ಚಳ್ಳಕೆರೆ ನಗರದ ಹೊರವಲಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ಕಾಲೇಜು ದಿನಾಚರಣೆಯಲ್ಲಿ ಶಾಸಕ ಟಿ.ರಘುಮೂರ್ತಿ ಅವರು ನೂತನ ಕೊಠಡಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬಯಲು ಸೀಮೆಯ ಚಳ್ಳಕೆರೆಯಂತಹ ನಗರಕ್ಕೆ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಕೊಟ್ಟಿದ್ದು ದೊಡ್ಡ ವಿಷಯ. ಆದ್ದರಿಂದ ಇಲ್ಲಿ ಕಲಿಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಧನೆಯ ಕಡೆಗೆ ಮನಸ್ಸು ಮಾಡಬೇಕು ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಹಾಗೂ ಶಾಸಕರಾದ ಟಿ.ರಘುಮೂರ್ತಿ ಹೇಳಿದರು.ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಕಾಲೇಜು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಒಂದು ಬ್ಯಾಚ್ ಎಂಜಿನಿಯರಿಂಗ್ ಪದವಿ ಮುಗಿಸಿ ಹೊರ ಹೋಗಿದೆ. ಅದರಲ್ಲಿ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುವುದು ಖುಷಿ ತಂದಿದೆ ಎಂದರು.ಚಳ್ಳಕೆರೆಯಂತಹ ನಗರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆಗಿರುವುದು ಈ ಭಾಗದ ವಿದ್ಯಾರ್ಥಿಗಳು ಹೆಚ್ಚು ವಿದ್ಯಾಭ್ಯಾಸ ಮಾಡುವ ಮೂಲಕ ಇದೇ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡು ಅತೀ ಕಡಿಮೆ ಖರ್ಚಿನಲ್ಲಿ ವಿದ್ಯಾಭ್ಯಾಸ ಮುಗಿಸಬಹುದು.
ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮುಂದಿನ ದಿನಗಳಲ್ಲಿ ಕಾಲೇಜಿಗೆ ಕರೆಸಿ ಸನ್ಮಾನಿಸಬೇಕು. ಆಗ ಮಾತ್ರ ಇನ್ನುಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಆಗುತ್ತಾರೆ ಎಂದು ಸೂಚಿಸಿದರು.ಎಂಜಿನಿಯರಿಂಗ್ ನಂತಹ ಪದವಿ ಪಡೆಯುವಾಗ ತುಂಬಾ ಶ್ರದ್ಧೆ ಹಾಗೂ ಹೆಚ್ಚು ಓದುವ ಅಭ್ಯಾಸ ಬೇಕಾಗುತ್ತದೆ. ಆರಂಭದಲ್ಲಿ ಕಷ್ಟವಾದರೂ ನಿರಂತರತೆಯನ್ನು ಮೈಗೂಡಿಸಿಕೊಂಡಿದ್ದೇ ಆದರೆ ಯಶಸ್ಸು ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಂ. ಬೆನಾಲ್, ನಗರಸಭೆ ಮಾಜಿ ಸದಸ್ಯ ರಮೇಶ್ ಗೌಡ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.