ಸಾರಾಂಶ
ಶಿರಹಟ್ಟಿ: ಕಾಲೇಜು ವಿದ್ಯಾರ್ಥಿಗಳ ವೇತನ ಬಿಡುಗಡೆಗೊಳಿಸಲು ಹಾಗೂ ವಸತಿ ನಿಲಯಗಳಿಗೆ (ಹಾಸ್ಟೆಲ್) ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಹಟ್ಟಿ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ, ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತಹಸೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆಯ ನಗರ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದೇ ವಿದ್ಯಾರ್ಥಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಿದೆ ಎಂದು ದೂರಿದರು.ಒಂದು ದೇಶ ಹಾಗೂ ರಾಜ್ಯ ಅಭಿವೃದ್ಧಿಯಾಗಬೇಕೆಂದರೆ ಅಲ್ಲಿನ ಶಿಕ್ಷಣ ವ್ಯವಸ್ಥೆಗೆ ಬೇಕಾಗಿರುವ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಸರ್ಕಾರ ಒದಗಿಸಬೇಕು. ಸರ್ಕಾರ ಗ್ರಾಮೀಣ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಹತ್ತಾರು ಯೋಜನೆ ಜಾರಿಗೆ ತಂದರೂ ಅದು ಸಮರ್ಪಕವಾಗಿ ಅನುಷ್ಠಾನವಾಗದೇ ಇರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದರು.
ಮಕ್ಕಳ ಶಿಕ್ಷಣಕ್ಕಾಗಿ ಆರಂಭಿಸಿದ್ದ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ಸದ್ಯ ಸರ್ಕಾರ ತಡೆ ಹಿಡಿದು ರೈತರ ಮಕ್ಕಳ ಶಿಕ್ಷಣ ಕಸಿದುಕೊಂಡಿದೆ. ವಿದ್ಯಾರ್ಥಿಗಳಿಗೆ ಮಂಜೂರಾದ ವಿದ್ಯಾರ್ಥಿ ವೇತನ ತಡೆಹಿಡಿದು ಆ ಹಣವನ್ನು ಇನ್ನಿತರ ಯೋಜನೆಗಳಿಗೆ ಬಳಸುತ್ತಿರುವುದು ಖಂಡನೀಯ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ತುರ್ತು ವಿದ್ಯಾರ್ಥಿ ವೇತನ ನೀಡುವ ಜತೆಗೆ ಹಾಸ್ಟೇಲ್‌ಗಳಿಗೆ ಸಕಲ ಸೌಲಭ್ಯ ಒದಗಿಸಬೇಕು. ಸರ್ಕಾರ ನಿರ್ಲಕ್ಷ್ಯ ತೋರಿದರೆ ನೂರಾರು ಜನ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದರು.
ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ, ಬೇಕೆ ಬೇಕು ನ್ಯಾಯ ಬೇಕು ಎಂಬಿತ್ಯಾದಿ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ನಂಬಿ ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದ ವರ್ಷದಿಂದ ವಿದ್ಯಾರ್ಥಿ ವೇತನ ಇನ್ನೂ ಕೂಡ ಜಮೆಯಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಕಾರ್ಮಿಕರ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗಿದೆ. ವಿದ್ಯಾಸಿರಿ ವಿದ್ಯಾರ್ಥಿ ವೇತನ ಸರಿಯಾಗಿ ಜಮೆಯಾಗುತ್ತಿಲ್ಲ. ರೈತ ವಿದ್ಯಾನಿಧಿ ರದ್ದುಗೊಳಿಸಿರುವುದು ಸರಿಯಲ್ಲ. ತಕ್ಷಣ ವಿದ್ಯಾರ್ಥಿಗಳ ಖಾತೆಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮ ದೇಶದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲು ಪ್ರಮುಖ ಕಾರಣ ಅವರಿಗಿರುವ ಆರ್ಥಿಕ ಸಮಸ್ಯೆ. ವಿದ್ಯಾರ್ಥಿಗಳಿಗಾಗುವ ಆರ್ಥಿಕ ಸಮಸ್ಯೆ ಹೋಗಲಾಡಿಸುವ ದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡಿ ವಿದ್ಯಾಭ್ಯಾಸಕ್ಕೆ ಸರ್ಕಾರ ಪ್ರೋತ್ಸಾಹ ನೀಡಬೇಕು. ವಿಳಂಬ ನೀತಿ ಅನುಸರಿಸಿದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಅಭಿಷೇಕ ಬೋರಶೆಟ್ಟರ್, ವಿನೀತ್ ಜೈನ್, ಪ್ರೀತಮ್ ಪಲ್ಲೇದ, ಬಸವರಾಜ ಪೂಜಾರ, ಶಶಾಂಕ ಪಲ್ಲೇದ, ಸಾಗರ, ಮೈಲಾರಪ್ಪ ಹಾಗೂ ಎಲ್ಲ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪಿಎಸ್‌ಐ ಚನ್ನಯ್ಯ ದೇವೂರ ಹಾಗೂ ಸಿಬ್ಬಂದಿ ಬಂದೋಬಸ್ತ್ ಕೈಗೊಂಡಿದ್ದರು.