ಅಕಾಡೆಮಿಯಿಂದ ಸಂಜೀವ ಸುವರ್ಣ ಜೀವನ ಸಾಧನೆ ದಾಖಲೀಕರಣ: ಡಾ.ತಲ್ಲೂರು

| Published : Mar 26 2025, 01:30 AM IST

ಸಾರಾಂಶ

ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಒಂದು ವಾರ ನಡೆಯಲಿರುವ ಯಕ್ಷಶಿಕ್ಷಣ ಸನಿವಾಸ ಶಿಬಿರ - 2025 ರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಜೀವನ ಮತ್ತು ಸಾಧನೆಗಳನ್ನು ರಾಜ್ಯ ಯಕ್ಷಗಾನ ಅಕಾಡೆಮಿಯಿಂದ ದಾಖಲೀಕರಣ ನಡೆಸಲು ನಿರ್ಧರಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಒಂದು ವಾರ ನಡೆಯಲಿರುವ ಯಕ್ಷಶಿಕ್ಷಣ ಸನಿವಾಸ ಶಿಬಿರ - 2025 ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ ಅವರು ಯಕ್ಷಗಾನ ಕಲೆಯ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದವರು. ಕಾರಂತರೊಂದಿಗೆ ದೇಶವಿದೇಶದಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ ಯಕ್ಷಗಾನದ ಕಂಪನ್ನು ಬೀರಿದವರು. ಅವರ ಬಳಿ ದೇಶವಿದೇಶದಿಂದ ನೂರಾರು ಯಕ್ಷಗಾನ ಆಸಕ್ತರು ಬಂದು ಹೆಜ್ಜೆಗಾರಿಕೆ ಕಲಿತಿದ್ದಾರೆ. ಕಲಿಯುತ್ತಿದ್ದಾರೆ. ಅವರ ಈ ಮಹಾನ್ ಸಾಧನೆ ಯುವಪೀಳಿಗೆಗೆ ತಿಳಿಯಬೇಕು. ಈ ನಿಟ್ಟಿನಲ್ಲಿ ಬನ್ನಂಜೆ ಸಂಜೀವ ಸುವರ್ಣ ಅವರ ಬಗ್ಗೆ ಸಮಗ್ರ ದಾಖಲೀಕರಣವನ್ನು ಅಕಾಡೆಮಿ ನಡೆಸಲಿದೆ ಎಂದು ಅವರು ತಿಳಿಸಿದರು.

ಯಕ್ಷಗಾನ ಪರಿಪೂರ್ಣ ಕಲಾಪ್ರಕಾರವಾಗಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಯಕ್ಷಗಾನವನ್ನು ಕಲಿತ ಮಕ್ಕಳು ಗುರುಹಿರಿಯರಿಗೆ ವಿಧೇಯರಾಗಿ, ನೈತಿಕ ಮೌಲ್ಯಗಳನ್ನು ತುಂಬಿಕೊoಡು ಬೆಳೆಯುತ್ತಾರೆ. ಇದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.

ಶಿಬಿರ ಉದ್ಘಾಟಿಸಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳ್, ಯಕ್ಷಗಾನದಿಂದ ಮಕ್ಕಳಲ್ಲಿ ಅಕಾಡೆಮಿಕ್ ಶಿಸ್ತು, ಸ್ಮರಣ ಶಕ್ತಿ, ಮಾತಿನ ಶಕ್ತಿ ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಕೂಡಾ ಆಗುತ್ತದೆ. ಸಾತ್ವಿಕ ಗುಣವನ್ನು ಯಕ್ಷಗಾನ ಕಲಿಸುತ್ತದೆ. ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಭೀಮ ಗೋಲ್ಡ್ ನ ರಾಘವೇಂದ್ರ ಭಟ್ ಹಾಗೂ ಗುರುಪ್ರಸಾದ್, ಡಾ. ಕಾವ್ಯಾ ನರೇಂದ್ರ ಬಲ್ಲಾಳ್, ಶಿಬಿರದ ನಿರ್ದೇಶಕ ಗುರು ಬನ್ನಂಜೆ ಸಂಜೀವ ಸುವರ್ಣ, ನರಸಿಂಹ ತುಂಗ, ಆದ್ಯತಾ ಭಟ್, ಕಲಾರಂಗದ ಪದಾಧಿಕಾರಿಗಳಾದ ಎಸ್.ವಿ.ಭಟ್, ಯು. ವಿಶ್ವನಾಥ ಶಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ ಹೆಗ್ಡೆ, ವಿದ್ಯಾ ಪ್ರಸಾದ್, ಅಜಿತ್ ಕುಮಾರ್, ಮಹೇಶ್ ಕುಮಾರ್, ರತ್ನಾಕರ ಶೆಣೈ, ನಿತ್ಯಾನಂದ ಶೆಟ್ಟಿಗಾರ್, ನಾಗೇಂದ್ರ ಗಾಣಿಗ ಇದ್ದರು.

ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರದ ಸಂಯೋಜಕ ನಿರಂಜನ ಭಟ್ ನಿರೂಪಿಸಿದರು.

ಒಂದು ವಾರದ ಈ ಸನಿವಾಸ ಶಿಬಿರದಲ್ಲಿ ಯಕ್ಷಶಿಕ್ಷಣದ ಶಾಲೆಗಳ 60 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.