ಎಬಿವಿಪಿ ಡ್ರಗ್ಸ್ ಮುಕ್ತ ಸಮಾಜ ಜಾಗೃತಿ ಕಾರ್ಯಕ್ರಮ

| Published : Nov 02 2025, 04:00 AM IST

ಸಾರಾಂಶ

ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಡ್ರಗ್ಸ್‌ ಮುಕ್ತ ಸಮಾಜ ಕುರಿತು ಮಾನವ ಸರಪಳಿ ನಿರ್ಮಿಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶನಿವಾರಸಂತೆ ಘಟಕ ಇದರ ವತಿಯಿಂದ ಡ್ರಗ್ಸ್ ಮುಕ್ತ ಸಮಾಜ ಕುರಿತು ಪಟ್ಟಣದ ಮುಖ್ಯರಸ್ತೆ, ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿ ಪರಿಷತ್ ಪ್ರಮುಖರು ಮತ್ತು ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು. ನಂತರ ಪಟ್ಟಣದ ಕೆಆರ್‍ಸಿ ವೃತ್ತದಲ್ಲಿ ಡ್ರಗ್ಸ್ ಮುಕ್ತ ಸಮಾಜ ಕುರಿತು ಮಾನವ ಸರಪಳಿ ನಿರ್ಮಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ದಿನದ ಮಹತ್ವ ಕುರಿತು ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಮಾತನಾಡಿ, ಇಂದು ವಿದ್ಯಾರ್ಥಿಗಳು, ಯುವಕರು ಡ್ರಗ್ಸ್‌ ಗಳಂತಹ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ಆರೋಗ್ಯ ಮತ್ತು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಅಮುಲು ಸೇವನೆಯಿಂದ ಸಮಾಜದಲ್ಲಿ ತನ್ನ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವಮಾನಗೊಂಡು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿರುವ ಪ್ರಕರಣವು ಹೆಚ್ಚಾಗುತ್ತಿದೆ ಎಂದ ಅವರು ಮಾದಕ ವಸ್ತುಗಳ ಸೇವನೆ ಮತ್ತು ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಯುವಕರು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಮಾಜದಲ್ಲಿ ಜನರಿಗೆ ಜಾಗೃತಿ ಮೂಡಿಸಬೇಕು. ಜನ ಜಾಗೃತಿಯಿಂದ ಡ್ರಗ್ಸ್ ಮುಕ್ತ ಸಮಾಜ ಮತ್ತು ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಂತರ ಪಟ್ಟಣದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಎಬಿವಿಪಿ ಪರಿಷತ್ ಕಾರ್ಯಕರ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮುಕ್ತ ಸಮಾಜ ಕುರಿತಾಗಿ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು. ಜನ ಜಾಗೃತಿ ಕಾರ್ಯಕ್ರಮದಲ್ಲಿ ಎಬಿವಿಪಿ ಪರಿಷತ್ ಘಟಕದ ಕಾರ್ಯಕರ್ತರು ಪಾಲ್ಗೊಂಡಿದ್ದರು.