ಸಾರಾಂಶ
ಬಳ್ಳಾರಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಉಗ್ರ ಸಂಘಟನೆಯ ದುಷ್ಕರ್ಮಿಗಳು ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಕೊಲೆಗಡುಕರನ್ನು ಬಿಡಬಾರದು. ದೇಶದಲ್ಲಿ ಭಯೋತ್ಪಾದನೆ ನಿಗ್ರಹ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಜಿಕಲ್, ಏರ್‌ಸ್ಟ್ರೈಕ್ ಮಾದರಿಯ ದಾಳಿ ನಡೆಸಬೇಕು. 26 ಜನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು. ಉಗ್ರವಾದಿಗಳು ಹಾಗೂ ದುಷ್ಕರ್ಮಿಗಳನ್ನು ಬೆಂಬಲಿಸುವ ಸಂಘಟನೆಗಳಿಗೆ ಪ್ರತ್ಯುತ್ತರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಉಗ್ರರು ದಾಳಿ ವೇಳೆ ಧರ್ಮ ಯಾವುದು ಎಂದು ಕೇಳಿ ಗುಂಡಿಕ್ಕಿ ಕೊಂದಿರುವುದು ಅತ್ಯಂತ ಅಮಾನುಷವಾಗಿದೆ. ದುಷ್ಕರ್ಮಿಗಳು ಧರ್ಮದ ಹೆಸರಿನಲ್ಲಿ ಅಮಾಯಕ ಮುಗ್ಧ ಜನರನ್ನು ಬಲಿ ತೆಗೆದುಕೊಂಡಿದ್ದಾರೆ. ಈ ಕೃತ್ಯದ ಹಿಂದೆ ಪಾಕಿಸ್ತಾನ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ದುಷ್ಟ ರಾಷ್ಟ್ರಗಳ ಜತೆ ಭಾರತವು ರಾಜತಾಂತ್ರಿಕತೆ ರದ್ದುಪಡಿಸಬೇಕು. ದುಷ್ಕೃತ್ಯದ ಹಿಂದೆ ಯಾರು ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು ಕಾಶ್ಮೀರ ದಾಳಿ ನಡೆಸಿದ ಉಗ್ರರ ಕೃತ್ಯದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಡಳಿತ ಮೂಲಕ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಗೃಹಸಚಿವರಿಗೆ ಮನವಿಪತ್ರ ಕಳಿಸಿಕೊಟ್ಟರು.ವಿದ್ಯಾರ್ಥಿ ಮುಖಂಡರಾದ ನವೀನ್ ಹೂಗಾರ್, ಮಾರುತಿ, ನಾಗರಾಜ್ ಬಡಿಗೇರ, ದಿಲೀಪ್, ಸಾಗರ್, ಆಂಜಿನೇಯ, ಸುರೇಖಾ, ಮಧುಬಾಲ, ಅನುಶ್ರೀ, ಶರಣಬಸವ, ವಿಜಯಕುಮಾರ್, ರಾಜೇಂದ್ರ, ಶಿವಾನಂದ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.