ರಂಗಭೂಮಿ ಅಭಿರುಚಿ ಇಲ್ಲದವರು ಅಕಾಡೆಮಿ ಅಧ್ಯಕ್ಷರು!

| Published : Jun 08 2024, 12:36 AM IST / Updated: Jun 08 2024, 12:37 AM IST

ರಂಗಭೂಮಿ ಅಭಿರುಚಿ ಇಲ್ಲದವರು ಅಕಾಡೆಮಿ ಅಧ್ಯಕ್ಷರು!
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ರಂಗಭೂಮಿ ಮರಾಠಿ ರಂಗಭೂಮಿಗೆ ತಾಯಿಯ ಸ್ಥಾನದಲ್ಲಿ ಇದೆ. ಆದರೆ, ಇಂದು ಕರ್ನಾಟಕದ ರಂಗಭೂಮಿ ಅವನತಿಯ ಸ್ಥಿತಿ ತಲುಪಿದರೆ, ಮರಾಠಿ ರಂಗಭೂಮಿ ತನ್ನ ಹೆಚ್ಚುಗಾರಿಕೆ ಉಳಿಸಿಕೊಂಡಿದೆ.

ಧಾರವಾಡ:

ಸಂಸ್ಕೃತಿಯ ಪ್ರತೀಕವಾಗಿರುವ ರಂಗಭೂಮಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ರಂಗಭೂಮಿಯ ಬಗ್ಗೆ ಆಸಕ್ತಿ, ಅಭಿರುಚಿ, ಗಂಧ-ಗಾಳಿ ಗೊತ್ತಿಲ್ಲದೇ ಇರುವವವರು ಅಕಾಡೆಮಿ ಅಧ್ಯಕ್ಷರಾಗುತ್ತಿರುವುದು ದುರಂತದ ಸಂಗತಿ ಎಂದು ಮಾಜಿ ಮೇಯರ್‌ ಡಾ. ಪಾಂಡುರಂಗ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ವೀರಣ್ಣ ರಾಜೂರ ದತ್ತಿ ಅಂಗವಾಗಿ ಆಯೋಜಿಸಿದ್ದ ‘ರಾಜಮಾರ್ಗ ಪ್ರಶಸ್ತಿ’ ಪ್ರದಾನದಲ್ಲಿ ಮಾತನಾಡಿದ ಅವರು, ಮೊದಲು ಕಲಾವಿದರನ್ನು ಗುರುತಿಸುವ ಮನಸ್ಸುಗಳಿದ್ದವು. ಒಂದು ಹಂತಕ್ಕೆ ಹುಬ್ಬಳ್ಳಿಯಂತಹ ನಗರದಲ್ಲಿ ನಾಟಕ ಪ್ರದರ್ಶನಕ್ಕೆ ಒಂದು ಥೇಟರ್ ಸಿಕ್ಕರೆ ಸಾಕು ಎನ್ನುವಂತೆ ನಾಟಕ ಕಂಪನಿಗಳು ಇದ್ದವು. ಆದರೆ, ಇಂದು ಕಲಾವಿದರಿಗೆ ಅವಕಾಶವಿಲ್ಲ, ಪ್ರೋತ್ಸಾಹವೂ ಸಿಗುತ್ತಿಲ್ಲ ಎಂದರು.

ಕನ್ನಡ ರಂಗಭೂಮಿ ಮರಾಠಿ ರಂಗಭೂಮಿಗೆ ತಾಯಿಯ ಸ್ಥಾನದಲ್ಲಿ ಇದೆ. ಆದರೆ, ಇಂದು ಕರ್ನಾಟಕದ ರಂಗಭೂಮಿ ಅವನತಿಯ ಸ್ಥಿತಿ ತಲುಪಿದರೆ, ಮರಾಠಿ ರಂಗಭೂಮಿ ತನ್ನ ಹೆಚ್ಚುಗಾರಿಕೆ ಉಳಿಸಿಕೊಂಡಿದೆ ಎಂದು ಹೇಳಿದರು.

