ಸಾರಾಂಶ
ಅಪ್ಪಾರಾವ್ ಸೌದಿ
ಬೀದರ್ : ದೇಶದ ಅತ್ಯಂತ ಕಿರಿಯ ಸಂಸದರಲ್ಲಿ ಒಬ್ಬರಾಗಿ ಬೀದರ್ ಲೋಕಸಭಾ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ಸಾಗರ ಈಶ್ವರ ಖಂಡ್ರೆ ಅವರಲ್ಲಿ ಜನ ಪರ ಕಾರ್ಯಗಳ ಸಾವಿರಾರು ಕನಸುಗಳಿವೆ. ಯುವ ಜನತೆ ಉದ್ಯೋಗಿಗಳನ್ನಾಗಿಸುವ ಮೂಲಕ ನಿರುದ್ಯೋಗ ಸಮಸ್ಯೆಗೆ ಬ್ರೇಕ್ ಹಾಕುವ ತವಕವಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ತುಡಿತವಿದೆ. ಸಂಸದರಾಗಿ ತನ್ನದೇಯಾದ ಶೈಲಿಯಲ್ಲಿ ಅಭಿವೃದ್ಧಿ ಅವಕಾಶಗಳನ್ನು ಕ್ಷೇತ್ರದೆಡೆ ಸೆಳೆಯುವ ಮಹದಾಸೆಯಿದೆ. ಈ ಎಲ್ಲ ವಿಷಯಗಳ ಕುರಿತಂತೆ ಸಾಗರ ಈಶ್ವರ ಖಂಡ್ರೆ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.
ಕ.ಪ್ರ : ಸಂಸದರಾಗಿ ಆಯ್ಕೆಯಾಗಿದ್ದೀರಿ, ಈ ಕಿರಿ ವಯಸ್ಸಿನಲ್ಲಿ ಎಲ್ಲವನ್ನೂ ನಿಭಾಯಿಸಬಲ್ಲಿರಾ?
ಸಾಗರ : ಜನತೆ ಸಂಸದನನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ನಮ್ಮ ಭಾಗದ ಏಳ್ಗೆಗೆ ಶ್ರಮಿಸಲು ಕಿರಿ ವಯಸ್ಸು ಮತ್ತಷ್ಟು ಪ್ರೋತ್ಸಾಹಿಸುತ್ತದೆ. ಹೊಸ ಹೊಸ ಚಿಂತನೆಗಳಿಗೆ ತೆರೆದುಕೊಳ್ಳುತ್ತದೆ. ಇಲ್ಲಿ ಹಿರಿಯ ಕಿರಿಯ ಎಂಬ ಯಾವುದೇ ಅಳುಕು ಇರೋಲ್ಲ. ನನ್ನದೇನಿದ್ದರೂ ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ರೈತರ, ಬಡವರ ಏಳ್ಗೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಥಮಾದ್ಯತೆಯ ಗುರಿ. ಇನ್ನು ರಾಷ್ಟ್ರ ರಾಜಕಾರಣ ಅಂದಾಕ್ಷಣ ನಾವು ಸ್ಥಳೀಯವಾಗಿ ಅಭಿವೃದ್ಧಿ, ಅವಕಾಶ ಮತ್ತು ಸಮಸ್ಯೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವಲ್ಲಿ ಹಿಂದೆ ಬೀಳಲ್ಲ.
ಕ.ಪ್ರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಸಭೆ ಹೇಗಿತ್ತು ..?
ಸಾಗರ : ದೇಶದ ಡೈನಾಮಿಕ್ ಲೀಡರ್ ರಾಹುಲ್ ಗಾಂಧಿ. ಅವರನ್ನು ನೇರವಾಗಿ ಭೇಟಿಯಾಗುವ ಅವಕಾಶ ಮೈನವಿರೇಳಿಸಿತು. ದೇಶದ ಜನರ ಅಭಿವೃದ್ಧಿಗಾಗಿ ಅವರಲ್ಲಿರುವ ಕಾಳಜಿ ನನ್ನನ್ನು ಅತಿಯಾಗಿ ಪ್ರೇರೇಪಿಸಿತು. ಕರ್ನಾಟಕದಿಂದ ಆಯ್ಕೆಯಾದ ಎಲ್ಲ ನೂತನ ಸಂಸದರೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತನಾಡಿದರು. ಜನರ ಸಮಸ್ಯೆಗಳಿಗೆ ಕಿವಿಯಾಗುವಂತೆ ಸಲಹೆ ನೀಡಿದರು. ಹೂಗುಚ್ಛ ನೀಡಿ ಅಭಿನಂದಿಸಿದರು. ಅವರ ಭೇಟಿ ಅತ್ಯಂತ ಖುಷಿ ನೀಡಿತು.
