ಸಾರಾಂಶ
ಗದಗ ಜಿಲ್ಲಾ ಕೇಂದ್ರಕ್ಕೆ ನಿತ್ಯವೂ ವಿದ್ಯಾಭ್ಯಾಸಕ್ಕಾಗಿ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ನಗರದ ಪುಟ್ಟರಾಜ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಗದಗ: ಜಿಲ್ಲಾ ಕೇಂದ್ರಕ್ಕೆ ನಿತ್ಯವೂ ವಿದ್ಯಾಭ್ಯಾಸಕ್ಕಾಗಿ ಬರುವ ಸಾವಿರಾರು ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ನಗರದ ಪುಟ್ಟರಾಜ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಲಭ್ಯ ಸಿಗದೇ ಪರದಾಡುವಂತಾಗಿದ್ದು, ಬಸ್ಸಿನ ಬಾಗಿಲಲ್ಲಿ ನಿಂತು ಜೋತಾಡುತ್ತಾ, ಕೈಯಲ್ಲಿ ಜೀವ ಹಿಡಿದುಕೊಂಡು ಶಾಲೆ, ಕಾಲೇಜಿಗೆ ಬರುತ್ತಿದ್ದಾರೆ. ಕೂಡಲೇ ಸಮರ್ಪಕ ಬಸ್ ಸೇವೆ ನೀಡಬೇಕು ಎಂದು ಆಗ್ರಹಿಸಿದರು. ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ನಿತ್ಯವೂ ನಾವು ಸಂಕಷ್ಟದಲ್ಲಿಯೇ ಕಾಲೇಜಿಗೆ ಬರುವಂತಾಗಿದೆ. ಈ ಬಗ್ಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ನಾವೇನು ಮಾಡಲು ಸಾಧ್ಯವಿಲ್ಲ, ಹೆಚ್ಚಿನ ಬಸ್ ಗಳಿಲ್ಲ, ಸಾರಿಗೆ ಸಿಬ್ಬಂದಿಗಳಲ್ಲ, ಇರುವ ಬಸ್‌ಗಳಲ್ಲಿಯೇ ಎಲ್ಲಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು. ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿತ್ಯವೂ ಹಲವಾರು ವಿದ್ಯಾರ್ಥಿಗಳು ತರಗತಿಗಳಿಗೆ ಕುಳಿತುಕೊಳ್ಳಲು ಸಾಧ್ಯವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿ ರಾಜ್ಯ ಸರ್ಕಾರ ಮತ್ತು ಸಾರಿಗೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಲ್ಲದೇ ಸಮರ್ಪಕ ಬಸ್ ಸೇವೆ ಪ್ರಾರಂಭಿಸುವವರೆಗೂ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.ಬಸ್ಸಿನ ಗ್ಲಾಸ್ ಜಖಂ: ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆಯಲ್ಲಿಯೇ ನಿಲ್ದಾಣಕ್ಕೆ ಪ್ರವೇಶ ಮಾಡುತ್ತಿದ್ದ ಬಸ್ ಒಂದನ್ನು ಪ್ರತಿಭಟನಾ ನಿರತ ಸಿಬ್ಬಂದಿಗಳು ತಡೆಯಲು ಮುಂದಾದರು. ಈ ಸಂದರ್ಭದಲ್ಲಿ ಬಸ್ ಮುಂದಿನ ಗ್ಲಾಸ್ ಜಖಂಗೊಂಡಿತು.ಇದರಿಂದ ಕುಪಿತಗೊಂಡ ಸಾರಿಗೆ ಇಲಾಖೆ ಸಿಬ್ಬಂದಿಗಳು ಪ್ರತಿಭಟನಾ ನಿರತರೊಂದಿಗೆ ವಾಗ್ವಾದಕ್ಕಿಳಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರಾದರೂ ಸಾರಿಗೆ ಇಲಾಖೆ ಸಿಬ್ಬಂದಿ ಒಡೆದ ಗಾಜಿನ ವೆಚ್ಚ ಭರಿಸುವವರು ಯಾರು? ಪ್ರತಿಭಟನೆಯ ವೇಳೆಯಲ್ಲಿಯೇ ನನ್ನ ಬಸ್ ಗಾಜು ಒಡೆದಿದೆ ಎಂದು ಸಾರಿಗೆ ಸಿಬ್ಬಂದಿ ವಾದಿಸಿದರೆ, ನಾವು ಒಡೆದಿಲ್ಲ, ಪ್ರತಿಭಟನಾ ನಿರತರ ಮೇಲೆ ಬಸ್ ಹತ್ತಿಸಲು ಬಂದಾಗ ನಾವು ತಡೆದಿದ್ದೇವೆ. ಗಾಜು ಮೊದಲೇ ಒಡೆದಿತ್ತು ಎಂದು ಪ್ರತಿಭಟನಾ ನಿರತರು ಮರು ಆರೋಪ ಮಾಡಿದರು.
ಈ ವಾಗ್ವಾದದಿಂದಾಗಿ ಸ್ಥಳದಲ್ಲಿ ಬಿರುಸಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.