ಎಬಿವಿಪಿಯಿಂದ ನೇಹಾ ಹೀರೆಮಠ ಕೊಲೆ ಖಂಡಿಸಿ ಪಂಜಿನ ಮೆರವಣಿಗೆ

| Published : Apr 21 2024, 02:29 AM IST

ಸಾರಾಂಶ

ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು, ಇಂತಹ ಕಡೆಗಳಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆ ಮಾಡಿರುವ ಘಟನೆ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ ಎಂದು ರಾಜ್ಯ ಸಹ ಕಾರ್ಯದರ್ಶಿ ಹರ್ಶಿತ್ ಕೊಯ್ಲ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ಘಟಕ ವತಿಯಿಂದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಖಂಡಿಸಿ ಕಾರ್ಕಳದ ಸರ್ವಜ್ಞ ವೃತ್ತದಿಂದ ಬಂಡೀಮಠದವರೆಗೆ ಪಂಜಿನ ಮೆರವಣಿಗೆ ನಡೆಸಿ ಆರೋಪಿಯ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಲಾಯಿತು.

ರಾಜ್ಯ ಸಹ ಕಾರ್ಯದರ್ಶಿ ಹರ್ಶಿತ್ ಕೊಯ್ಲ ಮಾತನಾಡಿ, ಶಾಲಾ ಕಾಲೇಜುಗಳು ಜ್ಞಾನದ ದೇಗುಲಗಳು, ಇಂತಹ ಕಡೆಗಳಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರ ಹತ್ಯೆ ಮಾಡಿರುವ ಘಟನೆ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ ಎಂದರು.

ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ಆಕೆಯನ್ನು ಜಿಹಾದಿ ಮನಸ್ಥಿತಿಯ ಫಯಾಜ್ ಲವ್ ಜಿಹಾದಿಗಾಗಿ ಪೀಡಿಸುತ್ತಿದ್ದ. ಆಕೆ ನಿರಾಕರಿಸಿದಕ್ಕಾಗಿ ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗಾರನಿಗೆ ಕಾನೂನಿನ ಯಾವುದೇ ಭಯವೂ ಇಲ್ಲದೆ ರಾಜಾರೋಷವಾಗಿ ಕ್ರತ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಕುಸಿದು ಹೋಗಿದೆ ಎನ್ನುವುದು ಸ್ಪಷ್ಟವಾಗಿದೆ. ಪೊಲೀಸರು ಕೂಡಲೇ ಸೂಕ್ತ ತನಿಖೆಯನ್ನು ಕೈಗೊಂಡು, ಅಪರಾಧಿಗೆ ಉಗ್ರ ಶಿಕ್ಷೆ ಆಗುವ ಹಾಗೆ ಮಾಡಿ ವಿದ್ಯಾರ್ಥಿನಿಯ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ ಪಣಿಯಾಡಿ, ತಾಲೂಕು ಸಂಚಾಲಕರಾದ ಶ್ರೇಯಸ್ ಅಂಚನ್, ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ-ಸಂಚಾಲಕರಾದ ಶ್ರೀವತ್ಸ ಮತ್ತು ಪ್ರಮುಖರಾದ ಅಜಿತ್ ಜೋಗಿ, ಪವನ್, ಸ್ವಸ್ತಿಕ್, ಕಾರ್ತಿಕ್, ಮನೋಜ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು.