ಸಾರಾಂಶ
ಬಾಲ ಕಾರ್ಮಿಕ ಪದ್ದತಿ ಭವ್ಯ ಭಾರತದ ಮೂಲಭೂತ ಶಕ್ತಿಯನ್ನು ಹತ್ತಿಕ್ಕುವ ಪರಿಕಲ್ಪನೆಯಾಗಿದ್ದು, ಇದರಿಂದ ಮಾನವ ಸಂಪನ್ಮೂಲದ ಕುಸಿಯುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಬಾಲ ಕಾರ್ಮಿಕ ಪದ್ದತಿ ಭವ್ಯ ಭಾರತದ ಮೂಲಭೂತ ಶಕ್ತಿಯನ್ನು ಹತ್ತಿಕ್ಕುವ ಪರಿಕಲ್ಪನೆಯಾಗಿದ್ದು, ಇದರಿಂದ ಮಾನವ ಸಂಪನ್ಮೂಲದ ಕುಸಿಯುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಶಾಲಾ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಮದಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ನಿರ್ಮೂಲನಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.ತಾಲೂಕಿನ ಪ್ರೌಢಶಾಲೆಗಳಲ್ಲಿ ಬಾಲ ಕಾರ್ಮಿಕ ನಿಮೂರ್ಲನಾ ಅಭಿಯಾನವನ್ನು ಜೂನ್ ೧ರಿಂದ ೩೦ರವರೆಗೆ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಮಾನವರಲ್ಲಿ ಸಮಾನತೆಯನ್ನುಂಟು ಮಾಡುವ ನಿಟ್ಟಿನಲ್ಲಿ ಸೇರಿಸಲಾಗಿದೆ. ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಹೊಂದಬೇಕು ಎಂದರು.
ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳು ಶಿಕ್ಷಣ ವಂಚಿತರಾಗಿ ಅಧೋಗತಿಗೆ ತಲುಪುವ ಪರಿಸ್ಥಿತಿ ಬರಲಿದ್ದು, ಇದನ್ನು ಬೇರು ಸಹಿತ ಕಿತ್ತೊಗೆಯಬೇಕು. ಈ ಪದ್ದತಿಯನ್ನು ಹೋಟೆಲ್‌ಗಳು, ಗ್ಯಾರೇಜ್ ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ಕಾಣಬಹುದು. ಬಡತನ, ಪೋಷಕರಲ್ಲಿ ಮೌಢ್ಯತೆ, ಅರಿವಿನ ಕೊರತೆ, ಅಜ್ಞಾನ ಸೃಷ್ಟಿಯಾಗಿದೆ. ಜನರಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಿಕೊಡುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದ್ದೇ ಆದಲ್ಲಿ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಚಂದ್ರಯ್ಯ ಮಾತನಾಡಿ, ಜನರ ಅಜ್ಞಾನ ಮತ್ತು ಬಡತನವೇ ಇದಕ್ಕೆ ಮೂಲ ಕಾರಣವಾಗಿದೆ ಎಂದರು.ವಕೀಲರ ಸಂಘದ ಉಪಾಧ್ಯಕ್ಷ ಎಂ.ಸಿ. ನಟರಾಜು ಮಾತನಾಡಿ, ಪುಸ್ತಕ ಹಿಡಿಯುವ ಕೈ ಜಗತ್ತಿನಲ್ಲಿ ಏನನ್ನಾದರೂ ಸಾಧಿಸಬಹುದು. ಪ್ರಸ್ತುತ ಇಂತಹ ಬಾಲ ಕಾರ್ಮಿಕ ಪದ್ದತಿ ಎಲ್ಲಿಯಾದರೂ ಕಂಡು ಬಂದರೆ ತಕ್ಷಣ ಸಮೀಪದ ಪೊಲೀಸ್ ಠಾಣೆ, ನಮ್ಮ ಸಮಿತಿ ದೂರು ನೀಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.ಸಂಘದ ಕಾರ್ಯದರ್ಶಿ ಬಿ. ಮಲ್ಲಿಕಾರ್ಜುನಯ್ಯ, ಕಾರ್ಮಿಕ ನಿರೀಕ್ಷಕ ವೆಂಕಟೇಶ್‌ಬಾಬು, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಉಪ ಪ್ರಾಂಶುಪಾಲ ಉಮೇಶ್‌ಗೌಡ, ಆರಕ್ಷಕ ಸಿಬ್ಬಂದಿ ಚೇತನ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.