ಹಾವೇರಿ: ಕೆರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ಎರಡು ಕಿಮೀ ಉದ್ದದ ರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿ ಪಡಿಸುವುದು ಹಾಗೂ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಎಬಿವಿಪಿ ನಗರ ಘಟಕದ ಪದಾಧಿಕಾರಿಗಳು ಗುರುವಾರ ಹಾವೇರಿ ವಿವಿ ಬಳಿಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.ಹಾವೇರಿ ವಿವಿ ಕ್ಯಾಂಪಸ್‌ನಿಂದ ಹೊಸಳ್ಳಿಯವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ರಸ್ತೆ ದುರಸ್ತಿ ಮತ್ತು ಸಮರ್ಪಕ ಬಸ್ ವ್ಯವಸ್ಥೆ ಒದಗಿಸುವಂತೆ ಆಗ್ರಹಿಸಿದರು.ಈ ವೇಳೆ ಎಬಿವಿಪಿ ಜಿಲ್ಲಾ ಸಂಚಾಲಕ ಅಭಿಷೇಕ ದೊಡ್ಡಮನಿ, ನಗರ ಘಟಕದ ಕಾರ್ಯದರ್ಶಿ ಸಾಗರ್ ಪೊಲೀಸ್‌ಗೌಡ್ರ ಹಾಗೂ ಯಶವಂತ ಬಿ. ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯವು ಸ್ಥಾಪನೆಗೊಂಡು ಮೂರು ವರ್ಷ ಕಳೆದರೂ ಮೂಲಭೂತ ಸೌಕರ್ಯಗಳಿಲ್ಲ. ಅದರಲ್ಲೂ ಬಹುಮುಖ್ಯವಾಗಿ ರಸ್ತೆ ಹಾಗೂ ಸಾರಿಗೆ ಸಮಸ್ಯೆಯನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ದಿನನಿತ್ಯ ನೂರಾರು ವಿದ್ಯಾರ್ಥಿಗಳು ತಮ್ಮ ಖಾಸಗಿ ವಾಹನಗಳನ್ನು ಅವಲಂಬಿಸಿಕೊಂಡು ಬರುತ್ತಿದ್ದಾರೆ ಎಂದರು.ಹೊಸಳ್ಳಿ ಕ್ರಾಸ್‌ನಿಂದ ಹಾವೇರಿ ವಿಶ್ವವಿದ್ಯಾಲಯಕ್ಕೆ ತೆರಳುವ ರಸ್ತೆ ಮಾರ್ಗ ಬಹಳಷ್ಟು ಹದಗೆಟ್ಟಿದ್ದು, ತಗ್ಗು ಗುಂಡಿಗಳೇ ತುಂಬಿಕೊಂಡಿವೆ. ಬೈಕ್‌ನಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಅಪಘಾತಕ್ಕೀಡಾಗುವ ಸಾಧ್ಯತೆಗಳು ದಟ್ಟವಾಗಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಂಬಂಧಿಸಿದ ಶಾಸಕರು ಹಾಗೂ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಬೇಕು. ಜತೆಗೆ ಬೆಳಗ್ಗೆ ಎರಡು ಬಸ್ಸುಗಳು ಮಾತ್ರ ವಿವಿಗೆ ಸಂಚರಿಸುತ್ತಿದ್ದು, ಉಳಿದ ಅವಧಿಯಲ್ಲಿ ಓಡಾಡುವುದೇ ಇಲ್ಲ. ವಿದ್ಯಾರ್ಥಿಗಳು ಎರಡು ಕಿಮೀನಷ್ಟು ದೂರ ನಡೆದುಕೊಂಡೇ ವಿವಿಗೆ ಹೋಗುವಂತಾಗಿದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ವಿದ್ಯಾರ್ಥಿಗಳ ಅನಕೂಲಕ್ಕೆ ತಕ್ಕಂತೆ ಹೆಚ್ಚುವರಿ ಮತ್ತು ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.ಬಳಿಕ ಅಪರ ಜಿಲ್ಲಾಧಿಕಾರಿಗಳ ಮೂಲಕ ಶಾಸಕರಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಎಬಿವಿಪಿ ಕಾರ್ಯಕರ್ತರಾದ ಕಾರ್ತಿಕ ಕಲಾಲ, ಈಶ್ವರಿ ಬಡಿಗೇರ, ಅಕಿಲೇಶ, ದರ್ಶನ್, ಅನುಷಾ, ಸುಜಾತಾ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ವಿವಿ ವಿದ್ಯಾರ್ಥಿಗಳು ಇದ್ದರು.