ಸಿಇಟಿ ಗೊಂದಲಗಳನ್ನು ಬಗೆಹರಿಸಲು ಎಬಿವಿಪಿಯಿಂದ ಸರ್ಕಾರಕ್ಕೆ ಒತ್ತಾಯ

| Published : Jul 20 2025, 01:15 AM IST

ಸಿಇಟಿ ಗೊಂದಲಗಳನ್ನು ಬಗೆಹರಿಸಲು ಎಬಿವಿಪಿಯಿಂದ ಸರ್ಕಾರಕ್ಕೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ, ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ, ಸರ್ವರ್ ಸಮಸ್ಯೆ ಇತ್ಯಾದಿಗಳನ್ನು ವಿರೋಧಿಸಿ ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ, ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸೀಟ್ ಬ್ಲಾಕಿಂಗ್, ಹಣ ವಸೂಲಿ ದಂಧೆ, ಸರ್ವರ್ ಸಮಸ್ಯೆ ಇತ್ಯಾದಿಗಳನ್ನು ವಿರೋಧಿಸಿ ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಎಬಿವಿಪಿ ನಗರ ಕಾರ್ಯದರ್ಶಿ ಮಾಣಿಕ್ಯ ಭಟ್ ಮಾತನಾಡಿ, ಈ ಬಾರಿ ಸಾಮಾನ್ಯ ಪ್ರವೇಶಾತಿ ಪರೀಕ್ಷೆಯಲ್ಲಿನ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಅನೇಕ ಗೊಂದಲಗಳಾಗಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಸರ್ವರ್ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಆಪ್ಷನ್ ಎಂಟ್ರಿ ಪ್ರಕ್ರಿಯೆ ಪೂರ್ಣ ಮಾಡಲಾಗಿಲ್ಲ. ಸರ್ಕಾರ ತಕ್ಷಣ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.ಎಬಿವಿಪಿ ಜಿಲ್ಲಾ ಸಂಚಾಲಕ ಶ್ರೇಯಸ್ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಗ್ಯಾರಂಟಿ ಯೋಜನೆಗಳ ಆರ್ಥಿಕ ಸುಳಿಗೆ ಸಿಲುಕಿ, ವಿದ್ಯಾರ್ಥಿಗಳ ಜೇಬಿಗೂ ಕೈ ಹಾಕುವಂತಹ ಶೋಚನೀಯ ಪರಿಸ್ಥಿತಿಗೆ ತಲುಪಿದೆ. ಹೀಗೆ ಮುಂದುವರಿದರೆ ತರಗತಿಯೊಳಗೆ ಅಥವಾ ಕಾಲೇಜಿನ ಗೇಟಿನೊಳಗೆ ಪ್ರವೇಶಿಸಲು ಶುಲ್ಕ ವಿಧಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇಂದು ನಾವು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಈ ಕೂಡಲೇ ಸೀಟ್ ಬ್ಲಾಕಿಂಗ್ ದಂಧೆಯನ್ನು ನಿಲ್ಲಿಸುವಂತೆ ಹಾಗೂ ದಂಧೆಯಲ್ಲಿ ಭಾಗಿಯಾಗಿರುವ ಕಾಲೇಜುಗಳಿಗೆ ಕಾನೂನಿನ ಬಿಸಿ ಮುಟ್ಟಿಸುವಂತೆ ಎಚ್ಚರಿಕೆ ನೀಡುತಿದ್ದೇವೆ ಎಂದರು.ಪ್ರತಿಭಟನೆಯಲ್ಲಿ ನಗರ ಸಹ ಕಾರ್ಯದರ್ಶಿ ಶಿವನ್ ಮತ್ತು ಪ್ರಮುಖರಾದ ಮನೀಶ್, ಅಂಕಿತಾ, ರಂಜಿತ್, ಕಾರ್ತಿಕ್, ಮುತ್ತು, ಧನುಷ್, ಸಾಧನ ಉಪಸ್ಥಿತರಿದ್ದರು. ಪ್ರತಿಭಟನೆಯ ನಂತರ ಉಡುಪಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.