ಕ.ಪ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳಿದ್ರು
ಸಾಗರ : ಕಲಿಕೆ ಮುಖ್ಯ. ಹಿರಿಯರ ಸಲಹೆಗಳನ್ನು ತೆಗೆದುಕೊಳ್ಳಬೇಕು. ಸಂಸತ್ ಅಧಿವೇಶನಗಳಲ್ಲಿ ತಪ್ಪದೇ ಪಾಲ್ಗೊಳ್ಳಬೇಕು. ಓದು ನಿರಂತರವಾಗಿರಲಿ. ನಮ್ಮನ್ನು ಪರಿಪಕ್ವ ಮಾಡಿಸುವದೇ ನಮ್ಮಲ್ಲಿ ಹುದುಗುವ ಜ್ಞಾನ ಎಂಬುವದರ ಬಗ್ಗೆ ತಿಳಿಸಿದ್ದಾರೆ. ಸದಾ ಜನ ಸಾಮಾನ್ಯರ ಕಾಳಜಿ ಇರಲಿ. ಪ್ರತಿಯೊಬ್ಬರಿಗೂ ಸ್ಪಂದಿಸುವ ಚಿಂತನೆ ಇರಲಿ ಎಂದೆಲ್ಲ ಹೇಳಿದ್ದಾರೆ.
ಕ.ಪ್ರ: ಬಿಜೆಪಿ ಆಡಳಿತದೊಂದಿಗೆ ನಿಮ್ಮ ಬಾಂಧ್ಯವ್ಯ
ಸಾಗರ: ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದುವದಕ್ಕೆ ಪ್ರಯತ್ನಿಸುತ್ತೇನೆ. ಚುನಾವಣೆ ಮುಗಿದಾಯ್ತು ಈಗ ಕ್ಷೇತ್ರದ ಬಗ್ಗೆ ಕಾಳಜಿ ಅದರ ಅಭಿವೃದ್ಧಿ ಜನರ ಸಮಸ್ಯೆಗಳಿಗೆ ಕಿವಿಯಾಗುವದು ಮುಖ್ಯ. ಅವುಗಳ ಪರಿಹಾರಕ್ಕಾಗಿ ಶ್ರಮಿಸುವದು. ಸರ್ಕಾರದಿಂದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುತುವರ್ಜಿ ವಹಿಸುವದು. ಕೇಂದ್ರವಷ್ಟೇ ಅಲ್ಲ ರಾಜ್ಯದ ಯೋಜನೆಗಳು ಅವುಗಳ ಸಾಕಾರಕ್ಕೂ ಶ್ರಮಿಸುವದು ನನ್ನ ಚಿಂತನೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವದರಲ್ಲಿ ಸಂದೇಹವಿಲ್ಲ.ಕ.ಪ್ರ: ಸಂಸದ, ರಾಜ್ಯದ ಸಚಿವರ ಮಧ್ಯದ ಆರೋಪ ಪ್ರತ್ಯಾರೋಪ ಈಗ ಕಮ್ಮಿ ಆದೀತು
ಸಾಗರ : ಆ ಪ್ರಶ್ನೆಯೇ ಉದ್ಭವಿಸಲ್ಲ. ಎಲ್ಲರೂ ಸೇರಿ ಕ್ಷೇತ್ರಕ್ಕಾಗಿ ಶ್ರಮಿಸುತ್ತೇವೆ.
ಕ.ಪ್ರ: ಬೀದರ್ ಲೋಕಸಭಾ ಕ್ಷೇತ್ರದ ಯಾವ ಪ್ರಮುಖ ಸಮಸ್ಯೆಗೆ ನಿಮ್ಮ ಪ್ರಥಮಾದ್ಯತೆ.
ಸಾಗರ : ಪ್ರತಿಯೊಂದು ಸಮಸ್ಯೆ, ಪ್ರತಿಯೊಬ್ಬರ ತೊಂದರೆಗಳು ನಮ್ಮ ಮುಂದಿರುವ ಸವಾಲುಗಳು. ಅವುಗಳೆಲ್ಲವನ್ನೂ ಪರಿಹರಿಸುವದು ನಮ್ಮ ಜವಾಬ್ದಾರಿ ಕೂಡ. ಅದರಲ್ಲಿಯೂ ನಮ್ಮ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಅತಿಯಾಗಿ ಕಾಡುತ್ತಿದೆ. ಪ್ರತಿಭಾನ್ವಿತರು, ಪದವೀಧರರು ನಿತ್ಯವೂ ನಮ್ಮ ಬಳಿ ಉದ್ಯೋಗ ಅರಸಿ ಬರುತ್ತಾರೆ. ಇಂಥದ್ದೊಂದು ನಿರುದ್ಯೋಗ ಸಮಸ್ಯೆ ನೀಗಿದ್ದೆಯಾದಲ್ಲಿ ಆರ್ಥಿಕ ವೃದ್ಧಿಯಾಗುತ್ತದೆ. ಜನರ ಜೀವನ ಮಟ್ಟ ಸುಧಾರಿಸುತ್ತದೆ. ಅದಕ್ಕಾಗಿ ವಿಶೇಷ ಯೋಜನೆಗಳನ್ನು ಇತ್ತ ಸೆಳೆಯುವ ಪ್ರಯತ್ನ ಮಾಡ್ತೇನೆ.