಕ್ಕ ರಾಣಿಯ ಆಡಳಿತ, ಸಾಮಾಜಿಕ, ಧಾರ್ಮಿಕ ವಿಚಾರಗಳು ಇಂದಿನ ಯುವಪೀಳಿಗೆಯಲ್ಲಿ ಚಾರಿತ್ರ್ಯನಿರ್ಮಾಣಕ್ಕೆ ಪ್ರೇರಣೆಯಾಗಬೇಕು ಎಂದು ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ಸಿದ್ದು ಪಿ. ಅಲಗೂರ್‌ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ರಾಜ್ಯಾದ್ಯಂತ ಸಂಚರಿಸಿದ ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಮಾತನಾಡಿದರು.

ಬಂಟ್ವಾಳ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ. ತುಕಾರಾಮ್‌ ಪೂಜಾರಿ ಮುಖ್ಯ ಭಾಷಣದಲ್ಲಿ, ಅರ್ಪಣಾ ಮನೋಭಾವದಿಂದ ದೇಶಕ್ಕೆ ಹೇಗೆ ಸೇವೆ ಸಲ್ಲಿಸಬಹುದು ಎಂಬುದಕ್ಕೆ ವೀರರಾಣಿ ಅಬ್ಬಕ್ಕ ಉದಾಹರಣೆಯಾಗಿದ್ದಾರೆ. , ಮೋಸ, ವಂಚನೆಗೆ ಇನ್ನೊಂದು ಹೆಸರಾದ ಪೋರ್ಚುಗೀಸರ ವಿರುದ್ಧ ಉಳ್ಳಾದಂತಹ ಸಣ್ಣ ಪ್ರಾಂತ್ಯದ ರಾಣಿ ಅಬ್ಬಕ್ಕಳ ಹೋರಾಟ ಅತ್ಯಂತ ಮಹತ್ವದ ಸಂಗತಿ ಎಂದರು.ಮೂಡುಬಿದಿರೆಯ ರಾಣಿ ಅಬ್ಬಕ್ಕ ಮನೆತನ ವಂಶಸ್ಥ ಕುಲದೀಪ್‌ ಚೌಟ, ಬೆಳ್ತಂಗಡಿ ಎಕ್ಸೆಲ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಮಂತ್‌ ಕುಮಾರ್‌ ಜೈನ್‌ ಮಾತನಾಡಿ, ರಥಯಾತ್ರೆಯ ಮೂಲಕ ರಾಜ್ಯಾದ್ಯಂತ ರಾಣಿ ಅಬ್ಬಕ್ಕಳ ಪರಿಚಯ ಆಗಿದೆ. ಇದಕ್ಕಾಗಿ ಶ್ರಮಿಸಿದ ಅಭಾವಿಪ ಶ್ರಮ ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಅಭಾವಿಪ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ.ರಿವ ಮಂಡ್ಯ ಮಾತನಾಡಿ, ಅಬ್ಬಕ್ಕ ​ಹೆಸರಿನಲ್ಲಿ ಎರಡು ರಥಯಾತ್ರೆ ರಾಜ್ಯಾದ್ಯಂತ ಯಶಸ್ವಿಯಾಗಿ ಸಂಚರಿಸಿದೆ. ಜಾತಿ, ಪಕ್ಷಬೇಧ ಮರೆತು ಇಡೀ ಸಮಾಜ ಒಟ್ಟಾಗಿ ಈ ರಥಯಾತ್ರೆಗೆ ಬೆಂಬಲ ನೀಡಿದೆ ಎಂದರು.ಅಭಯರಾಣಿ- ವೀರರಾಣಿ ಅಬ್ಬಕ್ಕ ಪುಸ್ತಕವನ್ನು ಈ ವೇಳೆ ಲೋಕಾರ್ಪಣೆಗೊಳಿಸಲಾಯಿತು. ಪುಸ್ತಕದ ಸಂಪಾದಕ ಯೋಗೀಶ್‌ ಕೈರೋಡಿ ಅವರನ್ನು ಗೌರವಿಸಲಾಯಿತು.

ರಥಯಾತ್ರೆಯ ಸಂಚಾಲಕರಾದ ಗುರುಪ್ರಸಾದ್‌, ಯಶವಂತ್‌ ನಟರಾಜ್‌ ಇದ್ದರು. ಅಭಾವಿಪ ಮಂಗಳೂರು ವಿಭಾಗ ಪ್ರಮುಖ್‌ ಕೇಶವ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್‌ ಸ್ವಾಗತಿಸಿದರು. ಮಂಗಳೂರು ಮಹಾನಗರ ಕಾರ್ಯದರ್ಶಿ ಶ್ರೀಲಕ್ಷ್ಮಿ ವಂದಿಸಿದರು. ಪ್ರಾಂತ ವಿದ್ಯಾರ್ಥಿನಿ ಪ್ರಮುಖ್‌ ಸುಧಾ ಶೆಣೈ ನಿರೂಪಿಸಿದರು.ರಾಣಿ ಅಬ್ಬಕ್ಕ ರಥಯಾತ್ರೆಯ ಸಮಾರೋಪ ಅಂಗವಾಗಿ ಮಂಗಳೂರಿನ ಬಂಟ್ಸ್‌ ಹಾಸ್ಟೆಲ್‌ ಕ್ರೀಡಾಂಗಣದಿಂದ ಪುರಭವನದವರೆಗೆ ಬೃಹತ್‌ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆ ಉದ್ಘಾಟನೆ ಸಂದರ್ಭ ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌, ಪ್ರಮುಖರಾದ ಚ.ನ. ಶಂಕರರಾವ್‌, ಡಾ. ಆಶಾಜ್ಯೋತಿ ರೈ, ವಾಸುದೇವ ಕಾಮತ್‌ ಮತ್ತಿತರರಿದ್ದರು.