ಬಳ್ಳಾರಿ: ವಂದೇ ಮಾತರಂ ಗೀತೆಗೆ 150 ವರ್ಷಗಳಾದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದಲ್ಲಿ 450 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಂಡಿತ್ತು.
ಇಲ್ಲಿನ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಶುರುಗೊಂಡ ತಿರಂಗಾ ಯಾತ್ರೆಯು ಬೆಂಗಳೂರು ರಸ್ತೆ ಮಾರ್ಗವಾಗಿ ರಾಯಲ್ ಸರ್ಕಲ್ ಮೂಲಕ ಸಾಗುತ್ತಾ ಮೋತಿ ಸರ್ಕಲ್‌ವರೆಗೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಹಾಗೂ ಯುವಕರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಶಿಸ್ತುಬದ್ಧವಾಗಿ ಯಾತ್ರೆಯಲ್ಲಿ ಭಾಗವಹಿಸಿದ್ದರು. ಯಾತ್ರೆಯುದ್ದಕ್ಕೂ ಭಾರತ ಮಾತಾ ಕೀ ಜೈ, ವಂದೇ ಮಾತರಂ ಸೇರಿದಂತೆ ದೇಶಭಕ್ತಿ ಘೋಷಣೆಗಳು ಮೊಳಗಿದವು.ಸುಮಾರು 450 ಮೀಟರ್ ಉದ್ದದ ರಾಷ್ಟ್ರಧ್ವಜ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸಿತು. ಯಾತ್ರೆಯ ನೇತೃತ್ವ ವಹಿಸಿದ್ದ ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ, “ಭಾರತದ ರಾಷ್ಟ್ರಧ್ವಜ ಕೇವಲ ಒಂದು ಧ್ವಜವಲ್ಲ; ಅದು ನಮ್ಮ ದೇಶದ ಸ್ವಾಭಿಮಾನ, ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯ ಪ್ರತೀಕವಾಗಿದೆ. ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಸಾಗುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸ್ವಾತಂತ್ರ‍್ಯವನ್ನು ಕೇವಲ ಆಚರಿಸುವುದಷ್ಟೇ ಅಲ್ಲದೆ, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಜವಾಬ್ದಾರಿಯನ್ನೂ ಯುವಜನತೆ ಹೊತ್ತುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ದೇಶದ ಬಗ್ಗೆ ಜವಾಬ್ದಾರಿ, ಸಾಮಾಜಿಕ ಕಾಳಜಿ ಮತ್ತು ರಾಷ್ಟ್ರಭಕ್ತಿಯ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ಭಾರತವು ವಿವಿಧ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳನ್ನು ಹೊಂದಿರುವ ವಿಶಾಲ ರಾಷ್ಟ್ರ. ಈ ವೈವಿಧ್ಯತೆಯ ನಡುವೆಯೂ ನಮ್ಮನ್ನು ಒಂದಾಗಿ ಬಂಧಿಸುವ ಶಕ್ತಿ ಭಾರತೀಯತೆಯಾಗಿದೆ ಎಂದು ಹೇಳಿದರು.ಎಬಿವಿಪಿಯ ಪ್ರಾಂತ ಕಾರ್ಯಸಮಿತಿ ಸದಸ್ಯ ಟಿ ಭರತ್, ವಿಭಾಗ ಸಂಚಾಲಕ ದಿಲೀಪಕುಮಾರ, ಜಿಲ್ಲಾ ಸಂಚಾಲಕ ಸಪ್ತಗಿರಿ, ನಗರ ಸಂಘಟನಾ ಕಾರ್ಯದರ್ಶಿ ಸಂದೀಪ ಅರಳಗುಂಡಿ, ನಗರ ಕಾರ್ಯದರ್ಶಿ ಬಸವಕಿರಣ, ವಿದ್ಯಾಶ್ರೀ, ಹೇಮಾವತಿ, ದಿವ್ಯಾ ಮತ್ತಿತರರು ಪಾಲ್ಗೊಂಡಿದ್ದರು. .