ಹಿಂದಿನ ಕಾಲದ ಕಂಪನಿ ನಾಟಕ, ಕಲಾವಿದರು ಹಾಗೂ ವೈಭವಗಳ ಬಗ್ಗೆ ಮಾತನಾಡುತ್ತೇವೆಯೇ ಹೊರತು ಉಳಿಸಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕದಲ್ಲಿ ಒಂದು ಕಾಲಕ್ಕೆ ರಂಗಭೂಮಿ ಉತ್ತುಂಗ ಶಿಖರಕ್ಕೆ ಏರಿದ್ದನ್ನು ಕಾಣುತ್ತೇವೆ. ಅನೇಕ ನಾಟಕ ಕಂಪನಿಗಳು ಜನ್ಮತಾಳಿ ತಮ್ಮ ಕಲೆಯ ಮುಖಾಂತರವಾಗಿ ಜನರಿಗೆ ಮನರಂಜನೆ ನೀಡಿದ್ದವು. ಅನೇಕ ಕಲಾವಿದರ ಕುಟುಂಬ ನಿರ್ವಹಣೆಗೆ ಆಶ್ರಯದ ತಾಣಗಳಾಗಿದ್ದವು. ರಂಗಭೂಮಿ ಬದುಕ ಬೇಕಿದ್ದರೆ ಸರ್ಕಾರಗಳ ಮೇಲೆ ಒತ್ತಡ ಹೇರಿ ಇದನ್ನೊಂದು ಉದ್ಯಮವನ್ನಾಗಿ ಮಾಡಬೇಕಾದ ಅಗತ್ಯವಿದೆ. ರಂಗಭೂಮಿಗೆ ಆರ್ಥಿಕ ಬೆಂಬಲ, ಕಾನೂನು ಬದ್ಧತೆ ಸಿಗಬೇಕಾಗಿದೆ ಎಂದರು.

‘ರಾಜಮಾರ್ಗ ಪ್ರಶಸ್ತಿ’ ಸ್ವೀಕರಿಸಿದ ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಪುಷ್ಪಮಾಲಾ ಅಣ್ಮಿಗೇರಿ, ತಾಯಿಯ ಉದರದಿಂದ ಬಂದ ಐದನೇ ದಿನಕ್ಕೆ ಸಿದ್ಧರಾಮನ ಬಾಲ ಪಾತ್ರದಲ್ಲಿ ತೊಟ್ಟಿಲಲ್ಲಿ ತೂಗಿಸಿಕೊಂಡ ಅನುಭವ ನನ್ನದು. ಎಚ್.ಎಂ. ಹೂಗಾರ ಅವರು ಹೊಡೆದು, ಬಡೆದು ರಂಗಭೂಮಿ ಮಹತ್ವದ ಬಗ್ಗೆ ನನ್ನಲ್ಲಿ ಜಾಗೃತಿ ಮೂಡಿಸಿದರು. ಓದು-ಬರಹ ಬಾರದ ನನಗೆ ತಮ್ಮ ಕಂಪನಿಯಲ್ಲಿ ಅವಕಾಶ ಕೊಟ್ಟು 13ನೇ ವರ್ಷದಿಂದ ಈ ವರೆಗೆ ವಿವಿಧ ಪಾತ್ರಗಳನ್ನು ಮಾಡಿದ್ದೇನೆ ಎಂದರು.

ಶಿರೂರ ಮತ್ತು ವಿಶ್ವಭಾರತಿ ರಮ್ಯ ನಾಟಕ ಸಂಘದ ಅಧ್ಯಕ್ಷ ಬಸವರಾಜ ಬೆಂಗೇರಿ ಮಾತನಾಡಿದರು. ಬಿ.ಐ. ಈಳಿಗೇರ ಹಾಗೂ ಪರಮೇಶ್ವರ ರಾಮಾ ಮಡಿವಾಳ ಅವರನ್ನು ಗೌರವಿಸಲಾಯಿತು. ಶಂಕರ ಕುಂಬಿ, ಡಾ. ಎಫ್.ಟಿ. ಹಳ್ಳಿಕೇರಿ, ವಿಶ್ವೇಶ್ವರಿ ಹಿರೇಮಠ, ಡಾ. ಜಿನದತ್ತ ಹಡಗಲಿ, ಶಂಕರ ಹಲಗತ್ತಿ ಇದ್ದರು.